ADVERTISEMENT

ಬಸ್ ಚಾಲಕನಿಂದ ವಿದ್ಯಾರ್ಥಿಯ ಮೇಲೆ ಹಲ್ಲೆ ಆರೋಪ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:03 IST
Last Updated 3 ಜುಲೈ 2025, 15:03 IST

ಸಿಂಧನೂರು: ತಾಲ್ಲೂಕಿನ ಗುಡದಮ್ಮ ಕ್ಯಾಂಪ್‌ನ ಖಾಸಗಿ ಶಾಲೆವೊಂದರ ಚಾಲಕ ವಿದ್ಯಾರ್ಥಿಯ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆ ಎಸಗಿದ್ದಾರೆ ಎಂದು ವಿದ್ಯಾರ್ಥಿಯ ತಂದೆ ವೆಂಕಟೇಶ ದೂರಿದ್ದಾರೆ.

ಎರಡನೇ ತರಗತಿಯಲ್ಲಿ ಅಭ್ಯಾಸ ಮಾಡುವ ಪುತ್ರ ಅಖಿಲ್ ಸೋಮವಾರ ತಿಡಿಗೋಳ ಗ್ರಾಮದಿಂದ ಗುಡದಮ್ಮ ಕ್ಯಾಂಪಿಗೆ ಖಾಸಗಿ ಶಾಲೆಯ ಬಸ್ ಮೂಲಕ ಶಾಲೆಗೆ ಬಂದಿದ್ದು, ಇಳಿಯುವ ಸಮಯದಲ್ಲಿ ಚಾಲಕ ಕಟ್ಟಿಗೆಯಿಂದ ಹೊಡೆದು ಹಲ್ಲೆಗೊಳಿಸಿದ್ದು, ಮೈತುಂಬ ಬಾಸುಂಡೆ ಬಂದಿವೆ. ಈ ಕುರಿತು ತುರ್ವಿಹಾಳ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದು ತಿಳಿಸಿದರು.

ಘಟನೆ ಕುರಿತು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವಿರುಪಣ್ಣ ಸಾಹುಕಾರ ಮಾಹಿತಿ ನೀಡಿ,‘ಬಸ್‍ನಿಂದ ವಿದ್ಯಾರ್ಥಿಯು ಕೆಳಗೆ ಜಿಗಿಯಲು ಪ್ರಯತ್ನಿಸಿದ ಕಾರಣಕ್ಕೆ ಹಿಡಿದು ಕುಳ್ಳಿರಿಸಿ ಕೈಯಿಂದ ತಲೆಗೆ ಬಡಿದಿರುವುದಾಗಿ ಚಾಲಕ ಹೇಳಿದ್ದಾನೆ. ಆದಾಗ್ಯೂ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

‘ಮಾಧ್ಯಮದಲ್ಲಿ ವರದಿ ನೋಡಿ ವಿದ್ಯಾರ್ಥಿಯ ಪಾಲಕ ವೆಂಕಟೇಶ ಅವರನ್ನು ಸಂಪರ್ಕಿಸಿ ಘಟನೆಯ ಕುರಿತು ದೂರು ನೀಡುವಂತೆ ಕೋರಿದ್ದು, ಅವರು ಸ್ಪಂದನೆ ನೀಡಿಲ್ಲ’ ಎಂದು ತುರ್ವಿಹಾಳ ಪೊಲೀಸ್ ಠಾಣೆಯ ಸಬ್‍ ಇನ್‌ಸ್ಪೆಕ್ಟರ್ ಸುಜಾತ ಪ್ರಜಾವಾಣಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.