ADVERTISEMENT

ವಿದ್ಯಾರ್ಥಿಗಳ ಆಂತರಿಕ ಶಕ್ತಿ ಗುರುತಿಸಿ: ಬಿ.ಕೆ.ನಂದನೂರು ಸಲಹೆ

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 12:38 IST
Last Updated 12 ಡಿಸೆಂಬರ್ 2018, 12:38 IST
ರಾಯಚೂರಿನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರು ಅವರು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನದ ಚಿತ್ರಗಳು ಬ್ಯಾನರ್ ಮತ್ತು ಕಾರ್ಡ್‌ಗಳನ್ನು ಅನಾವರಣಗೊಳಿಸಿದರು
ರಾಯಚೂರಿನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರು ಅವರು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನದ ಚಿತ್ರಗಳು ಬ್ಯಾನರ್ ಮತ್ತು ಕಾರ್ಡ್‌ಗಳನ್ನು ಅನಾವರಣಗೊಳಿಸಿದರು   

ರಾಯಚೂರು: ವಿದ್ಯಾರ್ಥಿಗಳ ಆಂತರಿಕ ಶಕ್ತಿಯನ್ನು ಬಡಿದೆಬ್ಬಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಈ ಮೂಲಕ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಿ ಹೊಸ ಹೊಸ ಅವಿಷ್ಕಾರಗಳ ಮುಖಾಂತರ ವಿದ್ಯಾಭ್ಯಾಸಕ್ಕೆ ಶಿಕ್ಷಕರು ಶ್ರಮ ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿ.ಕೆ. ನಂದನೂರ ಹೇಳಿದರು.

ನಗರದ ಕನ್ನಡ ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ವನಿತಾ ವಾಸವಿ ಸೇವಾ ಸಮಿತಿ, ರಾಜ್ಯ ಮಹಿಳಾ ಒಕ್ಕೂಟ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಏರ್ಪಡಿಸಿದ್ದ ‘ಚಿತ್ತ ಅರಳಿಸು ಚಿತ್ರ ಬಿಡಿಸು, 16 ಅಂಕ ಗಳಿಸು’ ಎನ್ನುವ ವಿಜ್ಞಾನದ ಚಿತ್ರಗಳು ಬ್ಯಾನರ್ ಮತ್ತು ಕಾರ್ಡ್‌ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಮಕ್ಕಳಿಗೆ ಸುಲಭವಾಗುವ ನಿಟ್ಟಿನಲ್ಲಿ ವಿಜ್ಞಾನದ ಎಲ್ಲಾ ಚಿತ್ರಗಳನ್ನು ಸಂಗ್ರಹಿಸಿ ಮಕ್ಕಳಿಗೆ ಪ್ರತಿದಿನ ಆ ಚಿತ್ರಗಳನ್ನು ತೋರಿಸುವುದರ ಮುಖಾಂತರ ಪಾಠ ಮಾಡಬೇಕು. ಮಕ್ಕಳು ಸುಲಭ ರೀತಿಯಲ್ಲಿ ಈ ಚಿತ್ರಗಳನ್ನು ನೆನಪಿಟ್ಟುಕೊಳ್ಳಲು ಈ ಬ್ಯಾನರ್‌ಗಳು ಬಹಳ ಅನುಕೂಲಕರವಾಗಿದೆ ಎಂದು ತಿಳಿಸಿದರು.

ADVERTISEMENT

ಮಕ್ಕಳು ಇಂತಹ ಅವಕಾಶವನ್ನು ಬಳಸಿಕೊಂಡು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಬೇಕು. ಜಿಲ್ಲೆಯ ಫಲಿತಾಂಶವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಿದೆ. ಈ ನಿಟ್ಟಿನಲ್ಲಿ ಗಣಿತ ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದಂತೆ ಫಲಿತಾಂಶ ಸುಧಾರಿಸುವ ಕೆಲಸ ಎಲ್ಲ ನಿಟ್ಟಿನಲ್ಲಿಯೂ ಆಗಬೇಕಿದೆ. ಈಗಾಗಲೇ ಅನೇಕ ರೀತಿಯ ಚಟುವಟಿಕೆಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದು ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಮಕ್ಕಳು ಉತ್ತಮ ಫಲಿತಾಂಶವನ್ನು ಪಡೆಯಬೇಕು ಎಂದು ಹೇಳಿದರು.

ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ ಸೈಯದ ಹಫಿಜುಲ್ಲಾ ರಾಜ್ಯ ಉಪಾಧ್ಯಕ್ಷ ಮಾತನಾಡಿ, ಜಿಲ್ಲೆಯ ಮಕ್ಕಳ ಫಲಿತಾಂಶ ಸುಧಾರಿಸಲು ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಅನೇಕ ರೀತಿಯ ಚಟುವಟಿಕೆಗಳನ್ನು ಯೋಜಿಸಲಾಗಿದೆ. ಮುಂದಿನ ಹಂತದಲ್ಲಿ ಮಕ್ಕಳಿಗೆ ಸುಲಭವಾಗಿ ಉತ್ತಿರ್ಣರಾಗಲು ಗಣಿತ ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಕ್ಕೆ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಸದ್ಯ ವಿಜ್ಞಾನದ ಚಿತ್ರಗಳ ಬ್ಯಾನರ್ ಮತ್ತು ಕಾರ್ಡ್‌ಗಳನ್ನು ಬಿಡುಗಡೆಗೊಳಿಸಲಾಗಿದೆ. ರಾಯಚೂರು ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಗಳಿಗೆ ಉಚಿತವಾಗಿ ಬ್ಯಾನರ್ ಮತ್ತು ಕಾರ್ಡ್‌ಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಈ ಕಾರ್ಯಕ್ಕೆ ಪೂರಕವಾಗಿ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಣ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ಮೂರು ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಿ ಅವರ ಮಾರ್ಗದರ್ಶನದಲ್ಲಿ ಈ ಒಂದು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ, ವನಿತಾ ವಾಸವಿ ಸೇವಾ ಸಮಿತಿಯ ಶ್ರೀಮತಿ ಅಂಜಲಿ, ನಿರ್ಮಲ ಚಾಗಿ, ಚೂಡಿ ಲಾವಣ್ಯ, ಬಿಜಿಎಸ್ ನ ಕಾರ್ಯದರ್ಶ ಬಸಪ್ಪ ಗತಿ, ವಿಜ್ಞಾನ ವಿಷಯದ ಶಿಕ್ಷಕರಾದ ವೀರೇಂದ್ರ ಪಾಟೀಲ, ವಿ.ಕೆ. ಜೋಶಿ, ರವೀಂದ್ರ ಕುರಿ, ಛಾಯಾ, ವೆಂಕಟೇಶ್ವರರಾವ್, ಶಿವಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.