ಪ್ರಜಾವಾಣಿ ವಾರ್ತೆ
ರಾಯಚೂರು: ಆನೆಗೊಂದಿಯ ನವ ವೃಂದಾವನ ಗಡ್ಡೆಯಲ್ಲಿನ ಯತಿಗಳ ವೃಂದಾವನ ಪೂಜೆ ವಿಚಾರದ ವಿವಾದವನ್ನು ಸೌಹಾರ್ದ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠ ಹಾಗೂ ಉತ್ತರಾದಿಮಠದ ಶ್ರೀಗಳು ಚೆನ್ನೈನಲ್ಲಿ ಗುರುವಾರ ಭೇಟಿ ಮಾಡಿದರು.
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂಜಯ್ ಕೌಲ್ ಮಧ್ಯಸ್ಥಿಕೆಯಲ್ಲಿ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಹಾಗೂ ಉತ್ತರಾದಿಮಠದ ಸತ್ಯಾತ್ಮ ತೀರ್ಥರು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ವೇಳೆ ಪ್ರತಿಕ್ರಿಯೆ ನೀಡಿದ ಉಭಯ ಶ್ರೀಗಳು, ‘ಉಭಯ ಮಠಗಳ ಭಕ್ತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ಸಮಾಜದ ಹಿತಕ್ಕಾಗಿ ಆದಷ್ಟು ಬೇಗನೆ ವಿವಾದಗಳು ಪರಿಹಾರವಾಗಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕಿದೆ. ಎಲ್ಲರೂ ಒಗ್ಗಟ್ಟಾಗಿ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡುತ್ತೇವೆ’ ಎಂದು ಹೇಳಿದರು.
ಆನೆಗೊಂದಿಯ ನವ ವೃಂದಾವನ ಗಡ್ಡೆಯಲ್ಲಿನ ಯತಿಗಳ ವೃಂದಾವನ ಪೂಜೆ ಹಕ್ಕು ಪಡೆದುಕೊಳ್ಳುವ ವಿಷಯದಲ್ಲಿ ಎರಡು ಮಠಗಳ ನಡುವೆ ವಿವಾದವಿದೆ. ಯತಿಗಳ ಆರಾಧನೆ ವೇಳೆ ನವವೃಂದಾವನ ಗಡ್ಡೆಯಲ್ಲಿ ಬಹಳ ಸೂಕ್ಷ್ಮ ಪರಿಸ್ಥಿತಿ ನಿರ್ಮಾಣವಾಗುತ್ತದೆ. ವಿವಾದ ಇತ್ಯರ್ಥಕ್ಕೆ ಉಭಯ ಮಠಗಳು ನ್ಯಾಯಾಲಯದ ಮೆಟ್ಟಿಲೇರಿವೆ.
ಸ್ಥಳೀಯ ನ್ಯಾಯಾಲಯಗಳು ಎರಡೂ ಮಠಕ್ಕೂ ಒಂದೂವರೆ ದಿನದ ಆಧಾರದಲ್ಲಿ ಪೂಜೆಗೆ ಅವಕಾಶ ಮಾಡಿಕೊಟ್ಟಿವೆ. ಆದರೆ, ವಿವಾದ ಇತ್ಯರ್ಥಗೊಂಡಿಲ್ಲ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸುಪ್ರೀಂಕೋರ್ಟ್ ಸೂಚನೆ ನೀಡಿರುವುದು ಭಕ್ತರಲ್ಲಿ ಆಶಾಭಾವನೆ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.