ADVERTISEMENT

ಹೊಸಳ್ಳಿ: ‘ಮನೆ-ಮನೆಗೆ ಮಹಾನಾಯಕ’

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 13:30 IST
Last Updated 30 ಜೂನ್ 2022, 13:30 IST
ಸಿಂಧನೂರು ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ಬುಧವಾರ ದಲಿತ ಸಾಹಿತ್ಯ ಪರಿಷತ್ ವತಿಯಿಂದ ನಡೆದ ‘ಮನೆ-ಮನೆಗೆ ಮಹಾನಾಯಕ’ ಮೂರನೇ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖಂಡರು ಭಾಗವಹಿಸಿರುವುದು
ಸಿಂಧನೂರು ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ಬುಧವಾರ ದಲಿತ ಸಾಹಿತ್ಯ ಪರಿಷತ್ ವತಿಯಿಂದ ನಡೆದ ‘ಮನೆ-ಮನೆಗೆ ಮಹಾನಾಯಕ’ ಮೂರನೇ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖಂಡರು ಭಾಗವಹಿಸಿರುವುದು   

ಸಿಂಧನೂರು: ‘ದಮನಿತರ ದನಿಯಾಗಿ, ಶೋಷಿತರಿಗೆ ಕಿವಿಯಾಗಿ, ಸ್ವಾಭಿಮಾನದ ಬದುಕಿನ ದಾರಿ ತೋರಿಸಿದ ಮಹಾನಾಯಕ ಹಾಗೂ ಇಡೀ ವಿಶ್ವವೇ ಮೆಚ್ಚಿ ಕೊಂಡಾಡುವ ಶ್ರೇಷ್ಠ ಸಂವಿಧಾನ ರಚನೆಯ ರೂವಾರಿ ಬಾಬಾಸಾಹೇಬ್ ಅಂಬೇಡ್ಕರ್’ ಎಂದು ಉಪನ್ಯಾಸಕ ಬಸವರಾಜ ಬಳಿಗಾರ ಹೇಳಿದರು.

ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ದಲಿತ ಸಾಹಿತ್ಯ ಪರಿಷತ್ ವತಿಯಿಂದ ಬುಧವಾರ ನಡೆದ ‘ಮನೆ-ಮನೆಗೆ ಮಹಾನಾಯಕ’ ಮೂರನೇ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

‘ಸಮಾನತೆಯ ಸ್ವಾತಂತ್ರ್ಯಕ್ಕಾಗಿ ಅಂಬೇಡ್ಕರ್ ಅವರು ಹಸಿವಿನಿಂದ ಬಳಲಿದರೇ ವಿನಃ ಜ್ಞಾನದ ಹಸಿವಿನಿಂದ ಬಳಲಿಲ್ಲ. ಪ್ರಜಾಪ್ರಭುತ್ವದಲ್ಲಿ ಸಂವಿಧಾನದ ಆಶಯಗಳು ಸರ್ವರ ಅಭ್ಯುದಯದ ಪರಿಕಲ್ಪನೆಯಾಗಿದೆ. ಅಂಬೇಡ್ಕರ್ ಅವರನ್ನು ಓದುವುದೆಂದರೆ ವಿಭಿನ್ನವಾದ ಜಗತ್ತನ್ನು ಪ್ರವೇಶಿಸಿದಂತೆ. ಜ್ಞಾನ ಮತ್ತು ಅನ್ನದ ಪ್ರತಿರೂಪವೇ ಬಾಬಾಸಾಹೇಬರು ಕೊಟ್ಟ ಸಂವಿಧಾನ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಪರಿಷತ್ ಸಹಕಾರ್ಯದರ್ಶಿ ದುರುಗಪ್ಪ ಗುಡದೂರು ಮಾತನಾಡಿ, ‘ಭಾರತ ಸರ್ವಜನಾಂಗದ ಶಾಂತಿಯ ತೋಟ. ಆ ತೋಟದಲ್ಲಿ ಸಮಾನತೆಯ ಹೂವೇ ಸಂವಿಧಾನ. ಅಂತಹ ಸಂವಿಧಾನವನ್ನು ಕೊಟ್ಟ ಅಂಬೇಡ್ಕರ್ ಅವರನ್ನು ಸದಾ ಸ್ಮರಣೆ ಮಾಡುವ ಮೂಲಕ ಭಾರತದ ಅಖಂಡತೆಯನ್ನು ಎತ್ತಿ ಹಿಡಿಯಬೇಕು’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಲಿಂಗಪ್ಪ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಚಾಲಕ ರಮೇಶ ಹಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಆತಿಥ್ಯ ವಹಿಸಿದ್ದ ಶರಣಪ್ಪ ಹೊಸಳ್ಳಿ ದಂಪತಿಯನ್ನು ಮತ್ತು ನಿತ್ಯ ಶಾಲಾ ಮಕ್ಕಳಿಗೆ ರಸ್ತೆ ದಾಟಿಸುವ ಕೆಲಸ ಮಾಡುವ ಯೇಸಪ್ಪ ಅವರನ್ನು ಸನ್ಮಾನಿಸಲಾಯಿತು.

