ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ಶಾಂತಿಯುತ

ಜಿಲ್ಲೆಯಲ್ಲಿ ಪ್ರಥಮ ಭಾಷಾ ಪರೀಕ್ಷೆಗೆ 993 ವಿದ್ಯಾರ್ಥಿಗಳು ಗೈರು ಹಾಜರಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 13:52 IST
Last Updated 21 ಮಾರ್ಚ್ 2019, 13:52 IST
ರಾಯಚೂರಿನ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಗುರುವಾರ ಪರೀಕ್ಷೆ ಬರೆದರು
ರಾಯಚೂರಿನ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಗುರುವಾರ ಪರೀಕ್ಷೆ ಬರೆದರು   

ರಾಯಚೂರು: ಜಿಲ್ಲೆಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಶಾಂತಿಯುತವಾಗಿ ನಡೆದವು. ಯಾವುದೇ ಡಿಬಾರ್‌ ಅಥವಾ ನಕಲು ಪ್ರಕರಣಗಳು ಕಂಡು ಬಂದಿಲ್ಲ.

ಲಿಂಗಸುಗೂರಿನಲ್ಲಿ ಕನ್ನಡ ಪ್ರಶ್ನೆಪತ್ರಿಕೆ ವ್ಯಾಟ್ಸ್‌ಅ್ಯಪ್‌ನಲ್ಲಿ ಹರಿದಾಡುತ್ತಿತ್ತು ಎನ್ನುವ ಬಗ್ಗೆ ಮಾತುಗಳು ಕೇಳಿ ಬಂದವು. ’ಪ್ರಶ್ನೆಪತ್ರಿಕೆ ಎಲ್ಲಿಯೂ ಸೋರಿಕೆಯಾಗಿಲ್ಲ. ಅಚ್ಚುಕಟ್ಟಾಗಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ವದಂತಿಗೆ ವಿದ್ಯಾರ್ಥಿಗಳು ತಲೆಕೆಡಿಸಿಕೊಳ್ಳಬಾರದು’ ಎಂದು ಲಿಂಗಸುಗೂರು ಕ್ಷೇತ್ರ ಶಿಕ್ಷಣಾಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30 ರವರೆಗೂ ಪರೀಕ್ಷಾ ಸಮಯ ನಿಗದಿ ಮಾಡಲಾಗಿತ್ತು. ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಒಟ್ಟು 25,659 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದಕ್ಕೆ ನೋಂದಣೆ ಮಾಡಿಕೊಂಡಿದ್ದರು. ಅದರಲ್ಲಿ 993 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರುಹಾಜರಿಯಾದರು. ರಾಯಚೂರು ತಾಲ್ಲೂಕಿನಲ್ಲಿ 463 ಅತಿಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಿಯಾಗಿದ್ದರು.

ADVERTISEMENT

ಸಿಂಧನೂರಿನಲ್ಲಿ 170, ಮಾನ್ವಿ 114, ಲಿಂಗಸುಗೂರು 120 ಹಾಗೂ ದೇವದುರ್ಗ ತಾಲ್ಲೂಕಿನಲ್ಲಿ 126 ವಿದ್ಯಾರ್ಥಿಗಳು ಮೊದಲ ದಿನದ ಪರೀಕ್ಷೆಗೆ ಗೈರು ಹಾಜರಿಯಾಗಿದ್ದರು. ಪರೀಕ್ಷೆ ನೋಂದಣಿ ಮಾಡಿಕೊಂಡಿದ್ದ 11,701 ವಿದ್ಯಾರ್ಥಿನಿಯರ ಪೈಕಿ 11,373 ವಿದ್ಯಾರ್ಥಿನಿಯರು ಪರೀಕ್ಷೆ ಬರೆದರು. 328 ವಿದ್ಯಾರ್ಥಿನಿಯರು ಗೈರುಹಾಜರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.