ಲಿಂಗಸುಗೂರು: ಐತಿಹಾಸಿಕ ಗ್ರಾಮವಾದ ಕಸಬಾ ಲಿಂಗಸುಗೂರು ಸ್ಥಳೀಯ ಪುರಸಭೆ ವ್ಯಾಪ್ತಿಗೆ ಒಳಪಟ್ಟಿದ್ದರು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ.
ತಾಲ್ಲೂಕು ಕೇಂದ್ರದಿಂದ ಕೇವಲ 4 ಕಿ.ಮೀ. ಅಂತರದಲ್ಲಿರುವ ಕಸಬಾ ಲಿಂಗಸುಗೂರು ಗ್ರಾಮದಿಂದ ಸ್ಥಳೀಯ ಪುರಸಭೆಗೆ ಐವರು ಆಯ್ಕೆಗೊಂಡಿದ್ದಾರೆ. 7ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮಸ್ಥರು ಭಾಗಶಃ ಕೃಷಿ ಚಟುವಟಿಕೆಗಳನ್ನೆ ಅವಲಂಬಿಸಿದ್ದಾರೆ. ಪುರಸಭೆ ವ್ಯಾಪ್ತಿಗೆ ಒಳಪಡುವುದರಿಂದ ಕೃಷಿ ಇಲಾಖೆ ಯಾವೊಂದು ಸೌಲಭ್ಯ ದೊರೆಯುತ್ತಿಲ್ಲ ಎಂದು ಅಮರಗುಂಡಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪುರಸಭೆ ಆಡಳಿತ ಮಂಡಳಿ ಸ್ವಲ್ಪ ಮಟ್ಟಿಗೆ ಕುಡಿವ ನೀರಿನ ಸೌಲಭ್ಯ ಕಲ್ಪಿಸಿದ್ದು ಬಿಟ್ಟರೆ ಉಳಿದೆಲ್ಲ ಸೌಲಭ್ಯ ಗಗನ ಕುಸುಮ. ವಾರ್ಡ್‌ಗಳ ಅಭಿವೃದ್ಧಿಗೆ ನೀಲ ನಕ್ಷೆ ಸಿದ್ಧಪಡಿಸದ ಎಂಜಿನಿಯರ್‌ಗಳ ನಿರ್ಲಕ್ಷ್ಯದಿಂದ ಗುತ್ತಿಗೆದಾರರು, ಚುನಾಯಿತ ಪ್ರತಿನಿಧಿಗಳು 7ದಶಕಗಳಲ್ಲಿ ಮನಸೋ ಇಚ್ಛೆ ಚರಂಡಿ, ರಸ್ತೆ ಅಭಿವೃದ್ಧಿ ಮಾಡಿದ್ದರಿಂದ ಇಡಿ ಗ್ರಾಮ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ ಎನ್ನುತ್ತಾರೆ ಗ್ರಾಮಸ್ಥರು.
ಅವೈಜ್ಞಾನಿಕ ಚರಂಡಿ, ರಸ್ತೆಗಳ ನಿರ್ಮಾಣದಿಂದ ನಿತ್ಯ ನಲ್ಲಿ ನೀರಿನಿಂದ ರಸ್ತೆ ಜಲಾವೃತವಾಗುತ್ತವೆ. ಗ್ರಾಮದ ಕೆಲವರು ಕೂಡ ಚರಂಡಿ ಮೇಲೆ ಕಟ್ಟಿಗೆ, ಕುಳ್ಳು ಇಟ್ಟುಕೊಂಡಿದ್ದರಿಂದ ಚರಂಡಿಗಳ ಮೂಲಕ ನೀರು ಹರಿಯದೆ ರಸ್ತೆ ಮೇಲೆ ಹರಿದು ದುರ್ನಾತ ಬೀರುತ್ತಿದೆ.
ಸ್ವಚ್ಛಭಾರತ ಅಭಿಯಾನ ಯೋಜನೆಗೆ ಕೋಟ್ಯಂತರ ಹಣ ಖರ್ಚು ಮಾಡುತ್ತಿರುವ ಪುರಸಭೆ ರಸ್ತೆ, ಚರಂಡಿಗಳ ಸ್ವಚ್ಛತೆಗೆ ಮುಂದಾಗುತ್ತಿಲ್ಲ. ಗ್ರಾಮದ ವಾರ್ಡ್ ರಸ್ತೆಗಳು, ಸುತ್ತಮುತ್ತ ತಿಪ್ಪೆಗುಂಡಿಗಳ ಹಾವಳಿ ಹೆಚ್ಚಾಗಿದ್ದು ಪರ್ಯಾಯ ವ್ಯವಸ್ಥೆಗೆ ಪುರಸಭೆ ಮುಂದಾಗುತ್ತಿಲ್ಲ. ಪ್ರತಿ ವರ್ಷ ಕೋಟ್ಯಂತರ ಅನುದಾನ ಬಂದರು ಅಭಿವೃದ್ಧಿಗೆ ಮಲತಾಯಿ ಧೋರಣೆ ಅನುಸರಿಸುತ್ತಾರೆ ಎಂದು ರಮೇಶ ನಾಯಕ ಆಕ್ರೋಶ ವ್ಯಕ್ತಪಡಿಸಿದರು.
ಬಹುತೇಕ ಜನರಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣ ಸವಾಲಾಗಿ ಪರಿಣಮಿಸಿದೆ. ಸಾಮೂಹಿಕ ಶೌಚಾಲಯ ಕೊರತೆ ಇರುವುದರಿಂದ ಬಯಲು ಅನಿವಾರ್ಯವಾಗಿದೆ. ಮಹಿಳೆಯರು ಮಾನ ಕಳೆದುಕೊಂಡು ಬದುಕು ನಡೆಸುತ್ತಿದ್ದೇವೆ. ಅಧಿಕಾರಿ, ಚುನಾಯಿತ ಪ್ರತಿನಿಧಿಗಳಿಗೆ ಸಮಸ್ಯೆ ಗಮನಕ್ಕೆ ತಂದರು ಪ್ರಯೋಜನವಾಗುತ್ತಿಲ್ಲ ಎಂದು ಗಂಗಮ್ಮ ಗುಂತಗೋಳ, ನಾಗಮ್ಮ ಗುಜ್ಜಲ ಹಿಡಿಶಾಪ ಹಾಕಿದರು.
ಏಳು ದಶಕಗಳ ಅವಧಿಯಲ್ಲಿ ಯಾವೊಬ್ಬ ಪ್ರತಿನಿಧಿಗಳು, ಅಧಿಕಾರಿಗಳು ಕಸಬಾ ಲಿಂಗಸುಗೂರು ಅಭಿವೃದ್ಧಿಗೆ ಪೂರ್ಣ ಪ್ರಮಾಣದ ಸೌಲಭ್ಯ ಕಲ್ಪಿಸದಿರುವುದು ನೋವಿನ ಸಂಗತಿ
- ಬಸವರಾಜ ಯತಗಲ್,ಸದಸ್ಯರು, ಪುರಸಭೆ, ಲಿಂಗಸುಗೂರು.
ಬಿ.ಎ. ನಂದಿಕೋಲಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.