ADVERTISEMENT

ಸಾಮಾಜಿಕ ಜಾಲತಾಣ ಪ್ರಮುಖ ಅಸ್ತ್ರ

ಜೆಡಿಎಸ್ ತರಬೇತಿ ಕಾರ್ಯಾಗಾರ: ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 5:20 IST
Last Updated 28 ಜೂನ್ 2022, 5:20 IST
ಸಿಂಧನೂರಿನ ಜೈನ್ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಸೋಮವಾರ ನಡೆದ ಜಿಲ್ಲಾ ಮಟ್ಟದ ಸಾಮಾಜಿಕ ಜಾಲತಾಣ ವಿಭಾಗದ ಸದಸ್ಯರ ತರಬೇತಿ ಕಾರ್ಯಾಗಾರವನ್ನು ಸಂಸದ ಪ್ರಜ್ವಲ್ ರೇವಣ್ಣ ಉದ್ಘಾಟಿಸಿದರು
ಸಿಂಧನೂರಿನ ಜೈನ್ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಸೋಮವಾರ ನಡೆದ ಜಿಲ್ಲಾ ಮಟ್ಟದ ಸಾಮಾಜಿಕ ಜಾಲತಾಣ ವಿಭಾಗದ ಸದಸ್ಯರ ತರಬೇತಿ ಕಾರ್ಯಾಗಾರವನ್ನು ಸಂಸದ ಪ್ರಜ್ವಲ್ ರೇವಣ್ಣ ಉದ್ಘಾಟಿಸಿದರು   

ಸಿಂಧನೂರು: ‘ರಾಜಕೀಯದಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರ ಮಹತ್ವದ್ದು, ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು, ಜನರನ್ನು ಸುಲಭವಾಗಿ ತಲುಪಲು ಮತ್ತು ಪಕ್ಷ ಸಂಘಟನೆಗೆ ಹೆಚ್ಚಿನ ಬಲ ತಂದು ಕೊಡುವುದರಲ್ಲಿ ಸಹಕಾರಿಯಾಗಿವೆ’ ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ಇಲ್ಲಿನ ಜೈನ್ ಕಲ್ಯಾಣ ಮಂಟಪದಲ್ಲಿ ಜಾತ್ಯಾತೀತ ಜನತಾದಳ ಪಕ್ಷದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಾಮಾಜಿಕ ಜಾಲತಾಣದ ಕುರಿತು ಎರಡು ದಿನಗಳ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಾವು ನಿಮ್ಮನ್ನು ತಲುಪಲು, ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಇರುವ ಅತ್ಯುತ್ತಮ ವೇದಿಕೆ ಸೋಶಿಯಲ್ ಮಿಡಿಯಾ ಆಗಿದೆ. ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳವಾಗಿದ್ದು, ಸಾವಿರಾರು ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ಪಕ್ಷಕ್ಕಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಶ್ರಮಿಸುತ್ತಿದ್ದಾರೆ. ಪಕ್ಷವನ್ನು ಕೆಳ ಮಟ್ಟದಿಂದ ಬೆಳೆಸುವ ಕೆಲಸವಾಗಬೇಕಿದೆ. ರಾಜ್ಯದಲ್ಲಿ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯಚಟುವಟಿಕೆ ಶುರುವಾಗಿದೆ. ಶೀಘ್ರದಲ್ಲಿಯೇ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲಾಗುತ್ತಿದೆ. ಇನ್ನೂ ಎರಡು ದಿನ ರಾಯಚೂರು ಜಿಲ್ಲಾ ಪ್ರವಾಸ ಕೈಗೊಂಡಿರುವೆ’ ಎಂದು ಅವರು ಹೇಳಿದರು.

ADVERTISEMENT

ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ,‘ಜೆಡಿಎಸ್ ಹೃದಯವಂತಿಕೆಯುಳ್ಳ ಮತ್ತು ಜನಪರ ಪಕ್ಷವಾಗಿದೆ. ಸಾಮಾನ್ಯರನ್ನು ಗುರುತಿಸಿ ಸ್ಥಾನಮಾನ ನೀಡುವ ಏಕೈಕ ಪಕ್ಷ ಇದಾಗಿದೆ. ಯುವ ಸಂಸದ ಪ್ರಜ್ವಲ್ ರೇವಣ್ಣ ನೇತೃತ್ವದಲ್ಲಿ ಸಾಮಾಜಿಕ ಜಾಲತಾಣ ವಿಭಾಗದ ಸದಸ್ಯರಿಗೆ ಆಯಾ ವಿಧಾನಸಭಾ ಕ್ಷೇತ್ರದಲ್ಲಿ ತರಬೇತಿ ನೀಡಲಾಗುತ್ತಿದೆ. ಎಲ್ಲರೂ ಸೇರಿ ಪಕ್ಷವನ್ನು ಬಲಪಡಿಸೋಣ’ ಎಂದು ಅವರು ಹೇಳಿದರು.

ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ,‘ಜೆಡಿಎಸ್ ಪಕ್ಷಕ್ಕೆ ಒಂದು ಸಿದ್ಧಾಂತ ಇದೆ. ಆ ನೆಲೆಗಟ್ಟಿನಲ್ಲಿ ಪಕ್ಷದ ಚಟುವಟಿಕೆಗಳು ನಡೆಯುತ್ತವೆ. ಜೆಡಿಎಸ್ ಶಾಸಕರು ಜನರೊಡನೆ ಇರುತ್ತಾರೆಂಬ ವಿಶೇಷ ಗೌರವ ಇದೆ. ಇದು ನಮಗೆ ಪಕ್ಷ ಕಲಿಸಿಕೊಟ್ಟ ಪಾಠವಾಗಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ಮಾರ್ಗದರ್ಶನದಲ್ಲಿ ಕ್ಷೇತ್ರದಲ್ಲಿದ್ದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡಿದ್ದೇವೆ’ ಎಂದು ಅವರು ಹೇಳಿದರು.

ಪಕ್ಷದ ಮುಖಂಡರಾದ ಕರಿಯಮ್ಮ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮುಖಂಡರಾದ ಸಿದ್ದು ಬಂಡಿ, ಬುಡ್ಡನಗೌಡ, ರಾಮನಗೌಡ ಏಗನೂರು, ರಾಮಕೃಷ್ಣ, ಬಸವರಾಜ, ಶಿವಶಂಕರ ವಕೀಲ, ಜೆಡಿಎಸ್ ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ ಹಾಗೂ ಯುವ ಮುಖಂಡ ಸುಮಿತ್ ತಡಕಲ್ ಇದ್ದರು.

‘ಕುಟುಂಬ ರಾಜಕಾರಣ ಎಲ್ಲ ಪಕ್ಷದಲ್ಲಿದೆ’
‘ಕುಟುಂಬ ರಾಜಕಾರಣದ ವಿಚಾರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬವನ್ನು ಟೀಕಿಸುವ ನೈತಿಕತೆ ಯಾರಿಗೂ ಇಲ್ಲ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಲ್ಲಿಯೂ ಕುಟುಂಬ ರಾಜಕಾರಣ ನಡೆಯುತ್ತಿದೆ’ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನೆಯಲ್ಲಿ ಮೂವರು, ಕೆಪಿಸಿಸಿ ಅಧ್ಯಕ್ಷೆ ಡಿ.ಕೆ.ಶಿವಕುಮಾರ ಮನೆಯಲ್ಲಿ ಮೂವರು, ಸಿಎಂ ಉದಾಸಿ, ಸತೀಶ ಜಾರಕಿಹೊಳಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ನಾಯಕರೂ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಆದಾಗ್ಯೂ ಕೇವಲ ದೇವೇಗೌಡರ ಕುಟುಂಬವನ್ನು ಮಾತ್ರ ದೂಷಿಸುವುದು ಸರಿಯಲ್ಲ. ಡಾಕ್ಟರ್ ಮಕ್ಕಳು ಡಾಕ್ಟರ್ ಆಗುತ್ತಿಲ್ಲವೇ, ಹಾಗೆಯೇ ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳು ಆಗುವುದರಲ್ಲಿ ತಪ್ಪೇನಿದೆ’ ಎಂದು ಹೇಳಿದರು.

ಶಾಸಕರಾದ ವೆಂಕಟರಾವ್ ನಾಡಗೌಡ, ರಾಜಾ ವೆಂಕಟಪ್ಪ ನಾಯಕ, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮುಖಂಡರಾದ ಚಂದ್ರುಭೂಪಾಲ ನಾಡಗೌಡ, ಬಿ.ಶ್ರೀಹರ್ಷ, ಶಿವಶಂಕರ ವಕೀಲ, ಕೆ.ಹನುಮೇಶ, ಅಜಯ್ ದಾಸರಿ, ಸೈಯ್ಯದ್ ಆಸೀಫ್, ಜೀವನ್, ಸಲ್ಮಾನ್ ಹಾಗೂ ಬಾಬಾ ಕೋಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.