ADVERTISEMENT

ರಾಯಚೂರು: ದೂಳಿನಲ್ಲಿ ಮುಳುಗಿದ ಟಾರ್‌ ರಸ್ತೆಗಳು

ಹಾಳಾಗಿರುವ ರಾಜ್ಯ ಹೆದ್ದಾರಿ, ನಗರದ ರಸ್ತೆಗಳ ನಿರ್ವಹಣೆ ಮಾಡುವಲ್ಲಿಯೂ ಅಧಿಕಾರಿಗಳು ವಿಫಲ: ಸ್ಥಳೀಯರ ಅಸಮಾಧಾನ

ನಾಗರಾಜ ಚಿನಗುಂಡಿ
Published 6 ಫೆಬ್ರುವರಿ 2023, 7:03 IST
Last Updated 6 ಫೆಬ್ರುವರಿ 2023, 7:03 IST
ರಾಯಚೂರಿನ ನವೋದಯ ಕ್ಯಾಂಪಸ್‌ ಎದುರು ರಾಷ್ಟ್ರೀಯ ಹೆದ್ದಾರಿ ಮಣ್ಣಿನಿಂದ ಆವರಿಸಿಕೊಂಡಿರುವುದು
ರಾಯಚೂರಿನ ನವೋದಯ ಕ್ಯಾಂಪಸ್‌ ಎದುರು ರಾಷ್ಟ್ರೀಯ ಹೆದ್ದಾರಿ ಮಣ್ಣಿನಿಂದ ಆವರಿಸಿಕೊಂಡಿರುವುದು   

ರಾಯಚೂರು: ನಗರದ ಅನೇಕ ಕಡೆಗಳಲ್ಲಿ ನೂತನವಾಗಿ ನಿರ್ಮಿಸಿರುವ ಟಾರ್‌ ಹಾಗೂ ರಸ್ತೆಗಳು ಮಣ್ಣು ತುಂಬಿದ್ದು, ಮಣ್ಣು ತೆರವುಗೊಳಿಸುವ ಕಾರ್ಯಕ್ಕೆ ಸ್ಥಳೀಯ ಸಂಸ್ಥೆಗಳು ಮುಂದಾಗುತ್ತಿಲ್ಲ.

ಒಳ್ಳೆಯ ಸಿಸಿ ರಸ್ತೆ ಹಾಗೂ ಟಾರ್‌ ರಸ್ತೆಗಳನ್ನು ನಿರ್ಮಿಸಿ ಅದರ ಬಾಹುಗಳಲ್ಲಿ ಮುರಂ ತಂದು ಸುರಿಯಲಾಗಿದೆ. ಮುರಂ ಮೇಲೆ ರೂಲರ್‌ ಓಡಿಸಿ ಗಟ್ಟಿ ಮಾಡದೆ ಹಾಗೇ ಬಿಡಲಾಗಿದೆ. ಅದೇ ಮಣ್ಣು ರಸ್ತೆ ತುಂಬೆಲ್ಲ ಆವರಿಸಿಕೊಂಡು ಹೊಸ ಸಂಕಷ್ಟ ಸೃಷ್ಟಿಸಿದೆ. ಕಚ್ಚಾರಸ್ತೆಗಳಿಗಿಂತ ಹೆಚ್ಚು ದೂಳು ಹೊಸ ರಸ್ತೆಗಳಲ್ಲಿ ಆವರಿಸಿಕೊಂಡಿದೆ. ನಗರದ ರಸ್ತೆಗಳ ನಿರ್ವಹಣೆ ನೋಡಬೇಕಿರುವ ನಗರಸಭೆಯನ್ನು ಎಚ್ಚರಿಸಿದರೂ ಕೆಲಸಗಳಾಗುತ್ತಿಲ್ಲ.

ಆಶಾಪೂರ ಮಾರ್ಗದಲ್ಲಿ ಎಫ್‌ಸಿಐ ಗೋದಾಮಿನಿಂದ ರಾಜಾಮಾತಾ ದೇವಸ್ಥಾನದವರೆಗೂ ಇತ್ತೀಚೆಗೆ ಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೆ, ದೂಳಿನ ಸಮಸ್ಯೆ ಮಾತ್ರ ದೂರವಾಗಿಲ್ಲ.

