ರಾಯಚೂರು: ‘ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (ಎಂಐಎಸ್) ಅಡಿಯಲ್ಲಿ ಬೆಲೆ ಕೊರತೆ ಪಾವತಿ (ಪಿಡಿಪಿ) ಯೋಜನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಉತ್ಪಾದನೆಯ ಶೇ 25ವರೆಗಿನ ವ್ಯಾಪ್ತಿಯೊಂದಿಗೆ ಕೆಂಪು ಮೆಣಸಿನಕಾಯಿ ಕ್ವಿಂಟಲ್‌ಗೆ ₹10,589 ಕನಿಷ್ಠ ಮಧ್ಯಸ್ಥಿಕೆ ಬೆಲೆ (ಎಂಐಪಿ) ನಿಗದಿಪಡಿಸಿದೆ' ಎಂದು ಸಂಸದ ಜಿ. ಕುಮಾರ ನಾಯಕ ತಿಳಿಸಿದರು.
‘ಬೆಂಬಲ ಬೆಲೆಗಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳಿಸಿತ್ತು. ಅದನ್ನು ಪರಿಗಣಿಸಿ ಕೇಂದ್ರ ಯೋಜನೆ ಜಾರಿಗೆ ತಂದಿದೆ. ರೈತರು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
‘ಕೇಂದ್ರ ಸರ್ಕಾರ ಆಂಧ್ರಪ್ರದೇಶದಂತೆ ಕರ್ನಾಟಕಕ್ಕೂ ಬೆಲೆ ಕೊರತೆ ಪಾವತಿ ಯೋಜನೆ ವಿಸ್ತರಣೆ ಮಾಡಿದೆ. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಇದ್ದಲ್ಲಿ (ಪಿಡಿಪಿ) ಯೋಜನೆಯಿಂದ ರೈತರ ಖಾತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ 50:50 ಅನುಪಾತದಲ್ಲಿ ನೀಡಲಾಗುತ್ತದೆ’ ಎಂದರು.
‘ಕೂಡಲೇ ರಾಜ್ಯ ಸರ್ಕಾರ ಈ ಯೋಜನೆ ಅನುಷ್ಠಾನ ತರಬೇಕು. ಜತೆಗೆ ತಂಡ ರಚಿಸಿ ರೈತರಿಗೆ ಯೋಜನೆಯ ಮಾಹಿತಿ ನೀಡಬೇಕು’ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೊಹಮ್ಮದ್ ಶಾಲಾಂ, ಪಾಲಿಕೆ ಸದಸ್ಯ ಜಯಣ್ಣ, ಕೆ. ಶಾಂತಪ್ಪ, ಶ್ರೀನಿವಾಸ ರೆಡ್ಡಿ, ಶಿವಮೂರ್ತಿ, ರುದ್ರಪ್ಪ ಅಂಗಡಿ, ಅಮರೇಗೌಡ ಹಂಚಿನಾಳ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.