ADVERTISEMENT

ಮರಿಚೀಕೆಯಾದ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆ

ರಾಯಚೂರು, ಯಾದಗಿರಿ ಜಿಲ್ಲೆಗಳ ಶೈಕ್ಷಣಿಕ ವಲಯದಲ್ಲಿ ನಿರಾಶೆ

ನಾಗರಾಜ ಚಿನಗುಂಡಿ
Published 3 ಜುಲೈ 2019, 19:30 IST
Last Updated 3 ಜುಲೈ 2019, 19:30 IST
ವೆಂಕಟರಾವ್‌ ನಾಡಗೌಡ
ವೆಂಕಟರಾವ್‌ ನಾಡಗೌಡ   

ರಾಯಚೂರು: ಗುಲಬರ್ಗಾ ವಿಶ್ವವಿದ್ಯಾಲಯ ಬೇರ್ಪಡಿಸಿ ಯಾದಗಿರಿ ಮತ್ತು ರಾಯಚೂರು ಸೇರಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸುವುದಕ್ಕೆ ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಲು ವಿಳಂಬ ಮಾಡುತ್ತಿದೆ ಎನ್ನುವ ಮಾತು ಇವರೆಗೂ ಚಾಲ್ತಿಯಲ್ಲಿತ್ತು. ಆದರೆ, ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದರೂ ರಾಯಚೂರು ಜನರ ನಿರೀಕ್ಷೆ ಈಡೇರುತ್ತಿಲ್ಲ!

‘ವಿಶ್ವವಿದ್ಯಾಲಯ ಸ್ಥಾಪನೆಗೆ ಇಷ್ಟೊಂದು ಜರೂರತ್ತು ಏನಿದೆ’ ಎಂದು ಸರ್ಕಾರಕ್ಕೆ ಪ್ರಶ್ನೆ ಹಾಕಿ ಸುಗ್ರೀವಾಜ್ಞೆಯ ಕಡತವನ್ನು ರಾಜ್ಯಪಾಲರು ವಾಪಸ್‌ ಕಳುಹಿಸಿದ್ದಾರೆ. ಜೂನ್‌ ಎರಡನೇ ವಾರ ಕಡತ ವಾಪಸ್‌ ಬಂದಿದೆ. ರಾಜ್ಯಪಾಲರು ಕೇಳಿರುವ ಪ್ರಶ್ನೆಗೆ ಸೂಕ್ತ ಪ್ರತಿಕ್ರಿಯೆ ಸಿದ್ಧಪಡಿಸುವ ಕೆಲಸ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿಲ್ಲ’ ಎಂದು ರಾಯಚೂರಿನಲ್ಲಿ ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿಯು ಪ್ರತಿಭಟನೆ ಆರಂಭಿಸಿದೆ.

ವಿಧಾನ ಮಂಡಲ ಅಧಿವೇಶನ ಆರಂಭವಾಗುವ ಪೂರ್ವದಲ್ಲೆ ರಾಜ್ಯಪಾಲರಿಗೆ ಕಡತ ಕಳುಹಿಸಿ ಒಪ್ಪಿಗೆ ಪಡೆದರೆ ಮಾತ್ರ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶಾಕಾಶ ಸಾಧ್ಯವಾಗಲಿದೆ. ಜುಲೈ ಎರಡನೇ ವಾರ ಅಧಿವೇಶನ ಆರಂಭವಾದರೆ ಸುಗ್ರೀವಾಜ್ಞೆ ಕಡತ ಔಚಿತ್ಯವನ್ನು ಕಳೆದುಕೊಳ್ಳುತ್ತದೆ. ಮತ್ತೆ ಈ ವಿಷಯವನ್ನು ವಿಧಾನಮಂಡಲದ ಎರಡೂ ಮನೆಗಳಲ್ಲಿ ಚರ್ಚಿಸಿ ರಾಜ್ಯಪಾಲರಿಗೆ ಕಳುಹಿಸಿ ಒಪ್ಪಿಗೆ ಪಡೆಯುವ ಹೊತ್ತಿಗೆ ಸೆಪ್ಟೆಂಬರ್‌ ಶುರುವಾಗುತ್ತದೆ.