ADVERTISEMENT

ಸಿ.ಸಿ ರಸ್ತೆ ಅಕ್ಕಪಕ್ಕ ಹೊಸ ನಮೂನೆಯ ಕೆಂಪುಮಣ್ಣು ತಂದು ಸುರಿಯಲಾಗಿದೆ. ಅದನ್ನು ಗಟ್ಟಿಗೊಳಿಸುವ ಮೂಲಕ ಅನುಕೂಲ ಮಾಡುತ್ತಿಲ್ಲ. ಗಂಜ್‌ ವೃತ್ತದಿಂದ ಟಿಪ್ಪು ಸುಲ್ತಾನ್‌ ವೃತ್ತ ಹಾಗೂ ಜಿಲ್ಲಾ ಕೋರ್ಟ್‌ ಮುಂಭಾಗದವರೆಗೂ ಎರಡು ಬದಿಗಳಲ್ಲಿ ಹೆದ್ದಾರಿಯುದ್ದಕ್ಕೂ ಸುಮಾರು ಎರಡು ಮೀಟರ್‌ನಷ್ಟು ಹೆದ್ದಾರಿಯಲ್ಲಿ ಮಣ್ಣು ವಿಸ್ತರಿಸಿದೆ. ಬೈಕ್‌ ಸವಾರರು, ನಡೆದುಕೊಂಡು ಹೋಗುವವರು ಹಾಗೂ ತೆರೆದ ವಾಹನಗಳಲ್ಲಿ ಸಂಚರಿಸುವ ಜನರೆಲ್ಲರೂ ಕಣ್ಣು ಉಜ್ಜಿಕೊಂಡು ಮುನ್ನೆಡೆಯುವ ಸ್ಥಿತಿ ಇದೆ.

ನಗರಸಭೆ ಕಚೇರಿ ಪಕ್ಕದಿಂದ ಜಿಲ್ಲಾಧಿಕಾರಿ ಕಚೇರಿಗೆ ತಲುಪುವ ಮಾರ್ಗವು ತೀರಾ ಹೊಸದು. ಈಗಾಗಲೇ ಎರಡು ಬದಿಗಳಲ್ಲಿ ಮಣ್ಣು ಆವರಿಸಿಕೊಂಡು ರಸ್ತೆ ಮುಚ್ಚಿಹೋಗಿದ್ದು, ತಳ್ಳಗಾಡಿ ವ್ಯಾಪಾರಿಗಳನ್ನು ಕೈಬೀಸಿ ಕರೆಯುವಂತಿದೆ. ಮಣ್ಣುಮುಚ್ಚಿದ ಕಡೆಗಳಲ್ಲಿ ವಾಹನಗಳು ಸಂಚರಿಸುವುದಿಲ್ಲ. ವಾಹನಗಳು ಸಂಚರಿಸದ ಕಡೆಗಳಲ್ಲಿ ಅತಿಕ್ರಮಣ ಶುರುವಾಗುತ್ತಿದೆ. ರಸ್ತೆಗಳ ಮೇಲಿನ ದೂಳು ಎತ್ತುವುದಕ್ಕೆ ನಗರಸಭೆಯಿಂದ ಹೊಸ ಯಂತ್ರ ತರಲಾಗಿತ್ತು. ಆರಂಭ ಕೆಲವೇ ದಿನಗಳಲ್ಲಿ ಅದು ದುರಸ್ತಿ ಬಿದ್ದಿದ್ದು, ಇದುವರೆಗೂ ಕೆಲಸಕ್ಕೆ ಬಂದಿಲ್ಲ. ಬಹುಲಕ್ಷ ಹಣ ವೆಚ್ಚ ಮಾಡಲಾಗಿದೆ. ಪೌರ ಕಾರ್ಮಿಕರನ್ನು ನಿಯೋಜಿಸಿ ಮಣ್ಣು ತೆರವುಗೊಳಿಸುವ ಕೆಲಸವನ್ನು ನಗರಸಭೆ ಅಧಿಕಾರಿಗಳು ಕೂಡಾ ಮಾಡುತ್ತಿಲ್ಲ.

