ADVERTISEMENT

ಪ್ರಾದೇಶಿಕ ಭಾಷೆಯ ಕಥೆಗಳಿಗೆ ಹೆಚ್ಚು ಸ್ಪಂದನೆ: ಅಮರೇಶ ನುಗುಡೋಣಿ ಅಭಿಮತ

‘ಕರುನಾಡ ಕಥಾ ಕಣಜ’ ಲೋಕಾರ್ಪಣೆ ಸಮಾರಂಭ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 5:06 IST
Last Updated 8 ಮಾರ್ಚ್ 2021, 5:06 IST
ಸಿಂಧನೂರಿನ ಸಂಗಮ ಪ್ಯಾಲೆಸ್‍ನಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಕಥಾಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ‘ಕರುನಾಡ ಕಥಾ ಕಣಜ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು
ಸಿಂಧನೂರಿನ ಸಂಗಮ ಪ್ಯಾಲೆಸ್‍ನಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಕಥಾಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ‘ಕರುನಾಡ ಕಥಾ ಕಣಜ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು   

ಸಿಂಧನೂರು: ‘ಕನ್ನಡ ಸಾಹಿತ್ಯದಲ್ಲಿ ಈಚಿನ ವರ್ಷಗಳಲ್ಲಿ ಪ್ರಾದೇಶಿಕ ಭಾಷೆಯ ಕಥಾ ಸಂಕಲನಗಳಿಗೆ ಓದುಗರಿಂದ ಹೆಚ್ಚು ಸ್ಪಂದನೆ ದೊರೆಯುತ್ತಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಪಕ ಡಾ.ಅಮರೇಶ ನುಗುಡೋಣಿ ಅಭಿಪ್ರಾಯಪಟ್ಟರು.

ರುದ್ರಗೌಡ ಪಾಟೀಲ ಪ್ರತಿಷ್ಠಾನ ಹಾಗೂ ಆಕ್ಸಫರ್ಡ್‌ ಫೌಂಡೇಶನ್ ಸಹಯೋಗದಲ್ಲಿ ರುದ್ರಗೌಡ ಪಾಟೀಲ ಸ್ಮರಣಾರ್ಥ ನಗರದ ಸಂಗಮ ಪ್ಯಾಲೆಸ್‍ನಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಮುಕ್ತ ಕಥಾಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ‘ಕರುನಾಡ ಕಥಾ ಕಣಜ’ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಕ್ಕೆ ಕಥೆಗಳನ್ನು ಆಯ್ಕೆ ಮಾಡಬೇಕಾಗಿತ್ತು. ಇಬ್ಬರು ಕಥೆಗಾರರು ಸಮಾನ ಅಂಕ ಪಡೆದರು. ಯಾರನ್ನು ಪ್ರಥಮ ಬಹುಮಾನಕ್ಕೆ ಆಯ್ಕೆ ಮಾಡಬೇಕು ಎನ್ನುವುದು ಗೊಂದಲಕ್ಕೆ ಕಾರಣವಾಯಿತು ಎಂದರು.

ADVERTISEMENT

ಕಥೆಗಾರರು ಕಥಾ ವಸ್ತು, ವಿಷಯ ನಿರೂಪಣೆ, ಕಥೆಯ ವಿನ್ಯಾಸ, ತಂತ್ರ, ಆರಂಭ, ಮುಕ್ತಾಯ ಇಂಥ ಎಲ್ಲಾ ಸಂಗತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವ್ಯಾಕರಣ ದೋಷವಾಗದಂತೆ ಕಥೆ ಕಟ್ಟಬೇಕಾಗಿದೆ ಎಂದರು.

ರುದ್ರಗೌಡ ಪಾಟೀಲ ಪ್ರತಿಷ್ಠಾನದ ಮುಖ್ಯಸ್ಥ ಡಾ.ಚನ್ನನಗೌಡ ಪಾಟೀಲ ವೈದ್ಯರಾಗಿದ್ದರೂ ಸಾಹಿತ್ಯ ಚಟುವಟಿಕೆಗಳ ಕುರಿತು ಆಸಕ್ತಿ ವಹಿಸಿರುವುದು ವಿಶೇಷ. ವೈದ್ಯರಿಗೆ ಸಾಹಿತ್ಯದ ಜ್ಞಾನವಿದ್ದರೆ ಅವರ ವೃತ್ತಿಗೆ ಇನ್ನು ಹೆಚ್ಚು ಸಹಾಯಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ಬಾರಿ ರಾಜ್ಯ ಮಟ್ಟದ ಕಥಾ ಸ್ಪರ್ಧೆಯನ್ನು ಹಮ್ಮಿಕೊಂಡ ಈ ಸಂಸ್ಥೆ ಮುಂಬರುವ ವರ್ಷದಲ್ಲಿ ಸಾಹಿತ್ಯ ಕೃತಿಗಳಿಗೆ, ಸಾಹಿತಿಗಳಿಗೆ ಪ್ರೋತ್ಸಾಹ ನೀಡುವತ್ತ ಗಮನಹರಿಸಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ರುದ್ರಗೌಡ ಪ್ರತಿಷ್ಠಾನದ ಅಧ್ಯಕ್ಷ ಡಾ.ಚನ್ನನಗೌಡ ಪಾಟೀಲ ಮಾತನಾಡಿ,‘ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುತ್ತ ಬಂದ ನನಗೆ ಕಥಾ ಸ್ಪರ್ಧೆ ಕಾರ್ಯಕ್ರಮ ಹೊಸ ಅನುಭವ ನೀಡಿದೆ. ಮುಂದಿನ ದಿನಗಳಲ್ಲಿ ಯುವ ಕಥೆಗಾರರಿಗೆ ಕಥಾ ಕಮ್ಮಟ ಏರ್ಪಡಿಸಲಾಗುವುದು’ ಎಂದು ಹೇಳಿದರು.

ಗಂಗಾವತಿ ಸರ್ಕಾರಿ ಪದವಿ ಕಾಲೇಜ ಪ್ರಾಧ್ಯಾಪಕ ಡಾ.ದೇವೇಂದ್ರಪ್ಪ ಜಾಜಿ, ಕರ್ನಾಟಕ ದಲಿತ ಕಲಾ ಅಕಾಡೆಮಿ ಮಾಜಿ ಸದಸ್ಯ ದೇವೇಂದ್ರ, ಆಕ್ಸಫರ್ಡ್ ಕಾಲೇಜ್ ಅಧ್ಯಕ್ಷ ಸತ್ಯಾನಾರಾಯಣ ಶ್ರೇಷ್ಠಿ, ಸಾಹಿತಿ ಶಾಶ್ವತಯ್ಯಸ್ವಾಮಿ ಮುಕ್ಕುಂದಿಮಠ ಮಾತನಾಡಿದರು.

ಯದ್ದಲದೊಡ್ಡಿ ಮಹಾಲಿಂಗ ಮಹಾಸ್ವಾಮಿ, ರಂಭಾಪುರಿ ಖಾಸಾ ಶಾಖಾಮಠದ ಸೋಮನಾಥ ಶಿವಾಚಾರ್ಯ ಮತ್ತು ಮಸ್ಕಿಯ ವರರುದ್ರಮುನಿ ಮಹಾಸ್ವಾಮಿ ಸಾನ್ನಿಧ್ಯ ವಹಿಸಿದ್ದರು.

ಉಪನ್ಯಾಸಕರಾದ ನಾಗರಾಜ, ರಾಮರೆಡ್ಡಿ ಹುಡಾ ಅವರು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.