ADVERTISEMENT

ಟಿಬಿ ಡ್ಯಾಂಗೆ ಗೇಟ್‌ ಅಳವಡಿಸಲು ನಿರ್ಲಕ್ಷ್ಯ: ಆರೋ‍ಪ

ಸರ್ಕಾರ ಗಾಢ ನಿದ್ರೆಯಿಂದ ಎಚ್ಚರಗೊಳ್ಳದಿದ್ದರೆ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 6:52 IST
Last Updated 19 ಆಗಸ್ಟ್ 2025, 6:52 IST
ವೀರನಗೌಡ ಪಾಟೀಲ
ವೀರನಗೌಡ ಪಾಟೀಲ   

ರಾಯಚೂರು: ‘ತುಂಗಭದ್ರಾ ಜಲಾಶಯದ ಗೇಟ್‌ಗಳ ವಿಷಯದಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯದ ತಜ್ಞ ಸಮಿತಿ ಮುಂಚಿತವಾಗಿ ಎಚ್ಚರಿಕೆ ನೀಡಿದ್ದರೂ ರಾಜ್ಯ ಸರಕಾರ ಅದನ್ನು ನಿರ್ಲಕ್ಷಿಸಿದೆ. ಇದರ ಪರಿಣಾಮ ಪ್ರಸ್ತುತ ಜಲಾಶಯದಲ್ಲಿ ಕೇವಲ 80 ಟಿಎಂಸಿ ನೀರು ತುಂಬಿಸಿಕೊಳ್ಳಬೇಕಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರನಗೌಡ ಪಾಟೀಲ ಲೆಕ್ಕಿಹಾಳ್ ಹೇಳಿದರು.

‘ಜಲಾಶಯದ ಕೆಳಭಾಗದ 19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಹತ್ತಿ, ಮೆಣಸಿನಕಾಯಿ ಬೆಳೆಯಲಾಗಿದೆ. ಮಳೆ ಅವಲಂಬಿಸಿರುವ ಕಾರಣ ಎರಡು ತಿಂಗಳು ಮಾತ್ರ ಬೆಳೆಯುತ್ತಿದೆ. ಇಂತಹ ಸಮಯದಲ್ಲಿ ಗೇಟುಗಳ ಶಿಥಿಲಾವಸ್ಥೆ ಬಗ್ಗೆ ಸಚಿವ ಶಿವರಾಜ ತಂಗಡಗಿಯವರು ನೀಡುತ್ತಿರುವ ಹೇಳಿಕೆಗಳು ಬೇಜವಾಬ್ದಾರಿ ಮನಸ್ಥಿತಿ ತೋರಿಸುತ್ತಿವೆ’ ಎಂದು ನಗರದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸರ್ಕಾರದ ನಿರ್ಲಕ್ಷಯ ರೈತರಲ್ಲಿ ಭೀತಿ ಮೂಡಿದೆ. ತಮ್ಮ ಜವಾಬ್ದಾರಿ‌ ನಿಭಾಯಿಸಲು ಆಗದ ರಾಜ್ಯ ಸರ್ಕಾರದ ಸಚಿವರು ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಟೆಂಡರ್ ಪ್ರಕ್ರಿಯೆಯಲ್ಲಿ ತಡಮಾಡಿ, ಕೆಲಸ ಆರಂಭಿಸದೆ ಅವಸರದಲ್ಲಿ ನೀರು ತುಂಬಿಸಿರುವುದು ಸರಕಾರದ ನಿರ್ಲಕ್ಷ್ಯ. ಕಳೆದ ವರ್ಷ 19ನೇ ಗೇಟ್‌ ಮುರಿದು ಬಿದ್ದ ಬಳಿಕವೂ ಮೂರೇ ತಿಂಗಳ ಅವಧಿಯಲ್ಲಿ ಗೇಟ್‌ ಬದಲಾವಣೆ ಕಾರ್ಯ ಮಾಡಬಹುದಾಗಿತ್ತು. ಆದರೆ ಸರ್ಕಾರ ಗುತ್ತಿಗೆ ನೀಡುವಲ್ಲಿ ತಡಮಾಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮುಂಗಾರು ಮಳೆಯಿಂದ ಉಂಟಾಗುವ ನಷ್ಟಕ್ಕೆ ಎನ್‌ಡಿಆರ್‌ಎಫ್ ನಿಧಿಯಿಂದ ತಕ್ಷಣ ಪರಿಹಾರ ವಿತರಿಸಬೇಕು. ಸರ್ಕಾರ ಗಾಢ ನಿದ್ರೆಯಿಂದ ಎಚ್ಚರವಾಗದಿದ್ದರೆ ರೈತರನ್ನು ಬೀದಿಗೆ ಕರೆದು ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಕೂಡಲೇ ಈ ಭಾಗದ ಎಲ್ಲಾ ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ಪಕ್ಷಾತೀತವಾಗಿ ಧ್ವನಿ ಎತ್ತಬೇಕು. ರೈತರ ಹಿತ ಕಾಯಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ರೈತಮೋರ್ಚಾದ ಅಧ್ಯಕ್ಷರಾದ ಸಿದ್ದನಗೌಡ ನೆಲಹಾಳ, ಪ್ರಧಾನ ಕಾರ್ಯದರ್ಶಿ ಜಿ.ಶಂಕರರೆಡ್ಡಿ, ಸಂತೋಷ ರಾಜಗುರು, ಮಾಧ್ಯಮ ವಕ್ತಾರ ವಿ.ಪಿ.ರೆಡ್ಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT