ADVERTISEMENT

ಸಿಂಧನೂರು ನಗರಸಭೆ ಪೌರಾಯುಕ್ತ ಗುಂಡೂರು ಅಮಾನತು ಆದೇಶ ವಾಪಸ್

​ಪ್ರಜಾವಾಣಿ ವಾರ್ತೆ
Published 14 ಮೇ 2025, 13:50 IST
Last Updated 14 ಮೇ 2025, 13:50 IST
ಮಂಜುನಾಥ ಗುಂಡೂರು
ಮಂಜುನಾಥ ಗುಂಡೂರು   

ಸಿಂಧನೂರು: ಇಲ್ಲಿನ ನಗರಸಭೆಯ ಪೌರಾಯುಕ್ತ ಮಂಜುನಾಥ ಗುಂಡೂರು ಅವರ ಅಮಾನತು ಆದೇಶವನ್ನು ವಾಪಸ್ ಪಡೆದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಅವರು ಬುಧವಾರ ಮರು ಆದೇಶ ಹೊರಡಿಸಿದ್ದಾರೆ.

ನಗರಸಭೆಯ ವಿವಿಧ ಯೋಜನೆಗಳಲ್ಲಿ ಅವ್ಯವಹಾರ ನಡೆಸಿ, ಪೌರಾಯುಕ್ತರು ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಮಂಗಳವಾರ ಅಮಾನತುಗೊಳಿಸಿ, ಹುಮನಾಬಾದ್ ಪುರಸಭೆಯ ಮುಖ್ಯಾಧಿಕಾರಿ ಶ್ರೇಣಿ-1 ಹುದ್ದೆಗೆ ಬದಲಾಯಿಸಿ ಆದೇಶ ಹೊರಡಿಸಲಾಗಿತ್ತು.

ಮಂಜುನಾಥ ಗುಂಡೂರು ಅವರು ತಮ್ಮ ಮೇಲಿನ ಎಲ್ಲ ಆರೋಪಗಳಿಗೆ ಸಂಬಂಧಿಸಿದಂತೆ ಸಮರ್ಪಕ ಉತ್ತರ ನೀಡಲು 20 ದಿನಗಳ ಕಾಲಾವಕಾಶ ಕೋರಿದ್ದರು. ಆದರೆ ಕಾಲಾವಕಾಶ ನೀಡದೆ ಏಕಾಏಕಿ ಅಮಾನತುಗೊಳಿಸಿ ಆದೇಶಿಸಲಾಗಿತ್ತು.

ADVERTISEMENT

‘ಈ ಪ್ರಕರಣದಲ್ಲಿ ಹಲವಾರು ಅಂಶಗಳಿದ್ದು, ಅಗಾಧ ದಾಖಲೆಗಳನ್ನು ವಿವಿಧ ಇಲಾಖೆಗಳಿಂದ ಸಂಗ್ರಹಿಸಬೇಕಾಗಿದೆ. ಈ ಕುರಿತಾಗಿ ಅಧೀನ ಸಿಬ್ಬಂದಿಗೆ ಕಾರಣ ಕೇಳುವ ನೋಟಿಸ್ ಜಾರಿಗೊಳಿಸಿದ್ದೇನೆ. ಹಾಗಾಗಿ ತಾವು ಸೂಚಿಸಿದ ನಿಗದಿತ ಸಮಯದಲ್ಲಿ ಸಮಜಾಯಿಸಿ ಸಲ್ಲಿಸಲು ಸಾಧ್ಯವಾಗಿಲ್ಲ. ಈ ಕಾರಣಗಳಿಂದ ಸಮಜಾಯಿಸಿ ಸಲ್ಲಿಸಲು ಎರಡು ವಾರಗಳಾದರೂ ಕಾಲಾವಕಾಶ ನೀಡುವಂತೆ ಹಾಗೂ ಅಮಾನತು ಆದೇಶ ಹಿಂಪಡೆಯುವಂತೆ’ ಗುಂಡೂರು ವಿನಂತಿಸಿದ್ದರು.

ಇದನ್ನು ಪರಿಗಣಿಸಿರುವ ಇಲಾಖೆ ತನಿಖಾ ವರದಿಯಲ್ಲಿನ ಆರೋಪಗಳಿಗೆ ಸಂಬಂಧಿಸಿದಂತೆ ನೀಡಲಾಗಿರುವ ಕಾರಣ ಕೇಳುವ ನೋಟಿಸ್‍ಗೆ 10 ದಿನಗಳೊಳಗೆ ಸಮಜಾಯಿಸಿ ನೀಡುವಂತೆ ಸೂಚಿಸಿ, ಅಮಾನತು ಆದೇಶವನ್ನು ಹಿಂಪಡೆದು ಮರು ಆದೇಶ ಹೊರಡಿಸಿದ್ದಾರೆ.
 

ಎಂಎಲ್‍ಸಿಗೆ ಮುಖಂಭಂಗ

ಈ ಹಿಂದೆ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಪೌರಾಡಳಿತ ನಿರ್ದೇಶನಾಲಯದ ಮೇಲೆ ಪ್ರಭಾವ ಬೀರಿ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಅವರನ್ನು ಬೇರೆಡೆಗೆ ವರ್ಗಾಯಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ಶಾಸಕ ಹಂಪನಗೌಡ ಬಾದರ್ಲಿ ವರ್ಗಾವಣೆ ಆದೇಶವನ್ನು ಇಲಾಖೆಯಿಂದ ರದ್ದುಪಡಿಸಿ ಗುಂಡೂರು ಅವರ ಸೇವೆಯನ್ನು ಸಿಂಧನೂರು ನಗರಸಭೆಯಲ್ಲಿಯೇ ಮುಂದುವರಿಸುವಂತೆ ಮರು ಆದೇಶಕ್ಕೆ ಕಾರಣರಾಗಿದ್ದರು. ಈಗ ಬಸನಗೌಡ ಬಾದರ್ಲಿ ಪೌರಾಯುಕ್ತ ಗುಂಡೂರು ಅವರ ಅಮಾನತಿಗೆ ಕಾರಣರಾದರೆ ಆ ಆದೇಶವನ್ನು ರದ್ದುಪಡಿಸಿ ಹಂಪನಗೌಡ ಬಾದರ್ಲಿ ಅವರು ತಿರುಗೇಟು ನೀಡಿದ್ದಾರೆ. ಇದರಿಂದ ಬಸನಗೌಡ ಬಾದರ್ಲಿಗೆ ಮುಖಭಂಗವಾದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.