
ಸುರಪುರ: ಶಾಲಾ ದಿನಗಳಲ್ಲಿ ಕಿತ್ತು ತಿನ್ನುವ ಬಡತನದಿಂದಾಗಿ ಸ್ನೇಹಿತರು ನೀಡುತ್ತಿದ್ದ ಚಾಕ್ಲೆಟ್ ಆಸೆಗಾಗಿ ಆರಂಭಿಸಿದ ವೇಗದ ಓಟ ಇಲ್ಲೊಬ್ಬ ಯುವಕನನ್ನು ಇಂದು ರಾಷ್ಟ್ರೀಯ ಮಟ್ಟಕ್ಕೆ ತಂದು ನಿಲ್ಲಿಸಿದೆ.
ತಾಲ್ಲೂಕಿನ ದೇವಪುರದ ಶರಣಬಸವ ಜಾಂಗಿನ್ ಬಡತನದಲ್ಲಿ ಅರಳಿದ ಕ್ರೀಡಾ ಪ್ರತಿಭೆ.
ಈಗ ಶರಣಬಸವ ಹಾಫ್ ಮ್ಯಾರಾಥಾನ್ ಕ್ರೀಡಾಕೂಟದಲ್ಲಿ ದೇಶಕ್ಕೆ 9 ಮತ್ತು ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಸ್ಥಾನದಲ್ಲಿದ್ದಾರೆ. ಈ ವಿಭಾಗದಲ್ಲಿ ಅನನ್ಯ ಸಾಧನೆ ಮಾಡುತ್ತಿರುವ 23ರ ಹರೆಯದ ಈ ಕ್ರೀಡಾಪಟುವಿಗೆ ಈಗ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.
ಕಡು ಬಡತನದಲ್ಲಿ ಅರಳಿದ ಶರಣಬಸವ ಅವರಲ್ಲಿದ್ದ ಪ್ರತಿಭೆಯನ್ನು ಗುರುತಿಸಿದ್ದು ವನವಾಸಿ ಕಲ್ಯಾಣ ಸಂಸ್ಥೆ. ಈ ಸಂಸ್ಥೆಯಡಿ ಆಯೋಜನೆಯಾಗುವ ಎಲ್ಲ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಈತನೇ ಮೊದಲಿಗ.
ಕಳೆದ ವರ್ಷ ಪಿಯು ಕ್ರೀಡಾಕೂಟದ ಹಾಫ್ ಮ್ಯಾರಾಥಾನ್‍ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ. ಪರಿಣಾಮ ರಾಜ್ಯ ಸರ್ಕಾರದ ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆಯಾದರು. ದೊಡ್ಡಬಳ್ಳಾಪುರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರವೇಶಾತಿ ಪಡೆದಿದ್ದು, ಬೆಂಗಳೂರಿನ ಕಂಠೀರವ ಕ್ರೀಡಾ ವಸತಿ ನಿಲಯ ಉಳಿದಿರುವ ಇವರು, ಕಂಠೀರವ ಕ್ರೀಡಾಂಗಣದಲ್ಲಿ ಪ್ರತಿನಿತ್ಯ ಕ್ರೀಡಾಭ್ಯಾಸದಲ್ಲಿ ತೊಡಗಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಕಿರಣ ಬೇಡಿ ಆಯೋಜಿಸಿದ್ದ ಬೆಂಗಳೂರು ಮಿಡ್‍ನೈಟ್ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕಳೆದ ಸಾಲಿನಲ್ಲಿ ವನವಾಸಿ ಕಲ್ಯಾಣ ಸಂಸ್ಥೆ ನೇಪಾಳ ದೇಶದಲ್ಲಿ ನಡೆಸಿದ ಅಂತರರಾಷ್ಟ್ರೀಯ ಕ್ರೀಡೆಯಲ್ಲಿ ಮೊದಲಿಗರಾಗಿದ್ದಾರೆ.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಶರಣಬಸವ ಚೆನ್ನೈನಲ್ಲಿ ಜನವರಿ 9ರಿಂದ ನಡೆಯುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಭಾಗವಹಿಸಲು ತಾಲೀಮು ನಡೆಸು ತ್ತಿದ್ದಾರೆ.
ಹಾಫ್ ಮ್ಯಾರಾಥಾನ್ 21 ಕಿ.ಮೀ ಓಡುವ ಕ್ರೀಡೆಯಾಗಿದೆ. ಈ ಕ್ರಮವನ್ನು 1 ಗಂಟೆ 15 ನಿಮಿಷದಲ್ಲಿ ಓಡಿದ ದಾಖಲೆ ಇದೆ. ರಾಷ್ಟ್ರೀಯ ದಾಖಲೆಗೆ 8 ನಿಮಿಷದ ವ್ಯತ್ಯಾಸ ಇದೆ. ಇದನ್ನು ಮೀರಿಸುವ ಹುಮ್ಮಸ್ಸು ಅವರಲ್ಲಿದೆ.
‘ವನವಾಸಿ ಕಲ್ಯಾಣ ಸಂಸ್ಥೆ, ಪ್ರಭು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಮೇಶ ಶಹಾಪುರಕರ, ಅಂಬೇಡ್ಕರ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಭೀಮಣ್ಣ ಅರಳಹಳ್ಳಿ ಅವರು ನನಗೆ ತರಬೇತಿ ನೀಡಿದ್ದಾರೆ’ ಎಂದು ಶರಣಬಸವ ಹೇಳುತ್ತಾರೆ.
ದೇಶದ ಅಥ್ಲೀಟಿಕ್ ಕೋಚ್ ಆಗಬೇಕು. ವಾಯುಸೇನೆಯಲ್ಲಿ ಸೇವೆ ಸಲ್ಲಿಸಬೇಕೆನ್ನುವ ಅದಮ್ಯ ಗುರಿ ಹೊಂದಿದ್ದಾರೆ. ಶರಣಬಸವ ಅವರಲ್ಲಿನ ಪ್ರತಿಭೆ ನಮ್ಮ ಸಂಸ್ಥೆ ಗುರುತಿಸಿದ್ದು ಸಾರ್ಥಕವಾಗಿದೆ. ಬಡತನದಲ್ಲೂ ಅರಳುತ್ತಿರುವ ಈ ಕ್ರೀಡಾಪಟುವಿಗೆ ಪ್ರೋತ್ಸಾಹ ಮತ್ತು ನೆರವಿನ ಅಗತ್ಯವಿದೆ ಎಂದು ವನವಾಸಿ ಕಲ್ಯಾಣ ಸಂಸ್ಥೆ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ ಹೇಳಿದರು. ಶರಣಬಸವ ಅವರೊಂದಿಗೆ ಮಾತನಾಡಲು ಮೊ. 90718 74360 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.