ADVERTISEMENT

ಜಾಲಹಳ್ಳಿ: ತಾಲ್ಲೂಕು ಕೇಂದ್ರ ಘೋಷಣೆಗೆ ಒತ್ತಾಯ

ಜಾಲಹಳ್ಳಿ ತಾಲ್ಲೂಕು ಘೋಷಣೆ ಹೋರಾಟ ಸಮಿತಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 8:41 IST
Last Updated 1 ಅಕ್ಟೋಬರ್ 2020, 8:41 IST
ಜಾಲಹಳ್ಳಿ ಪಟ್ಟಣದಲ್ಲಿ ಬುಧವಾರ ತಾಲ್ಲೂಕು ಘೋಷಣೆ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು
ಜಾಲಹಳ್ಳಿ ಪಟ್ಟಣದಲ್ಲಿ ಬುಧವಾರ ತಾಲ್ಲೂಕು ಘೋಷಣೆ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು   

ಜಾಲಹಳ್ಳಿ: ದೇವದುರ್ಗ ತಾಲ್ಲೂಕಿನಲ್ಲಿಯೇ ಹೆಚ್ಚು ನಾಗರಿಕ ಸೌಲಭ್ಯ ಹೊಂದಿರುವ ಜಾಲಹಳ್ಳಿ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ ಬುಧವಾರ ಪಕ್ಷಾತೀತವಾಗಿ ಪಟ್ಟಣದಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಯಿತು.

ತಾಲ್ಲೂಕು ಘೋಷಣೆ ಹೋರಾಟ ಸಮಿತಿ ಅಧ್ಯಕ್ಷ ಕೆರಿಲಿಂಗಪ್ಪ ನಾಡಗೌಡ ಮಾತನಾಡಿ, ದೇವದುರ್ಗ ತಾಲ್ಲೂಕನ್ನು ಅಖಂಡವಾಗಿ ಉಳಿಸದೇ ತಮ್ಮ ಗ್ರಾಮವನ್ನು ಶಾಸಕ ಕೆ.ಶಿವನಗೌಡ ನಾಯಕ ಅವರು ಪ್ರಭಾವ ಬಳಸಿಕೊಂಡು ಅರಕೇರಾ ಗ್ರಾಮವನ್ನು ತಾಲ್ಲೂಕು ಘೋಷಣೆ ಮಾಡಿಕೊಂಡಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರು ಮೊದಲು ತಾಲ್ಲೂಕಿನಲ್ಲಿ ದೊಡ್ಡ ಹೋಬಳಿ ಯಾವುದು ಎನ್ನುವುದನ್ನು ಗುರುತಿಸಬೇಕಾಗಿತ್ತು. ಯಾವ ಮಾನದಂಡದ ಅಧಾರದ ಮೇಲೆ ಅರಕೇರಾ ಗ್ರಾಮವನ್ನು ತಾಲ್ಲೂಕು ಎಂದು ಘೋಷಣೆ ಮಾಡಲಾಗಿದೆ ಎನ್ನುವುದನ್ನು ಶಾಸಕರು ಹಾಗೂ ಕಂದಾಯ ಸಚಿವ ಆರ್.ಆಶೋಕ ಅವರು ಜನತೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಶಾಸಕರನ್ನು ಪ್ರಶ್ನೆ ಮಾಡಿದರೆ, ಅವರ ಹಿಂಬಾಲಕರು ನಿಮ್ಮನ್ನು ನೋಡಿಕೊಳ್ಳುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಸುತ್ತಾರೆ ಇದು ಕೂಡ ಖಂಡನೀಯ ಎಂದರು.

ಸಮಿತಿ ಮುಖಂಡ ನರಸಣ್ಣ ನಾಯಕ ಮಾತನಾಡಿ, ಶಾಸಕರು ಪ್ರತಿ ಸಭೆ ಸಮಾರಂಭಗಳಲ್ಲಿ ತಾಲ್ಲೂಕಿನ ಅಭಿವೃದ್ಧಿಗಾಗಿ ಸಾವಿರಾರೂ ಕೋಟಿ ಅನುದಾನ ತರಲಾಗಿದೆ ಎಂದು ಹೇಳುತ್ತಾರೆ. ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ ಎಂದರು.

ಜಾಲಹಳ್ಳಿ ತಾಲ್ಲೂಕು ಘೋಷಣೆ ಮಾಡಬೇಕು. ಇಲ್ಲವಾದರೆ, ಪ್ರತಿಭ ಟನೆಗಳ ಸ್ವರೂಪ ಬದಲಾವಣೆ ಮಾಡ ಬೇಕಾಗುತ್ತದೆ ಎಂದು ಹೇಳಿದರು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಪಟ್ಟಣದ ವ್ಯಾಪಾರ ಸ್ಥಗಿತಗೊಂಡಿದ್ದವು. ತಿಂಥಣಿ ಬ್ರಿಜ್‌– ಕಲ್ಮಲಾ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.

ಗೋಲ್ಲಪಲ್ಲಿ ವಾಲ್ಮೀಕಿ ಗುರುಪೀಠದ ವರದಾನೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಜೆಡಿಎಸ್‌ ತಾಲ್ಲೂಕು ಸಮಿತಿ ಅಧ್ಯಕ್ಷ ಬುಡ್ಡನಗೌಡ ಪಾಟೀಲ್‌, ತಾಲ್ಲೂಕು ಘೋಷಣೆ ಹೋರಾಟ ಸಮಿತಿ ಮುಖಂಡರಾದ ಅದನಗೌಡ ಪಾಟೀಲ್‌, ವಿಠೋಬ ನಾಯಕ ದಿವಾನ, ಸಿದ್ದನಗೌಡ ಪಾಟೀಲ್‌, ಶಿವನಗೌಡ ಕಕ್ಕಲದೊಡ್ಡಿ, ಯಂಕೋಬ ನಾಯಕ ದೊರೆ ಗಲಗ, ರಾಜಾ ವಾಸುದೇವ ನಾಯಕ, ಮೇಲಪ್ಪ ಬಾವಿಮನಿ, ಎನ್‌.ಲಿಂಗಪ್ಪ, ಶಬ್ಬೀರ್‌ ಅಹ್ಮದ್‌, ಎಚ್‌.ಪಿ ಜಗದೀಶ, ಹುಸೇನಪ್ಪ ಗುತ್ತಿಗೆದಾರ, ಭೀಮಣ್ಣ ಗುಮೇದಾರ, ರಂಗಣ್ಣ ಕೋಲ್ಕಾರ್‌, ಮೌನೇಶ ದಾಸರ್‌, ವೆಂಕಟೇಶ, ಪಿ.ನಂದಪ್ಪ, ರಂಗನಾಥ ಸೇರಿದಂತೆ ಜಾಲಹಳ್ಳಿ ಹೋಬಳಿ ವ್ಯಾಪ್ತಿಯ 11 ಗ್ರಾಮ ಪಂಚಾಯಿತಿಉ ಗ್ರಾಮಸ್ಥರು ಹಾಗೂ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.