ನವೋದಯ ಮೆಡಿಕಲ್‌ ಕ್ಯಾಂಪಸ್‌ ಎದುರು ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ಅರ್ಧದಷ್ಟು ಭಾಗ ಈಗಾಗಲೇ ಮಣ್ಣಿನಲ್ಲಿ ಮುಚ್ಚಿಹೋಗಿದೆ. ಭಂಗಿಕುಂಟಾ ರಸ್ತೆಯು ಮಣ್ಣು ಆವರಿಸಿಕೊಂಡು ಕಿರಿದಾಗಿದೆ.

ಕಚ್ಚಾರಸ್ತೆಗಳಲ್ಲಿ ವಾಹನಗಳು ಸಂಚರಿಸುವುದು ದುಸ್ತರ ಎನ್ನುವ ಕಾರಣಕ್ಕಾಗಿ ಪಕ್ಕ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಸಮಸ್ಯೆಗೆ ಸಂಪೂರ್ಣ ಪರಿಹಾರವಾಗುವ ಬದಲು ಅರ್ಧ ಉದ್ದೇಶ ಮಾತ್ರ ಈಡೇರುತ್ತಿದೆ. ದೂಳಿನ ಸಮಸ್ಯೆ ಮಾತ್ರ ಹಾಗೆಯೇ ಇದೆ.

ಕಿತ್ತು ಹೋಗಿದೆ ರಾಜ್ಯ ಹೆದ್ದಾರಿ

ಲಿಂಗಸುಗೂರು: ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪಟ್ಟಣದ ಪ್ರದೇಶ ಸಂಪರ್ಕಿಸುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು 5 ಕಿಮೀ ವ್ಯಾಪ್ತಿ ರಸ್ತೆಗಳನ್ನು ಸ್ಥಳೀಯ ಸಂಸ್ಥೆಗಳ ನಿರ್ವಹಣೆಗೆ ತೆಗೆದುಕೊಂಡಿದ್ದೇವೆ ಎಂದು ಘೋಷಿಸಲಾಗಿತ್ತು. ಇದರ ಪರಿಣಾಮ ಮೇಲುಸ್ತುವಾರಿ ಮತ್ತು ನಿರ್ವಹಣೆಯಿಲ್ಲದೆ ಒಳ್ಳೆಯ ರಸ್ತೆಗಳೆಲ್ಲವೂ ದೂಳು ತುಂಬಿಕೊಂಡಿವೆ.

ಪ್ರಮುಖ ರಸ್ತೆಗಳ ನಿರ್ವಹಣೆ ತಮಗೆ ಸಂಬಂಧಿಸಿಲ್ಲ ಎಂದು ಲೊಕೋಪಯೋಗಿ ಇಲಾಖೆ ಸೇರಿದಂತೆ ಇತರೆ ಇಲಾಖೆಗಳು ಮೌನ ವಹಿಸಿವೆ. ಲಿಂಗಸುಗೂರು ಪುರಸಭೆ ಕೇಂದ್ರ ಸ್ಥಳ ಸಂಪರ್ಕಿಸುವ ಜೇವರ್ಗಿ ಚಾಮರಾಜ ನಗರ ಮತ್ತು ಬೆಳಗಾವಿ ರಾಯಚೂರು ಹೆದ್ದಾರಿ ರಸ್ತೆಗಳ ನಿರ್ವಹಣೆ ವೈಫಲ್ಯತೆಯಿಂದ ಪಟ್ಟಣದ ಬಹುತೇಕ ರಸ್ತೆಗಳು ತೆಗ್ಗು ಗುಂಡಿ, ಡಾಂಬರೀಕರಣ ಕಿತ್ತುಹೋಗಿ ಕಲ್ಲು ಮಣ್ಣು ತುಂಬಿಕೊಂಡ ರಸ್ತೆಗಳಲ್ಲಿ ವಾಹನ ಸಂಚರಿಸುವಂತಾಗಿದೆ. ವಾಹನಗಳ ದೂಳಿನಿಂದ ಪಟ್ಟಣದ ಬಹುತೇಕ ಪ್ರದೇಶಗಳು ರೋಗಗ್ರಸ್ಥ ಪ್ರದೇಶಗಳಾಗಿ ಮಾರ್ಪಟ್ಟಿವೆ.

