ಸಿಂಧನೂರು: ಹೊರವಲಯದ ಒಳಬಳ್ಳಾರಿ ರಸ್ತೆ ಪಕ್ಕದಲ್ಲಿ ಜೋಪಡಿಯಲ್ಲಿ ಕಟ್ಟಿದ್ದ 4 ಎಮ್ಮೆ ಮತ್ತು 4 ಆಕಳು ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಸಜೀವವಾಗಿ ದಹನವಾದ ಘಟನೆ ಗುರುವಾರ ಮಧ್ಯರಾತ್ರಿ ನಡೆದಿದೆ.
ಜೋಪಡಿಯ ಹತ್ತಿರದ ಜಮೀನಿನಲ್ಲಿ ಯಮನೂರಪ್ಪ ಎನ್ನುವವರು ಕುರಿ ಸಾಕಾಣಿಕೆ ಮಾಡಿದ್ದು, ಜೋಪಡಿಯಿಂದ ಹೊಗೆ ಬರುವುದನ್ನು ಗಮನಿಸಿ ಜಾನುವಾರು ಮಾಲೀಕ ಈರಪ್ಪ ಅವರಿಗೆ ದೂರವಾಣಿ ಕರೆ ಮಾಡಿದ್ದಾರೆ.
ನೆಟ್‌ವರ್ಕ್ ಸಮಸ್ಯೆಯಿಂದ ದೂರವಾಣಿ ಸಂಪರ್ಕಕ್ಕೆ ಸಿಗದ ಕಾರಣ ಮಾಲೀಕರಿಗೆ ಮಾಹಿತಿ ತಲುಪಲು ವಿಳಂಬವಾಗಿದೆ. ತಡವಾಗಿ ಸುದ್ದಿ ತಿಳಿದು ಮಾಲೀಕರು ಸ್ಥಳಕ್ಕೆ ಬರುವುದರಲ್ಲಿ ಜಾನುವಾರು ಮತ್ತು ಹುಲ್ಲಿನ ಬಣವೆ ಸುಟ್ಟು ಭಸ್ಮವಾಗಿದೆ
8 ಲಕ್ಷ ಬೆಲೆ ಬಾಳುವ ಶೆಡ್, 8 ಜಾನುವಾರು, (ಅಂದಾಜು ₹7 ಲಕ್ಷ), ₹1.50 ಲಕ್ಷ ಮೌಲ್ಯದ ಭತ್ತದ ಹುಲ್ಲು ಸೇರಿ ಅಂದಾಜು ₹16 ಲಕ್ಷ ಹಾನಿಯಾಗಿದೆ ಎಂದು ಜಾನುವಾರುಗಳ ಮಾಲೀಕ ಈರಪ್ಪ ತಿಳಿಸಿದರು.
ಗಣ್ಯರಿಂದ ಸಾಂತ್ವನ: ಜಾನುವಾರು ಮತ್ತು ಶೆಡ್ ಕಳೆದುಕೊಂಡು ದುಃಖಿತರಾದ ಈರಪ್ಪ ಅವರಿಗೆ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ ಪೊಲೀಸ್ ಠಾಣೆಗೆ ದೂರು ಕೊಡಲು ಸಹಕರಿಸಿದರು. ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಶರಣೇಗೌಡ ತುರ್ವಿಹಾಳ, ಕಂದಾಯ ನಿರೀಕ್ಷಕ ಲಿಂಗರಾಜ ಜಾನುವಾರುಗಳು ಭಸ್ಮಗೊಂಡಿರುವುದನ್ನು ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.