ಜೈಲು (ಪ್ರಾತಿನಿಧಿಕ ಚಿತ್ರ)
ಸಿಂಧನೂರು: ಯುವತಿ ಮೇಲೆ ಅತ್ಯಾಚಾರ ಎಸಗಿದ್ದು ಸಾಬೀತಾಗಿದ್ದರಿಂದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ₹3.15 ಲಕ್ಷ ದಂಡ ವಿಧಿಸಿ ಸಿಂಧನೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಬಾಗೋಡಿ ಗ್ರಾಮದ ಮಹಮ್ಮದ್ ಚಾಂದಪಾಷಾ ರಜತ್ ಪಾಟೀಲ ಶಿಕ್ಷೆಗೊಳಗಾದ ಅಪರಾಧಿ.
ಘಟನೆಯ ವಿವರ
2021ರ ಜುಲೈ 27ರಂದು ಸಿಂಧನೂರಿನ ಯುವತಿ ನಗರದ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಆಗ ಮಹಮ್ಮದ್ ಚಾಂದಪಾಷಾ ಒತ್ತಾಯಪೂರ್ವಕವಾಗಿ ಕರವಸ್ತ್ರ ಮೂಗಿಗೆ ಹಿಡಿದು ಅರೆಪ್ರಜ್ಞೆ ತಪ್ಪಿಸಿ ಬಸ್‌ನಲ್ಲಿ ಗೋವಾಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ಒಂದು ರೂಮ್‍ನಲ್ಲಿ ಯುವತಿಗೆ ಒತ್ತಾಯಪೂರ್ವಕವಾಗಿ ಮದ್ಯಪಾನ ಮಾಡಿಸಿ, ಸಿಗರೇಟ್ ಸೇದಿಸಿ ಅತ್ಯಾಚಾರ ಮಾಡಿದ್ದಾನೆ. ವಿಡಿಯೊ ಮತ್ತು ಫೋಟೊಗಳನ್ನು ತೆಗೆದುಕೊಂಡು ಇತರರಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿ ₹9 ಲಕ್ಷ ನೀಡುವಂತೆ ಒತ್ತಾಯಿಸಿದ್ದ. ಇದರಿಂದ ನೊಂದ ಯುವತಿ ಸಿಂಧನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ತನಿಖಾಧಿಕಾರಿಗಳಾದ ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ನಿಂಗಪ್ಪ ಮತ್ತು ಗುರುರಾಜ ಆರ್.ಕಟ್ಟಿಮನಿ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಕುರಿತು ವಾದ–ವಿವಾದಗಳನ್ನು ಆಲಿಸಿದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತಿ ಅವರು ಸೋಮವಾರ ಶಿಕ್ಷೆ ಪ್ರಕಟಿಸಿದ್ದಾರೆ.
ಸರ್ಕಾರಿ ಅಭಿಯೋಜಕರಾದ ಆರ್.ಎ.ಗಡಕರಿ ಮತ್ತು ಮಂಜುನಾಥ ಬೇರಿಗಿ ಸರ್ಕಾರದ ಪರ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.