ಪಟ್ಟಣದ ಬಸವಸಾಗರ ವೃತ್ತ, ಬಸ್‍ ನಿಲ್ದಾಣ ವೃತ್ತ, ದುರ್ಗಾ ಹೊಟೆಲ್‍ ವೃತ್ತ ಸೇರಿದಂತೆ ಬೆಂಗಳೂರು ಬೈಪಾಸ್‍ ರಸ್ತೆಗಳು ಸೇರಿದಂತೆ ಇತರೆ ಪ್ರಮುಖ ರಸ್ತೆಗಳು ಭಾಗಶಃ ಮೇಲುಸ್ತುವಾರಿ ಮತ್ತು ನಿರ್ವಹಣೆ ನಿರ್ಲಕ್ಷ್ಯದಿಂದ ಹಾಳಾಗಿ ಹೋಗಿವೆ. ಸರ್ಕಾರ ವಿಶೇಷ ಅನುದಾನ ನೀಡಿ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಮುಂದಾಗಬೇಕು’ ಎಂದು ಹಿರಿಯ ನಾಗರಿಕ ಜಾಫರಸಾಬ ಫೂಲವಾಲೆ ಒತ್ತಾಯಿಸಿದ್ದಾರೆ.

ಕಾಮಗಾರಿ ವಿಳಂಬ: ರಸ್ತೆ ದೂಳುಮಯ

ಮಾನ್ವಿ: ಪಟ್ಟಣದ ಕೋನಾಪುರಪೇಟೆಯಲ್ಲಿ ಸಾರ್ವಜನಿಕ ಆಸ್ಪತ್ರೆ ಕಡೆಗೆ ತೆರಳುವ ಚೀಕಲಪರ್ವಿ ರಸ್ತೆ ಹಾಗೂ ಮಹರ್ಷಿ ವಾಲ್ಮೀಕಿ ವೃತ್ತದಿಂದ ಕರಡಿಗುಡ್ಡ ಗ್ರಾಮದ ಕಡೆಗೆ ತೆರಳುವ ರಸ್ತೆಗಳಲ್ಲಿ ಸಂಚರಿಸುವ ಸಾರ್ವಜನಿಕರು ದೂಳಿನ ಕಾರಣದಿಂದ ತೊಂದರೆ ಅನುಭವಿಸುವಂತಾಗಿದೆ. ಚೀಕಲಪರ್ವಿ ರಸ್ತೆ ಅಭಿವೃದ್ಧಿ ಕಾಮಗಾರಿ ನಿರ್ವಹಣೆಯಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿಳಂಬ ಧೋರಣೆ, ಅಪೂರ್ಣ ಕಾಮಗಾರಿಯಿಂದಾಗಿ ಈ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಲೇ ರಸ್ತೆ ಅಕ್ಕಪಕ್ಕದಲ್ಲಿ ದೂಳು ಆವರಿಸುತ್ತದೆ.

ಕರಡಿಗುಡ್ಡ ರಸ್ತೆಯ ಹಲವು ಕಡೆ ತಗ್ಗು ಗುಂಡಿಗಳು ಇರುವ ಕಾರಣ ವಾಹನ ಸವಾರರು ಸುಗಮ ಸಂಚಾರಕ್ಕೆ ಪರದಾಡಿದರೆ, ವಾಹನಗಳ ಸಂಚಾರದಿಂದ ಉಂಟಾಗುತ್ತಿರುವ ದೂಳಿನ ಸಮಸ್ಯೆ ರಸ್ತೆ ಪಕ್ಕದ ಅಂಗಡಿಗಳ ಮಾಲೀಕರು, ಹಣ್ಣು ತರಕಾರಿ ವ್ಯಾಪಾರಿಗಳು ತೊಂದರೆ ಅನುಭವಿಸುವಂತಾಗಿದೆ. ಈ ರಸ್ತೆಗಳ ದೂಳಿನ ಸಮಸ್ಯೆ ನಿವಾರಣೆಗೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕು. ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಮನವಿ.

ಮುಚ್ಚಿದ ಮಣ್ಣು ತೆರವು ಯಾವಾಗ?

