ADVERTISEMENT

ಕೃಷ್ಣಾ ನದಿಯಿಂದ ನೀರಿನ ಹರಿವು ಕುಂಠಿತ: ಆರ್‌ಟಿಪಿಎಸ್‌ಗೆ ನೀರಿನ ಕೊರತೆ; ಆತಂಕ

ಉಮಾಪತಿ ಬಿ.ರಾಮೋಜಿ
Published 12 ಏಪ್ರಿಲ್ 2019, 20:00 IST
Last Updated 12 ಏಪ್ರಿಲ್ 2019, 20:00 IST
ಶಕ್ತಿನಗರ ಬಳಿಯ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗೂಗಲ್‌ ಬ್ಯಾರೇಜ್‌ನಲ್ಲಿ 0.15 ಟಿಎಂಸಿ ನೀರಿನ ಸಂಗ್ರಹ ಇದೆ.
ಶಕ್ತಿನಗರ ಬಳಿಯ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗೂಗಲ್‌ ಬ್ಯಾರೇಜ್‌ನಲ್ಲಿ 0.15 ಟಿಎಂಸಿ ನೀರಿನ ಸಂಗ್ರಹ ಇದೆ.   

ಶಕ್ತಿನಗರ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕೆ (ಆರ್‌ಟಿಪಿಎಸ್‌)ನೀರಿನ ಕೊರತೆ ಎದುರಾಗಿದ್ದು , ಇದರಿಂದಾಗಿ ಕೃಷ್ಣಾನದಿಯಿಂದ ಸರಬರಾಜು ಆಗುವ ನೀರಿನ ಪ್ರಮಾಣ ಕಡಿಮೆಯಾಗಿದೆ.

ಬರಗಾಲ ಪೀಡಿತ ಪ್ರದೇಶ ಆಗಿರುವುದರಿಂದ ನದಿಯ ಮಾರ್ಗದಲ್ಲಿ ಬರುವ ಆಲಮಟ್ಟಿ ಜಲಾಶಯದಿಂದ ಹರಿಯುವ ನೀರು ದೊಡ್ಡ ತೆಗ್ಗು ದಿನ್ನೆಗಳಲ್ಲಿ ನಿಲ್ಲುತ್ತಿವೆ. ಸರಗವಾಗಿ ನೀರು ಹರಿಯದ ಕಾರಣ ಆರ್‌ಟಿಪಿಎಸ್‌ಗೆ ದೊರೆಯುವ ಸಾಧ್ಯತೆ ಕ್ಷೀಣಿಸಿದ್ದು ಅದರ ಅರ್ಧದಷ್ಟು ನೀರು ದೊರೆಯುವುದು ಅನುಮಾನ ಆಗಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದರು.

ಆರ್‌ಟಿಪಿಎಸ್‌ ಎಂಟು ವಿದ್ಯುತ್ ಘಟಕಗಳ ಉತ್ಪಾದನೆಯಲ್ಲಿ ತೊಡಗಿಕೊಳ್ಳಲು ತಿಂಗಳಿಗೆ 2.24 ಲಕ್ಷ ಕ್ಯೂಬಿಕ್‌ ಮೀಟರ್ (100 ಕ್ಯೂಸೆಕ್‌) ನೀರಿನ ಅಗತ್ಯವಿದೆ. ಗೂಗಲ್‌ ಬ್ಯಾರೇಜ್‌ನಲ್ಲಿ ಮತ್ತು ಗುರ್ಜಾಪುರ ಬ್ಯಾರೇಜ್‌ನಲ್ಲಿ 0.15 ಟಿಎಂಸಿ ನೀರು ಸಂಗ್ರಹ ಇದೆ. ಪ್ರಸ್ತುತ ಆಲಮಟ್ಟಿಯಲ್ಲಿ 18 ಟಿಎಂಸಿ ನೀರಿನ ಲಭ್ಯವಿದೆ. ಹಾಗಾಗಿ ಎಚ್ಚರಿಕೆಯಿಂದ ನೀರು ಬಳಸಬೇಕಿದೆ.

ADVERTISEMENT

ನೀರಿನ ಹರಿವು ಕಡಿಮೆಯಾಗಿರುವುದರಿಂದ, ಬೇಸಿಗೆಯಲ್ಲಿ ವಿದ್ಯುತ್ ಘಟಕಗಳ ಉತ್ಪಾದನೆಗೆ ನೀರಿನ ಕೊರತೆ ಆಗದಂತೆ ಆಲಮಟ್ಟಿ ಜಲಾಶಯದಿಂದ ಪ್ರತಿ ತಿಂಗಳು 1 ಟಿಎಂಸಿ ನೀರು ಬಿಡಲಾಗುತ್ತಿದೆ. ಸದ್ಯ ನೀರಿನ ಕೊರತೆ ಇಲ್ಲ ಎಂದು ಆರ್‌ಟಿಪಿಎಸ್‌ ಯೋಜನಾ ಪ್ರದೇಶದ ಮುಖ್ಯಸ್ಥ ಮಲ್ಲಿಕಾರ್ಜುನಸ್ವಾಮಿ ಅವರು ’ಪ್ರಜಾವಾಣಿ’ಗೆ ಹೇಳಿದರು.

ಭೇಟಿ:

ಏಪ್ರಿಲ್ 13 ರಂದು ಬೆಂಗಳೂರಿನ ಆರು ಜನ ಇರುವ ಅಧಿಕಾರಿಗಳ ತಂಡ ಆರ್‌ಟಿಪಿಎಸ್‌ಗೆ ಭೇಟಿ ನೀಡಲಿದ್ದಾರೆ. 40 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪ ಇರುವುದರಿಂದ ವಿದ್ಯುತ್ ಘಟಕಗಳಿಗೆ ತಾಂತ್ರಿಕ ಸಮಸ್ಯೆ ಹೆಚ್ಚಾಗಿ ಕಂಡು ಬರುವ ಸಾಧ್ಯತೆ ಇದೆ.

ಬೇಸಿಗೆಯಲ್ಲಿ ವಿದ್ಯುತ್ ಘಟಕಗಳ ಉತ್ಪಾದನೆಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ತಾಂತ್ರಿಕ ಸಮಸ್ಯೆ ಕಂಡು ಬಂದಲ್ಲಿ ತಕ್ಷಣವೇ ದುರಸ್ತಿ ಕಾರ್ಯ ಕೈಗೆತ್ತಿಗೊಂಡು ವಿದ್ಯುತ್ ಘಟಕಗಳ ಉತ್ಪಾದನೆಗೆ ಅನುಕೂಲ ಮಾಡಬೇಕು.

ವಿದ್ಯುತ್ ಘಟಕಗಳ ಪೂರೈಕೆ ಮಾಡುವ ಸಾಮಾಗ್ರಿಗಳಾಗಲಿ ಅಥವಾ ಕಲ್ಲಿದ್ದಲು ಸರಬರಾಜು ಆಗಲಿ, ಯಾವುದೇ ಪರ್ಯಾಯ ಮಾರ್ಗ ಇದ್ದರೆ, ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ, ದಿನನಿತ್ಯದ ವಿದ್ಯುತ್ ಘಟಕಗಳ ಆಗು ಹೋಗುಗಳ ಕುರಿತು ಮಾಹಿತಿ ನೀಡಬೇಕು ಎಂದು ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ.ಪೊನ್ನುರಾಜ್ ಅವರು ಅಧಿಕಾರಿಗಳಿಗೆ ಹೊರಡಿಸಿರುವ ಮಾಹಿತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.