ADVERTISEMENT

ನಿರಂತರ ಮಳೆ: ಜನಜೀವನ ಅಸ್ತವ್ಯಸ್ಥ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 6:51 IST
Last Updated 19 ಆಗಸ್ಟ್ 2025, 6:51 IST
ಸಿಂಧನೂರಿನ ಪಂಚಾಯತ್‍ರಾಜ್ ಎಂಜನಿಯರಿಂಗ್ ಉಪವಿಭಾಗದ ಕಚೇರಿಗೆ ತೆರಳುವ ರಸ್ತೆ ಹಾಗೂ ಆವರಣ ಮಳೆಯಿಂದ ಕೆಸರುಮಯ ಆಗಿರುವುದು
ಸಿಂಧನೂರಿನ ಪಂಚಾಯತ್‍ರಾಜ್ ಎಂಜನಿಯರಿಂಗ್ ಉಪವಿಭಾಗದ ಕಚೇರಿಗೆ ತೆರಳುವ ರಸ್ತೆ ಹಾಗೂ ಆವರಣ ಮಳೆಯಿಂದ ಕೆಸರುಮಯ ಆಗಿರುವುದು   

ಸಿಂಧನೂರು: ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದ್ದು ರಸ್ತೆಗಳು ಕೆಸರುಮಯವಾಗಿವೆ.

ಮಕ್ಕಳನ್ನು ಬೆಳಿಗ್ಗೆ ಶಾಲೆ ಬಿಡುವಾಗ, ಸಂಜೆ ಕರೆದುಕೊಂಡು ಬರುವಾಗ ಮಳೆಯಲ್ಲಿ ತೋಯಿಸಿಕೊಳ್ಳುವುದು ಸಾಮಾನ್ಯವಾಗಿದೆ. ಬೀದಿಬದಿಯ ಅನೇಕ ಸಣ್ಣಪುಟ್ಟ ವ್ಯಾಪಾರಸ್ಥಗಳನ್ನು ಮಳೆ ಸಂಕಷ್ಟಕ್ಕೆ ದೂಡಿದೆ.

ಮಿನಿವಿದಾನಸೌಧ, ಪಂಚಾಯತ್ ರಾಜ್ ಎಂಜನಿಯರ್ ಉಪವಿಭಾಗ, ತಾಲ್ಲೂಕು ಪಂಚಾಯಿತಿ ಕಚೇರಿ ಆವರಣಗಳು ಕೆಸರು ಗದ್ದೆಯಂತಾಗಿವೆ. ನಗರದ ಇಂದಿರಾ ಪ್ರಿಯದರ್ಶಿನಿ ಸ್ಕೂಲ್, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರ ಬಾಲಕಿಯರ ವಸತಿ ನಿಲಯಕ್ಕೆ ತೆರಳುವ ರಸ್ತೆಯಂತೂ ಹೇಳತೀರದು. ತೆಗ್ಗುದಿನ್ನೆಗಳಲ್ಲಿ ಮಳೆ ಮತ್ತು ಚರಂಡಿ ನೀರು ಸಂಗ್ರಹವಾಗಿ ವಿದ್ಯಾರ್ಥಿಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ADVERTISEMENT

ಮಳೆಯಿಂದ ನಗರದ ಬಸ್ ನಿಲ್ದಾಣದ ಚರಂಡಿಯ ತುಂಬಿ ಪಕ್ಕದ ವೆಂಕಟರಾವ್ ಕಾಲೊನಿ ಮತ್ತು ಕತ್ತಿಗೇರ್ ಓಣಿಗೆ ನುಗ್ಗುತ್ತಿದೆ. ಅಲ್ಲದೆ ಗಂಗಾವತಿ ರಸ್ತೆಯಲ್ಲಿರುವ ಕಾನಿಹಾಳ ಗೌಡರ ಪೆಟ್ರೋಲ್ ಪಕ್ಕದ ಚರಂಡಿ ತುಂಬಿ ಮುಖ್ಯರಸ್ತೆಯಲ್ಲಿ ಕಲುಷಿತ ನೀರು ಸಂಗ್ರಹವಾಗಿದೆ. ಇದನ್ನು ಪುನಃ ರಸ್ತೆಗೆ ಕಳುಹಿಸಲು ನಗರಸಭೆ ಸಿಬ್ಬಂದಿ ಕೆಲಸದಲ್ಲಿ ತೊಡಗಿರುವುದು ಕಂಡು ಬಂತು.

ಹಿರೇಲಿಂಗೇಶ್ವರ ಕಾಲೊನಿ, ಜನತಾಕಾಲೊನಿ, ಮಹಿಬೂಬಿಯಾ ಕಾಲೊನಿ, ರೈಲ್ವೆ ನಿಲ್ದಾಣ ಮತ್ತು ಗಂಗಾನಗರಕ್ಕೆ ತೆರಳುವ ಕಾಲುವೆ ಪಕ್ಕದಲ್ಲಿ ಶೆಡ್, ಟೆಂಟ್ ಹಾಕಿಕೊಂಡು ಜೀವಿಸುತ್ತಿರುವ ಬಡವರು ಮಳೆ ನೀರು ಸೋರುತ್ತಿದ್ದರೂ ಅದರಲ್ಲೇ ದಿನದೂಡುತ್ತಿದ್ದಾರೆ.

ಮಳೆಗಾಲದಲ್ಲಿ ಸತ್ಯಗಾರ್ಡನ್ ಕ್ರಾಸ್‍ನಿಂದ ಎಸ್‍ಟಿ ಮತ್ತು ಅಲ್ಪಸಂಖ್ಯಾತರ ಹಾಸ್ಟೆಲ್‍ಗಳಿಗೆ ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಹೋಗಬೇಕು. ಈ ಕುರಿತು ನಗರಸಭೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ 
ಅಶ್ವಿನಿ ಹಾಸ್ಟೆಲ್ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.