ADVERTISEMENT

ಭಾರಿ ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು!

ಸಿಯಾತಾಲಾಬ್‌ ನಿವಾಸಿಗಳಿಗೆ ತಪ್ಪದ ಮಳೆಗಾಲದಲ್ಲಿ ಗೋಳು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 16:04 IST
Last Updated 8 ಸೆಪ್ಟೆಂಬರ್ 2022, 16:04 IST
ರಾಯಚೂರಿನಲ್ಲಿ ಬುಧವಾರ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದ ಸಿಯಾತಾಲಾಬ್‌ ಪ್ರದೇಶ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಜಾಗರಣೆ ಮಾಡಿದ್ದು, ಸಂಕಷ್ಟ ಎದುರಿಸುತ್ತಿರುವುದು ಗುರುವಾರ ಕಂಡುಬಂತು.
ರಾಯಚೂರಿನಲ್ಲಿ ಬುಧವಾರ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದ ಸಿಯಾತಾಲಾಬ್‌ ಪ್ರದೇಶ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಜಾಗರಣೆ ಮಾಡಿದ್ದು, ಸಂಕಷ್ಟ ಎದುರಿಸುತ್ತಿರುವುದು ಗುರುವಾರ ಕಂಡುಬಂತು.   

ರಾಯಚೂರು: ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಡೀ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಮಾಪಕದಲ್ಲಿ 16 ಮಿಲಿಮೀಟರ್‌ ದಾಖಲಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ರಾಯಚೂರು ನಗರದಲ್ಲಿ 59 ಮಿಲಿಮೀಟರ್‌ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಕೆಲವು ಬಡಾವಣೆಗಳು ಜಲಾವೃತವಾಗಿವೆ. ಸಿಯಾತಾಲಾಬ್‌, ಜಲಾಲನಗರ, ಕುಲಸುಂಬಿ ಕಾಲೋನಿ, ಯರಗೇರಾ ಲೇಔಟ್‌, ಹಾಜಿ ಕಾಲೋನಿ, ಸುಖಾಣಿ ಕಾಲೋನಿ ಕೊಳಗೇರಿಯಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಜಾಗರಣೆ ಮಾಡಿದ್ದಾರೆ.

ಮನೆಯಲ್ಲಿದ್ದ ಪಾತ್ರೆಗಳು, ಹೊದಿಕೆಗಳೆಲ್ಲ ಕೊಳಕು ನೀರಿನಿಂದ ಹಾಳಾಗಿದ್ದು, ಅಡುಗೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ ಅವರು ನಗರಸಭೆ ಅಧಿಕಾರಿಗಳೊಂದಿಗೆ ಜಲಾವೃತವಾದ ಬಡಾವಣೆಗಳಿಗೆ ಭೇಟಿನೀಡಿ, ಜನರ ಸಂಕಷ್ಟ ಆಲಿಸಿದರು. ಸಂತ್ರಸ್ತ ಜನರಿಗೆ ನಗರಸಭೆಯಿಂದ ಉಪಹಾರ ಮತ್ತು ಊಟದ ವ್ಯವಸ್ಥೆ ಮಾಡುವುದಕ್ಕೆ ಸೂಚಿಸಿದರು.

ರಾಜಕಾಲುವೆಯಲ್ಲಿ ಸಮರ್ಪಕವಾಗಿ ಮಳೆನೀರು ಹರಿದು ಹೋಗಲು ವ್ಯವಸ್ಥೆಯಿಲ್ಲದ ಕಾರಣ ಮಳೆನೀರು ಮನೆ ನುಗ್ಗುವ ಸಮಸ್ಯೆ ಪ್ರತಿವರ್ಷವೂ ಮರುಕಳಿಸುತ್ತಿದೆ. ಸಿಯಾತಾಲಾಬ್‌ನಲ್ಲಿ ರಾಜಕಾಲುವೆ ತಡೆಗೋಡೆಯು ಮಳೆನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಕಾರ್ಯವನ್ನು ನಗರಸಭೆಯಿಂದ ಮಾಡುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲೆಯಲ್ಲಿ 14.2 ಎಂ.ಎಂ ಮಳೆ: ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನವರೆಗೂ 14.2 ಮಿಲಿಮೀಟರ್‌ ಮಳೆಯಾಗಿದೆ.

ರಾಯಚೂರು ತಾಲ್ಲೂಕಿನಲ್ಲಿ ಅತಿಹೆಚ್ಚು 35.9 ಮಿಲಿಮೀಟರ್‌ ಮಳೆಯಾಗಿದೆ. ಸಿಂಧನೂರು ಮತ್ತು ಮಸ್ಕಿ ತಾಲ್ಲೂಕುಗಳಲ್ಲಿ 3.3 ಎಂಎಂ, ದೇವದುರ್ಗ ತಾಲ್ಲೂಕಿನಲ್ಲಿ 28.8 ಎಂ.ಎಂ., ಲಿಂಗಸುಗೂರು ತಾಲ್ಲೂಕಿನಲ್ಲಿ 7.1 ಎಂ.ಎಂ., ಮಾನ್ವಿ ತಾಲ್ಲೂಕಿನಲ್ಲಿ 12.8 ಎಂ.ಎಂ., ಸಿರವಾರ ತಾಲ್ಲೂಕಿನಲ್ಲಿ 8.4 ಎಂ.ಎಂ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.