ಸಿರವಾರ: ಪಟ್ಟಣದ ಮುಖ್ಯರಸ್ತೆಯು ದೂಳಿನಿಂದ ಮುಚ್ಚಿಹೋಗಿದ್ದು, ರಸ್ತೆ ಬದಿ ವ್ಯಾಪಾರಿಗಳು, ವಾಹನ ಸವಾರರು, ಪಾದಚಾರಿಗಳ ಸಂಚರಿಸಲು ತೊಂದರೆ ಅನುಭವಿಸುತ್ತಿದ್ದು, ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಪಟ್ಟಣದ ಮುಖ್ಯರಸ್ತೆಯುದ್ದಕ್ಕೂ ವ್ಯಾಪಾರ ಮಳಿಗೆಗಳಿದ್ದು, ಎರಡು ಬದಿಯಲ್ಲಿ ರಸ್ತೆಯು ಸಂಪೂರ್ಣ ಮಣ್ಣಿನಿಂದ ತುಂಬಿದೆ.

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ದೂಳೆತ್ತುವ ಯಂತ್ರವಿದ್ದು, ಆಗೊಮ್ಮೆ ಈಗೊಮ್ಮೆ ಎನ್ನುವಂತೆ ದೂಳು ತೆಗೆಯಲಾಗುತ್ತದೆ. ದೂಳು ತೆಗೆದ ವಾರದೊಳಗೆ ಎಂದಿನಂತೆ ಮಣ್ಣು ತುಂಬಿಹೋಗುತ್ತದೆ. ಪೌರ ಕಾರ್ಮಿಕರ ಕೊರತೆಯಿಂದಾಗಿ ದೂಳೆತ್ತಲು ತೊಂದರೆಯಾಗುತ್ತದೆ ಎಂದು ಪಂಚಾಯಿತಿ ಅಧಿಕಾರಿಗಳು ಹೇಳುವ ಮಾತು ಸಾಮಾನ್ಯವಾಗಿದೆ.

ಡಾಂಬರೀಕರಣ ಕಾಣದ ರಸ್ತೆ: ಪಟ್ಟಣದ ಬಸವವೃತ್ತದಿಂದ ದೇವದುರ್ಗಾ ರಸ್ತೆಯ 200 ಮೀಟರ್ ರಸ್ತೆಯು ಕೆಲ ವರ್ಷಗಳಿಂದ ಡಾಂಬರಿಕರಣ ಕಾಣದೇ ಮರಂ ರಸ್ತೆಯಾಗಿರುವ ಕಾರಣ ಪಕ್ಕದ ವ್ಯಾಪಾರಿಗಳ ವಾಹನ ಸವಾರರು ಹಲವು ವರ್ಷಗಳಿಂದ ಸಂಕಷ್ಟ ಅನುಭವಿಸುವುದು ತಪ್ಪಿಲ್ಲ.

ಮರಳು ಸಾಗಾಟದಿಂದ ದೂಳು

ದೇವದುರ್ಗ: ಪಟ್ಟಣದ ಮುಖ್ಯ ರಸ್ತೆಯಲ್ಲಿ ಮರಳು ಸಾಗಾಟ ವಾಹನಗಳ ಓಡಾಟದಿಂದಾಗಿ ಸಮಸ್ಯೆ ಸೃಷ್ಟಿಯಾಗಿದೆ. ಅಲ್ಲಲ್ಲಿ ಮರಳು ಚೆಲ್ಲುತ್ತಿದ್ದು, ಪುರಸಭೆ ಸಿಬ್ಬಂದಿ ತೆರವುಗೊಳಿಸಿದರೂ ನಿಯಂತ್ರಣವಾಗುತ್ತಿಲ್ಲ.

ಪಟ್ಟಣದ ಕೊಪ್ಪರ ಕ್ರೀಸ್‌ನಿಂದ ಇಡೀ ಜಾಲಹಳ್ಳಿ ಚೌಕ್, ಹೊಸ ಬಸ್ ನಿಲ್ದಾಣ, ನಗರಗುಂಡ ಕ್ರಸ್, ಎಪಿಎಂಸಿ ಸೇರಿದಂತೆ ವಿವಿಧೆಡೆ ರಸ್ತೆಗಳಲ್ಲಿ ಹಂಪ್ಸ್‌ಗಳಿರುವುದರಿಂದ ಮತ್ತು ಓವರ್ ಲೋಡಾಗಿ ಬರುವ ಮರಳುಗಾಡಿಯಿಂದ ದೂಳು ಹೊರಚೆಲ್ಲುತ್ತಿದೆ.

