ರಾಯಚೂರು: ‘ಶ್ರೀಕೃಷ್ಣನ ಪ್ರಬುದ್ಧತೆ ಹಾಗೂ ಮುತ್ಸದ್ಧಿತನ ಇಂದಿನ ಕಾಲಘಟ್ಟಕ್ಕೂ ಮಾದರಿಯಾಗಿದೆ. ಹೀಗಾಗಿ ಶ್ರೀಕೃಷ್ಣನ ಆದರ್ಶ ಪಾಲನೆ ಮಾಡಬೇಕಾಗಿದೆ’ ಎಂದು ಸಂಸದ ಜಿ.ಕುಮಾರ ನಾಯಕ ಹೇಳಿದರು.
ಇಲ್ಲಿಯ ಯಾದವ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಸಮಾಜದಲ್ಲಿ ಗಲಭೆ, ಯುದ್ಧ ಧೋರಣೆಗಳನ್ನು ತೊಲಗಿಸಲು ಶ್ರೀಕೃಷ್ಣನ ತತ್ವಗಳು ಮತ್ತು ಅವರ ಸ್ಮರಣೆಯಿಂದ ಸಾಧ್ಯ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಸಮಾಜವನ್ನು ಬದಲಾವಣೆ ಮಾಡಬೇಕು’ ಎಂದರು.
ನಗರ ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ‘ಮಹಾಭಾರತ ಯುದ್ಧದಲ್ಲಿ ಪಾಂಡವರು ಜಯ ಸಾಧಿಸಲು ಶ್ರೀಕೃಷ್ಣನೇ ಕಾರಣಕರ್ತ. ಶ್ರೀಕೃಷ್ಣನ ತತ್ವಗಳು, ಉಪನಿಷತ್ತುಗಳನ್ನು ನಮ್ಮ ಜೀವನದ ಮೌಲ್ಯಕ್ಕೆ ಅಳವಡಿಸಿಕೊಂಡರೆ ಸಮಾಜದ ಅಭಿವೃದ್ಧಿ ಸಾಧ್ಯ’ ಎಂದು ತಿಳಿಸಿದರು.
‘ಯಾದವ ಸಮಾಜದ ಏಳಿಗೆ ಮತ್ತು ಮಕ್ಕಳ ಶಿಕ್ಷಣದ ಅಭಿವೃದ್ಧಿಗೆ ₹15 ಲಕ್ಷ ದೇಣಿಗೆ ನೀಡಲಾಗುವುದು’ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಮಾತನಾಡಿ, ‘ಯಾವುದೇ ಸಮಾಜವು ಪರಿಪೂರ್ಣವಾಗಿ ಅಭಿವೃದ್ಧಿ ಹೊಂದಲು ಶಿಕ್ಷಣ ಅಗತ್ಯ. ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು’ ಎಂದು ಸಲಹೆ ನೀಡಿದರು.
ಕೆ.ಶಾಂತಪ್ಪ, ಪ್ರದೀಪಕುಮಾರ ದೀಕ್ಷಿತ ಮಾತನಾಡಿದರು.
ಪಾಲಿಕೆಯ ಹಿರಿಯ ಸದಸ್ಯ ಜಯಣ್ಣ, ಬಿ.ರಮೇಶ, ಶಶಿಧರ, ಆರ್.ಡಿ.ಎ ಸದಸ್ಯ ನರಸಿಂಹಲು, ಮುಖಂಡ ತಿಮ್ಮಪ್ಪ ನಾಡಗೌಡರು, ಎ.ಮಾರೆಪ್ಪ ವಕೀಲ, ರಾಜಶೇಖರ ನಾಯಕ, ಮೊಹಮ್ಮದ್ ಶಾಲಂ, ಕೆ.ಶಾಂತಪ್ಪ, ಡಿ.ಕೆ.ಮುರುಳೀಧರ ಯಾದವ, ರಮೇಶ ಯಾದವ ಹಾಗೂ ದಾರಪ್ಪ ಯಾದವ ಉಪಸ್ಥಿತರಿದ್ದರು.
ಮೆರವಣಿಗೆ: ನಗರೇಶ್ವರ ದೇವಸ್ಥಾನದಿಂದ ಕೃಷ್ಣ ದೇವಸ್ಥಾನದ ಯಾದವ ಸಂಘದ ಕಲ್ಯಾಣ ಮಂಟಪದವರೆಗೆ ಶ್ರೀಕೃಷ್ಣನ ಭಾವಚಿತ್ರದ ಮೆರವಣಿಗೆ ನಡೆಯಿತು.
ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಇಸ್ಕಾನ್ ಮಂದಿರ: ಜನ್ಮಾಷ್ಟಮಿ ಸಂಭ್ರಮ
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಗರದ ಇಸ್ಕಾನ್ ಮಂದಿರದಲ್ಲಿ ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಿಗ್ಗೆ ಭಗವದ್ಗೀತೆ ಪಠಣ ಮಂಗಳಾರತಿ ಅನ್ನದಾನ ಸೇವೆ ಪಲ್ಲಕ್ಕಿ ಉತ್ಸವ ತೆಪ್ಪೋತ್ಸವ ನಡೆಯಿತು. ಕೃಷ್ಣ ಜನ್ಮಾಷ್ಟಮಿಗೆ ಪೂರ್ವಭಾವಿಯಾಗಿ 25ಕ್ಕೂ ಹೆಚ್ಚು ಶಾಲೆಗಳಲ್ಲಿ ಭಗವದ್ಗೀತೆ ಪಠಣ ಚಿತ್ರಕಲೆ ರಸಪ್ರಶ್ನೆ ಸೇರಿ ವಿವಿಧ ಸ್ಪ ರ್ಧೆಗಳನ್ನು ಆಯೋಜಿಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಇಸ್ಕಾನ್ ಮಂದಿರದ ವ್ಯವಸ್ಥಾಪಕ ಸಾರಥಿ ಶ್ಯಾಮದಾಸ್ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.