ADVERTISEMENT

ಸ್ಥಳೀಯರಿಂದಲೇ ರಸ್ತೆ ದುರಸ್ತಿ

ಲಿಂಗಸುಗೂರು: ಆಶ್ರಯ ಬಡಾವಣೆಯ ರಸ್ತೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 3:13 IST
Last Updated 19 ಅಕ್ಟೋಬರ್ 2020, 3:13 IST
ಲಿಂಗಸುಗೂರು ಪುರಸಭೆ ವ್ಯಾಪ್ತಿ ಆಶ್ರಯ ಬಡಾವಣೆಯ ರಸ್ತೆಯನ್ನು ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡಿಕೊಳ್ಳುತ್ತಿರುವ ನಾಗರಿಕರು
ಲಿಂಗಸುಗೂರು ಪುರಸಭೆ ವ್ಯಾಪ್ತಿ ಆಶ್ರಯ ಬಡಾವಣೆಯ ರಸ್ತೆಯನ್ನು ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡಿಕೊಳ್ಳುತ್ತಿರುವ ನಾಗರಿಕರು   

ಲಿಂಗಸುಗೂರು: ಗುರುಗುಂಟಾ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಪುರಸಭೆ ವ್ಯಾಪ್ತಿ ಆಶ್ರಯ ಬಡಾವಣೆ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳ ರಸ್ತೆ ಅಭಿವೃದ್ಧಿ ಇರಲಿ ಅಗತ್ಯ ಸೌಲಭ್ಯಗಳು ಮರೀಚಿಕೆಯಾಗಿವೆ. ‌

ಇದೀಗ ಇಲ್ಲಿನ ನಾಗರಿಕರೆ ಸ್ವಯಂ ಖರ್ಚಿನಲ್ಲಿ ಬಡಾವಣೆಗಳ ರಸ್ತೆ ದುರಸ್ತಿ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದ್ದು ಪುರಸಭೆ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.

ಎರಡೂವರೆ ದಶಕಗಳ ಹಿಂದೆ ಸರ್ಕಾರದ ವತಿಯಿಂದ ಬಡಾವಣೆ ನಿರ್ಮಾಣಗೊಂಡಿದೆ. ಅತ್ಯಂತ ಹಿಂದುಳಿದ, ನಿರ್ಗತಿಕ ಕುಟುಂಬಸ್ಥರಿಗೆ ನಿವೇಶ ಹಂಚಿಕೆ ಮಾಡಿ ಮನೆಗಳ ನಿರ್ಮಾಣ ಮಾಡಿಕೊಡಲಾಗಿತ್ತು. ಅಂದಿನಿಂದ ಇಂದಿನವರೆಗೆ ರಸ್ತೆ, ಚರಂಡಿ, ಶುದ್ಧ ಕುಡಿವ ನೀರು ಸೇರಿದಂತೆ ಯಾವೊಂದು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು
ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಮುಂದಾಗದೆ ಹೋಗಿರುವುದು ಅಭಿವೃದ್ಧಿ ಹರಿಕಾರರ ಪಾಲಿಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ.

ADVERTISEMENT

ಆಶ್ರಯ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಈಗಾಗಲೆ ನೂರಾರು ಮನೆಗಳು ನಿರ್ಮಾಣಗೊಂಡಿವೆ. ಪುರಸಭೆಗೆ ತೆರಿಗೆ ಪಾವತಿಸುವ ಬಡಾವಣೆಗಳ ಪ್ರದೇಶದತ್ತ ಅಭಿವೃದ್ಧಿ ಕಾಮಗಾರಿಗಳು ಬರುತ್ತಿಲ್ಲ. ಬಚ್ಚಲು, ಬಟ್ಟೆ ತೊಳೆಯುವ ನೀರು ಎಲ್ಲೆಂದರಲ್ಲಿ ಸಂಗ್ರಹಗೊಂಡು ಮುಳ್ಳುಕಂಟಿ ಬೆಳೆದು ದುರ್ನಾತ ಬೀರುತ್ತಿದೆ. ಚುನಾಯಿತ ಪ್ರತಿನಿಧಿಗಳು, ಪುರಸಭೆ ಕಚೇರಿಗೆ ಅಲೆದು ಸುಸ್ತಾದ ಜನರು ತಮ್ಮ ಹಣ ಸಂಗ್ರಹ ಮಾಡಿಕೊಂಡು ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದಾರೆ.

‘ರಸ್ತೆಗಳು ಜಲಾವೃತಗೊಂಡು ಆಳವಾದ ಗುಂಡಿಗಳು ಬಿದ್ದು ಕೆಸರುಗದ್ದೆಯಾಗಿ ಮಾರ್ಪಟ್ಟಿವೆ. ಸಂಬಂಧಿಸಿದ ಅಧಿಕಾರಿಗಳು, ಪ್ರತಿನಿಧಿಗಳು ಭೇಟಿ ನೀಡಿ ಹೋದವರು ಮರಳಿ ಬಂದಿಲ್ಲ. ಅನಿವಾರ್ಯವಾಗಿ ದುರಸ್ತಿ ಮಾಡಿಕೊಳ್ಳುತ್ತಿದ್ದೇವೆ‘ ಎಂದು ಮುಖಂಡರಾದ
ಹನುಮಂತ ಬೆಂಟೋಣಿ, ಹುಲಗಪ್ಪ ಪಲಕನಮರಡಿ, ಹನುಮಂತ ಪೂಜಾರಿ, ಖಲೀಲಪಾಷ ಹವಾಲ್ದಾರ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.