ಸಿಂಧನೂರು: ಗೌರಿ-ಗಣೇಶ ಹಬ್ಬದ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಲ್ಲಿ ವಿವಿಧ ಬಗೆಯ ಗಣಪತಿ ಮೂರ್ತಿಗಳನ್ನು ಭವ್ಯ ಮೆರವಣಿಗೆ ನಡೆಸಿ, ಶ್ರದ್ಧಾಭಕ್ತಿಯಿಂದ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.
ಪಟೇಲವಾಡಿ, ಗಂಗಾವತಿ ರಸ್ತೆ, ಪಿಡಬ್ಲ್ಯೂಡಿ ಕ್ಯಾಂಪ್, ಶ್ರೀಪುರಂಜಂಕ್ಷನ್ ಸೇರಿದಂತೆ ಬಳ್ಳಾರಿ, ಹೊಸಪೇಟೆ, ಗಂಗಾವತಿ, ರಾಯಚೂರು, ಆದೋನಿ ಮತ್ತಿತರ ಕಡೆಗಳಿಂದ ತಂದಿದ್ದ ಆಕರ್ಷಕ ಗಣೇಶ ಮೂರ್ತಿಗಳನ್ನು ಪ್ರವಾಸಿ ಮಂದಿರ, ಎಪಿಎಂಸಿ ಗಣೇಶ ಗುಡಿ, ಯಲ್ಲಮ್ಮ ದೇವಸ್ಥಾನದಿಂದ ಟ್ರಾಕ್ಟರ್, ಬೊಲೆರಾ ಗೂಡ್ಸ್, ಟಾಟಾ ಏಸ್, ಟಂಟಂ ಆಟೋ ವಾಹನಗಳಲ್ಲಿ ಇಟ್ಟುಕೊಂಡು ವಿವಿಧ ವಾದ್ಯಮೇಳಗಳೊಂದಿಗೆ ಪ್ರತಿಷ್ಠಾಪನಾ ಸ್ಥಳದವರೆಗೆ ಕೊಂಡೊಯ್ದರು.
ನಗರದ ಪ್ರವಾಸಿ ಮಂದಿರದಿಂದ ಗಣೇಶ ಮೂರ್ತಿಯನ್ನು ಮೆರವಣಿಗೆ ನಡೆಸಿ ಜನತಾ ಗಂಜ್ ವರ್ತಕರ ಕಲ್ಯಾಣ ಸಂಘದಿಂದ ಎಪಿಎಂಸಿ ಗಣೇಶ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿದರು.
ಹಿಂದೂ ಮಹಾಗಣಪತಿ ಉತ್ಸವ ಸಮಿತಿಯಿಂದ ವಿಶೇಷವಾಗಿ 15 ಅಡಿ ಎತ್ತರದ ಹಿಂದೂ ಮಹಾಗಣಪತಿಯನ್ನು ನಗರದ ಎಪಿಎಂಸಿ ಗಣೇಶ ದೇವಸ್ಥಾನದಿಂದ ಮೆರವಣಿಗೆ ನಡೆಸಿ ವಿವೇರಾ ಗ್ರ್ಯಾಂಡ್ ಹೋಟೆಲ್ ಹಿಂಭಾಗದಲ್ಲಿ ಹಾಕಿದ್ದ ಬೃಹತ್ ಟೆಂಟ್‍ಗೆ ಕರೆದೊಯ್ದು ಪ್ರತಿಷ್ಠಾಪಿಸಲಾಯಿತು.
ಸಂಜೆ ಜನಪದ ಗಾಯಕರಾದ ಚಿತ್ರನಟ ಗುರುರಾಜ ಹೊಸಕೋಟೆ ಹಾಗೂ ಅವರ ತಂಡದಿಂದ ನಡೆದ ಜಾನಪದ ಜೈಂಕಾರ ಕಾರ್ಯಕ್ರಮ ನೆರೆದಿದ್ದ ಭಕ್ತಸಮೂಹವನ್ನು ರೋಮಾಂಚನಗೊಳಿಸಿತು. ಸುಮಾರು 15 ಸಾವಿರಕ್ಕೂ ಅಧಿಕ ಜನರು ಈ ಗಣೇಶ ಮೂರ್ತಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ್ದು ವಿಶೇಷವಾಗಿತ್ತು.
ರೌಡಕುಂದಾ ಹಿರೇಮಠ ಸಂಸ್ಥಾನ ಮಠದ ಶಿವಯೋಗಿ ಶಿವಾಚಾರ್ಯ, ವೆಂಕಟಗಿರಿ ಕ್ಯಾಂಪಿನ ಸಿದ್ದಾಶ್ರಮದ ಸದಾನಂದ ಶರಣರು, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಬಿಜೆಪಿ ಮುಖಂಡರಾದ ಕೆ.ಕರಿಯಪ್ಪ, ರಾಜೇಶ ಹಿರೇಮಠ, ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಗೌರವಾಧ್ಯಕ್ಷ ಬಸವರಾಜ ನಾಡಗೌಡ, ಅಧ್ಯಕ್ಷ ನೆಕ್ಕಂಟಿ ಸುರೇಶ, ಪ್ರಧಾನ ಕಾರ್ಯದರ್ಶಿ ರವಿಕುಮಾರ ಉಪ್ಪಾರ, ನಗರಸಭೆ ಸದಸ್ಯ ಚಂದ್ರಶೇಖರ ಮೈಲಾರ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.
Cut-off box - ಹಿಂದೂ ಮಹಾಗಣಪತಿ: 15 ಸಾವಿರ ಭಕ್ತರಿಂದ ದರ್ಶನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.