ಪರಿಷತ್ ಅಧ್ಯಕ್ಷ ಡಾ.ಹುಸೇನಪ್ಪ ಅಮರಾಪುರ, ಉಪಾಧ್ಯಕ್ಷ ಎಚ್.ಎಫ್.ಮಸ್ಕಿ, ಸಹಾಯಕ ಪ್ರಾಧ್ಯಾಪಕ ಡಾ.ವೆಂಕಟನಾರಾಯಣ ಮಿರಿಯಮ್, ಮುಖ್ಯಶಿಕ್ಷಕಿ ವೀಣಾ, ವೀರೇಶ ಹೊಸಳ್ಳಿ, ಹನುಮಂತಪ್ಪ ಗೋಡಿಹಾಳ, ನಿವೃತ್ತ ನೌಕರ ಪರಶುರಾಮಪ್ಪ, ಪಾಮೇಶ, ಅಶೋಕ ನಲ್ಲ, ಜೆಮೇಶಾ, ನಿಂಗಪ್ಪ ಗವಿಮನಿ, ಶರಣಯ್ಯಸ್ವಾಮಿ, ಪ್ರಾಚಾರ್ಯ ಮುರುಡಯ್ಯಸ್ವಾಮಿ, ಡಾ.ಅರುಣಕುಮಾರ ಬೇರ್ಗಿ, ರಾಮಣ್ಣ ಹಿರೇಬೇರ್ಗಿ, ಕೆ.ಮಹಿಬೂಬ್, ಚಂದ್ರಶೇಖರ ಗೊರಬಾಳ, ಡಾ.ಹನುಮಂತಪ್ಪ ಚಂದಲಾಪುರ, ಚಂದ್ರಶೇಖರ ವಲ್ಕಂದಿನ್ನಿ, ಈಶ್ವರ ಹಲಗಿ, ಬಸವರಾಜ ಯಲಬುರ್ಗಿ, ಕಾಳಿಂಗರೆಡ್ಡಿ, ಪಂಪಾಪತಿ ಅಯ್ಯಾಳಿ, ಅಮರೇಶಪ್ಪ ಹಾವೋಜಿ, ರವಿ ಮಲ್ಲಾಪುರ, ಶಿವರಾಜ ಸಾಸಲಮರಿ, ತುಳಸಿದಾಸ ಇದ್ದರು.

ರವಿ ನವಲಹಳ್ಳಿ ಸಮತಾಗೀತೆ ಹಾಡಿದರು. ಬಸವರಾಜ ಚಿಗರಿ ಸ್ವಾಗತಿಸಿದರು. ಅಯ್ಯಪ್ಪ ಹರೇಟನೂರು ನಿರೂಪಿಸಿದರು. ಬಿ.ರವಿಕುಮಾರ ಸಾಸಲಮರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.