ADVERTISEMENT

‘ಒಂದೇ ಕುಟುಂಬ ಅಧಿಕಾರ ಸರಿಯಲ್ಲ’

‘ಸುಡಾ’ಗೆ ಬಾಬುಗೌಡ ಹೆಸರು ಶಿಫಾರಸು: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 14:09 IST
Last Updated 5 ಜೂನ್ 2025, 14:09 IST
ಸೋಮನಗೌಡ ಬಾದರ್ಲಿ
ಸೋಮನಗೌಡ ಬಾದರ್ಲಿ   

ಸಿಂಧನೂರು: ‘ಎಲ್ಲ ವಿಧದ ಅಧಿಕಾರ ಒಂದೇ ಕುಟುಂಬಕ್ಕೆ ಸೀಮಿತವಾಗುವುದು ಸರಿಯಲ್ಲ’ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಟೀಕಿಸಿದರು.   

‘ಶಾಸಕ ಹಂಪನಗೌಡ ಬಾದರ್ಲಿ ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಸಹೋದರನ ಪುತ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ ನೇಮಿಸುವಂತೆ ಸೂಚಿಸಿದ್ದಾರೆ’ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ  ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಪಕ್ಷಕ್ಕೆ ಹಗಲಿರುಳು ಶ್ರಮಿಸಿದ ಮತ್ತು ತಮ್ಮನ್ನು ಶಾಸಕರಾಗಿಸಲು ದುಡಿದ ಕಾರ್ಯಕರ್ತರಿಗೆ ಅಧಿಕಾರಗಳನ್ನು ಹಂಚಬೇಕಾಗುತ್ತದೆ. ಈ ಬೆಳವಣಿಗೆಯಿಂದ ಕಾರ್ಯಕರ್ತರಿಗೆ ಅನ್ಯಾಯ ಮಾಡಿದಂತಾಗುತ್ತದೆ’ ಎಂದರು.

ADVERTISEMENT

‘ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರು ಕುಟುಂಬದ ಯಾವುದೇ ಸದಸ್ಯರ ಹೆಸರನ್ನು ಯಾವುದೇ ಸ್ಥಾನಗಳಿಗೆ ನೇಮಿಸಲು ಶಿಫಾರಸ್ಸು ಮಾಡಿಲ್ಲ. ಪಕ್ಷದ ಮುಖಂಡರಾದ ವೆಂಕಟೇಶ ರಾಘಲಪರ್ವಿ, ಶಿವಕುಮಾರ ಜವಳಿ, ಶರಣಯ್ಯಸ್ವಾಮಿ, ರೌಡಕುಂದಾ ಖಾಜಾಸಾಬ್‌, ಯಂಕನಗೌಡ ಗಿಣಿವಾರ ಅವರ ಹೆಸರುಗಳನ್ನು ವಿವಿಧ ಸ್ಥಳೀಯ ಸಂಸ್ಥೆಗಳಿಗೆ ನೇಮಕ ಮಾಡುವಂತೆ ಶಿಫಾರಸ್ಸು ಮಾಡಿದ್ದಾರೆ’ ಎಂದರು.

‘ಮುಂಗಾರು ಮತ್ತು ಹಿಂಗಾರು ಜೋಳ ಖರೀದಿಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಬಸನಗೌಡ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕೃಷಿ ಸಚಿವ ಚಲುವರಾಯಸ್ವಾಮಿ, ಸಹಕಾರ ಸಚಿವ ರಾಜಣ್ಣ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಅವರ ಬಳಿ ಸಿಂಧನೂರು ತಾಲ್ಲೂಕಿನ ರೈತ ಮುಖಂಡರ ನಿಯೋಗದೊಂದಿಗೆ ತೆರಳಿ ಮನವರಿಕೆ ಮಾಡಿದ್ದಾರೆ. ಹೀಗಾಗಿ ಸಚಿವ ಸಂಪುಟ ಸಭೆಯಲ್ಲಿ ರೈತರ ಪರವಾದ ಆದೇಶ ಹೊರಬರುವ ನಿರೀಕ್ಷೆಯಿದೆ’ ಎಂದು ಸೋಮನಗೌಡ ಬಾದರ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡರಾದ ಹೊನ್ನನಗೌಡ ಬೆಳಗುರ್ಕಿ, ವೆಂಕಟೇಶ ರಾಘಲಪರ್ವಿ, ಶಿವಕುಮಾರ ಜವಳಿ, ಅಮರೇಶ ಗಿರಿಜಾಲಿ, ಯುನೂಸ್‍ಪಾಷಾ ದಢೇಸುಗೂರು, ವೀರರಾಜು ಬೂದಿವಾಳ ಕ್ಯಾಂಪ್, ಶರಣಯ್ಯಸ್ವಾಮಿ ಕೋಟೆ, ಮಲ್ಲಿಕಾರ್ಜುನ ಹುಡಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.