ADVERTISEMENT

ಸೆಪ್ಟೆಂಬರ್‌ನಲ್ಲಿ ಈಗಿರುವ ರಾಜ್ಯಪಾಲರ ಅವಧಿ ಪೂರ್ಣವಾಗುತ್ತಿದ್ದು, ಹೊಸದಾಗಿ ರಾಜ್ಯಪಾಲರು ಬರುವವರೆಗೂ ಕಡತವು ನನೆಗುದಿಗೆ ಬೀಳುತ್ತದೆ. ಇದಲ್ಲದೆ, ಹೊಸ ರಾಜ್ಯಪಾಲರಿಗೆ ಈ ವಿಷಯ ಮನವರಿಕೆ ಮಾಡಿಕೊಡುವ ಕೆಲಸವನ್ನು ಸರ್ಕಾರ ಮಾಡಬೇಕಾಗಬಹುದು. ಒಟ್ಟಾರೆ ಈ ಶೈಕ್ಷಣಿಕ ವರ್ಷವೂ ಕಾಲಹರಣದಲ್ಲೆ ಮುಗಿಯುತ್ತದೆ ಎನ್ನುವ ಆತಂಕವನ್ನು ಸಂಘ–ಸಂಸ್ಥೆಗಳ ಮುಖಂಡರು ಹೊರಹಾಕುತ್ತಿದ್ದಾರೆ.

ಎರಡೂವರೆ ವರ್ಷ ವಿಳಂಬ:2016ರ ಡಿಸೆಂಬರ್‌ ರಾಯಚೂರಿನಲ್ಲಿ ಆಯೋಜಿಸಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಅಂದು ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿ ಅವರು ಹೊಸ ವಿಶ್ವವಿದ್ಯಾಲಯ ಸ್ಥಾಪಿಸುವ ಸುಳಿವು ಕೊಟ್ಟಿದ್ದರು.

ಹಣಕಾಸು ಸಚಿವರೂ ಆಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017–18ನೇ ಸಾಲಿನ ಬಜೆಟ್‌ ಮಂಡನೆಯಲ್ಲಿ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಯನ್ನು ಮಾರ್ಚ್‌ನಲ್ಲಿ ಘೋಷಿಸಿದ್ದರು. ಅದರ ಬೆನ್ನಲ್ಲೆ ಶಿಕ್ಷಣ ತಜ್ಞರ ತಂಡವೊಂದು ಜುಲೈ 6, 2017ರಲ್ಲಿ ಯರಗೇರಾ ಸ್ನಾತಕೋತ್ತರ ಕ್ಯಾಂಪಸ್‌ಗೆ ಭೇಟಿ ನೀಡಿ ಸರ್ಕಾರಕ್ಕೆ ವರದಿಯೊಂದನ್ನು ನೀಡಿತ್ತು.

ಸರ್ಕಾರಕ್ಕೆ ಹೊರೆಯಿಲ್ಲ: ರಾಯಚೂರಿನ ಯರಗೇರಾದಲ್ಲಿ ಈಗಾಗಲೇ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಇರುವುದರಿಂದ ಹೊಸ ವಿಶ್ವವಿದ್ಯಾಲಯ ಸ್ಥಾಪನೆಗೆ ಹೆಚ್ಚಿನ ಹೊರೆ ಸರ್ಕಾರಕ್ಕೆ ಬೀಳುವುದಿಲ್ಲ. ತತ್‌ಕ್ಷಣಕ್ಕೆ ವಿಶ್ವವಿದ್ಯಾಲಯ ಆರಂಭಿಸುವುದಕ್ಕೆ ಬೇಕಾಗುವ ಎಲ್ಲ ಮೂಲ ಸೌಕರ್ಯಗಳು ಈಗಾಗಲೇ ಇವೆ.

‘ರಾಯಚೂರು ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳೆಲ್ಲವೂ ‘ಕೈಗೆ ಬಂದ ತುತ್ತು ಬಾಯಿಗೆ’ ಬರಲಿಲ್ಲ ಎನ್ನುವ ಗಾದೆ ಮಾತಿನಂತೆಯೇ ಆಗುತ್ತಿವೆ. ರಾಜ್ಯ ಬಜೆಟ್‌ನಲ್ಲಿ ಎರಡು ವರ್ಷಗಳ ಹಿಂದೆಯೆ ಘೋಷಿಸಿದ್ದ ವಿಶ್ವವಿದ್ಯಾಲಯ ಸ್ಥಾಪಿಸುವ ಯೋಜನೆ ಇಂದಿಗೂ ಕೈಗೂಡುತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳ ನಿರಾಸಕ್ತಿ ಮತ್ತು ಈ ಭಾಗದ ರಾಜಕಾರಣಿಗಳಿಗೆ ಅಭಿವೃದ್ಧಿಪರ ಕಾಳಜಿ ಇಲ್ಲ ಎನ್ನುವುದಕ್ಕೆ ಇದು ಸಾಕ್ಷಿ’ ಎನ್ನುವ ಅಸಮಾಧಾನ ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ.ರಜಾಕ್‌ ಉಸ್ತಾದ್‌ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.