ಸಿಂಧನೂರು: ‘ಸಿಂಧನೂರು ಯೋಜನೆ ವ್ಯಾಪ್ತಿಯಲ್ಲಿ ಬರುವ 359 ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳ ಅಪೌಷ್ಟಿಕತೆ ಕುರಿತು ವಸ್ತುನಿಷ್ಠ ಮತ್ತು ನಿಖರ ಮಾಹಿತಿಯನ್ನು ನಮೂನೆಯಲ್ಲಿ ಭರ್ತಿ ಮಾಡಿ ವರದಿ ಸಲ್ಲಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ನವೀನಕುಮಾರ ಸೂಚನೆ ನೀಡಿದರು.
ಸ್ಥಳೀಯ ಸ್ತ್ರೀಶಕ್ತಿ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಕ್ಕಳ ಅಪೌಷ್ಟಿಕತೆ ಪರಿಶೀಲನೆ ಕುರಿತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸೂಚನೆ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನೆಯಂತೆ ಜಿಲ್ಲೆಯಲ್ಲಿರುವ ಅಪೌಷ್ಟಿಕ ಮಕ್ಕಳನ್ನು ವಸ್ತುನಿಷ್ಠವಾಗಿ ಮತ್ತು ನಿಖರವಾಗಿ ಅಳತೆ ಮಾಡಿ ಸಾಮಾನ್ಯ, ಸಾಧಾರಣ ಮತ್ತು ತೀವ್ರ ಅಪೌಷ್ಟಿಕ ಎಂದು ಗುರುತಿಸಿ, ಅವರನ್ನು ಸುಧಾರಣೆ ಮಾಡಲು ಯೋಜನೆಗಳನ್ನು ರೂಪಿಸಬೇಕಿದೆ ಎಂದರು.
ಸಮರೋಪಾದಿಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳ ಎತ್ತರ ಮತ್ತು ತೂಕವನ್ನು ಅಳತೆ ಮಾಡಿ ಪೋಷಣ್ ಟ್ರ್ಯಾಕರ್ ಕ್ಯಾಲುಕುಲೇಟರ್‌ನಲ್ಲಿ ಪರಿಶೀಲಿಸಿ ಮಗುವಿನ ಬೆಳವಣಿಗೆಯ ನಿಖರತೆ ಕಂಡು ಹಿಡಿಯುವುದಕ್ಕಾಗಿ ರಾಯಚೂರು ಜಿಲ್ಲೆಯ 8 ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಹಿರಿಯ ಮೇಲ್ವಿಚಾರಕಿಯರು, ಮೇಲ್ವಿಚಾರಕಿಯರು, ಪೋಷಣ್ ಅಭಿಯಾನ ಯೋಜನೆಯ ತಾಲ್ಲೂಕು ಸಂಯೋಜಕರು ಸೇರಿ ಒಟ್ಟು 90 ಜನ ಅಧಿಕಾರಿಗಳು ಹಾಗೂ ಸಿಬ್ಬಂದಿ 45 ತಂಡಗಳನ್ನು ರಚಿಸಿ ಸಿಂಧನೂರು ಯೋಜನೆಯ 359 ಅಂಗನವಾಡಿ ಕೇಂದ್ರಗಳಿಗೆ ಮೂರು ದಿನ ಕಾಲ ಭೇಡಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಅಪೌಷ್ಟಿಕ ಮಕ್ಕಳ, ಗರ್ಭಿಣಿ ಮತ್ತು ಬಾಣಂತಿಯರ ಮಾಹಿತಿಯನ್ನು ಸಂಗ್ರಹಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕಿದೆ ಎಂದರು.
ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ ಮಾತನಾಡಿ, ಸಿಂಧನೂರು ತಾಲ್ಲೂಕನ್ನು ಅಪೌಷ್ಟಿಕ ಮುಕ್ತವನ್ನಾಗಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.
ಜಿಲ್ಲಾ ನಿರೂಪಣಾಧಿಕಾರಿ ಕುಮಾರ ಮಾತನಾಡಿದರು. ಸಿಂಧನೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಿಂಗನಗೌಡ ಪ್ರತಿಜ್ಞಾವಿಧಿ ಬೋಧಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಅಶೋಕ.ಎಂ, ಮಹೇಶ್, ಗೋಕುಲಹುಸೇನ್, ನಾಗರತ್ನ, ಮಾಧವಾನಂದ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.