ಬೈಕ್ ಸವಾರರಿಗೆ ಮತ್ತು ಬೀದಿಯಲ್ಲಿನ ಹಣ್ಣು, ತರಕಾರಿ, ಮತ್ತು ಹೂ ವ್ಯಾಪಾರಸ್ಥರ ಆರೋಗ್ಯ ಮೇಲೆಯೂ ತೀವ್ರ ತೊಂದರೆ ಆಗುತ್ತಿದೆ. ಪಟ್ಟಣದ ಪುರಸಭೆ ಸಿಬ್ಬಂದಿ ಪಟ್ಟಣದ 23 ವಾರ್ಡುಗಳನ್ನು ಸ್ವಚ್ಛಗೊಳಿಸುವುದು ಜತೆಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮರಳು ಬಳೆದು ದೂಳಿನಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

‘ರಸ್ತೆ ಮೇಲೆ ಮರಳು ಬಳೆದು ದೂಳಿನಿಂದ ನಮಗೆ ಅಲರ್ಜಿಯಾಗುತ್ತಿದೆ. ದೂಳಿನ ಕೆಲಸ ಮಾಡದಂತೆ ಡಾಕ್ಟರ್‌ ಸೂಚಿಸಿದ್ದಾರೆ‘ ಎಂದು ಪುರಸಭೆ ಸ್ವಚ್ಛತಾ ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಿದ್ದಾರೆ.

ಕೊನೆಯಾಗದ ಗೋಳು

ಮಸ್ಕಿ: ಪಟ್ಟಣದ ಕನಕವೃತ್ತದಿಂದ ಅಗಸಿವರೆಗಿನ ಹಾಗೂ ಅಶೋಕ‌ ವೃತ್ತದಿಂದ ಸಂತೆ ಬಜಾರನ ಪ್ರಮುಖ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳೆಲ್ಲವೂ ದೂಳಿನಲ್ಲಿ ಮುಳುಗಿವೆ.

ಮುಖ್ಯ ಬಜಾರ ಸೇರಿದಂತೆ ಪ್ರಮುಖ ರಸ್ತೆಗಳ ಅಕ್ಕಪಕ್ಕದಲ್ಲಿ ವಾಣಿಜ್ಯ ಮಳೆಗೆ ಹಾಗೂ ಮನೆ ಕಟ್ಟಲಾಗುತ್ತಿದ್ದು‌ ತರ ತೋಡಿದ ಮಣ್ಣು, ಮರಳು ರಸ್ತೆ ಮೇಲೆ ಹಾಕುತ್ತಿದ್ದಾರೆ. ಹೆಚ್ಚಿನ ವಾಹನಗಳ ಓಡಾಟದಿಂದ ಈ ರಸ್ತೆಗಳು ದೂಳು ತುಂಬಿ ಅಸ್ತಾಮ, ಅಲರ್ಜಿ ಅಂತಹ ರೋಗಗಳಿಗೆ ಕಾರಣವಾಗಿವೆ.

ಹಳೆಯ ಬಸ್ ನಿಲ್ದಾಣದ ರಾಷ್ಟ್ರೀಯ ಹೆದ್ದಾರಿ‌ ಕೂಡಾ ದೂಳಿನಿಂದ ಮುಕ್ತವಾಗಿಲ್ಲ.‌ ರಸ್ತೆಯ ಮೇಲಿನ‌ ಮಣ್ಣು ಬಳಿದು ದೂಳು ಮುಕ್ತ ಪಟ್ಟಣವನ್ನಾಗಿಸಲು ಪುರಸಭೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಆದರೆ, ರಸ್ತೆ ಮೇಲೆ‌ ಮಣ್ಣು, ಮರಳು ಹಾಕದಂತೆ ತಡೆಯುವಲ್ಲಿ ಪುರಸಭೆ ಆಡಳಿತ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.