ADVERTISEMENT

ಸಿಂಧನೂರು | ಅವ್ಯವಹಾರ ಆಗದಂತೆ ಎಚ್ಚರ: ಶಾಸಕ ಬಾದರ್ಲಿ

ಜ.3 ರಂದು ಅಂಬಾಮಠ ಜಾತ್ರಾ ಮಹೋತ್ಸವ; ಶಾಸಕರಿಂದ ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 7:24 IST
Last Updated 6 ಡಿಸೆಂಬರ್ 2025, 7:24 IST
ಸಿಂಧನೂರು ತಾಲ್ಲೂಕಿನ ಅಂಬಾಮಠದ ಅಂಬಾದೇವಿ ದೇವಸ್ಥಾನಕ್ಕೆ ಗುರುವಾರ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪೂರ್ವಸಿದ್ಧತೆಗಳ ಪ್ರಗತಿ ಪರಿಶೀಲನೆ ಮಾಡಿದರು 
ಸಿಂಧನೂರು ತಾಲ್ಲೂಕಿನ ಅಂಬಾಮಠದ ಅಂಬಾದೇವಿ ದೇವಸ್ಥಾನಕ್ಕೆ ಗುರುವಾರ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪೂರ್ವಸಿದ್ಧತೆಗಳ ಪ್ರಗತಿ ಪರಿಶೀಲನೆ ಮಾಡಿದರು    

ಸಿಂಧನೂರು: ‘ಅಂಬಾಮಠದ ಅಂಬಾದೇವಿ ದೇವಸ್ಥಾನದ ನೂತನ ಶಿಲಾಮಂಟಪ ನಿರ್ಮಾಣ ಕಾರ್ಯದಲ್ಲಿ ನಯಾಪೈಸೆ ಹಣವೂ ಅವ್ಯವಹಾರ ಆಗದಂತೆ ಎಚ್ಚರ ವಹಿಸಲಾಗಿದೆ. ಆದಾಗ್ಯೂ ಕೆಲವರು ₹2 ಕೋಟಿ ಅವ್ಯವಹಾರ ಆಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವುದು ಸಮಂಜಸವಲ್ಲ’ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ತಾಲ್ಲೂಕಿನ ಅಂಬಾಮಠದ ಅಂಬಾದೇವಿ ದೇವಸ್ಥಾನಕ್ಕೆ ಗುರುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪೂರ್ವಸಿದ್ಧತೆಗಳ ಪ್ರಗತಿ ಪರಿಶೀಲಿಸಿದ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ‘ಶಕ್ತಿಪೀಠದ ಶ್ರೀಚಕ್ರ ಮೇಲೆತ್ತುವ ಸಂಬಂಧ ತಜ್ಞ ಅರ್ಚಕರಿಂದ ಸ್ವರ್ಣಪ್ರಶ್ನೆ ಕೇಳಿದಾಗ ದೇವಿಯ ಅನುಗ್ರಹವಾಗದ ಹಿನ್ನೆಲೆಯಲ್ಲಿ ಮೇಲೆತ್ತುವ ಪ್ರಸ್ತಾವನೆ ಕೈಬಿಡಲಾಯಿತು. ಇದರಿಂದಾಗಿ 4 ಅಡಿ ಆರ್‌ಸಿಸಿ ತೆರವು ಮಾಡಲಾಗಿದೆ. ಸುಮಾರು ₹10-12 ಲಕ್ಷ ಹಾನಿಯಾಗಿರಬಹುದು. ಆದರೂ ಅದರ ತ್ಯಾಜ್ಯ ಬಳಸಿಕೊಳ್ಳಲಾಗಿದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ‘ದೇವಸ್ಥಾನದ ಶಿಲಾನ್ಯಾಸ ಕಾಮಗಾರಿಯನ್ನು ಯಾರು ಉದ್ದೇಶಪೂರ್ವಕ ವಿಳಂಬ ಹಾಗೂ ಹಾನಿ ಮಾಡಿಲ್ಲ. ದೇವಸ್ಥಾನದ ವಾಸ್ತು, ಪರಿಣಿತರ ಅಭಿಪ್ರಾಯಗಳ ಆಧಾರದ ಮೇಲೆ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಶ್ರೀಚಕ್ರ ಮೇಲೆತ್ತಬೇಕು ಎನ್ನುವುದು ಕೆಲವರ ಅಭಿಪ್ರಾಯವಾಗಿದ್ದರೆ, ಅದೇ ಸ್ಥಳದಲ್ಲೇ ಇರಲಿ ಎನ್ನುವುದು ಇನ್ನೂ ಕೆಲವರ ಅಭಿಪ್ರಾಯವಾಗಿರಬಹುದು. ಇದನ್ನು ರಾಜಕೀಯಗೊಳಿಸುವುದು ಸರಿಯಲ್ಲ. ಕಲ್ಲಿನ ಶಿಲಾಮಂಟಪ ಆಗಿದ್ದರಿಂದ ಕಾಮಗಾರಿ ಅವಸರ ಮಾಡುವುದು ಸರಿಯಲ್ಲ. ಇದೊಂದು ಶಕ್ತಿಪೀಠವಾಗಿರುವದರಿಂದ ಅಂಬಾಮಠ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಬೇಕು’ ಎಂದರು.

ADVERTISEMENT

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಂಗನಗೌಡ ಗೊರೇಬಾಳ, ತಹಶೀಲ್ದಾರ್ ಅರುಣ ಎಚ್.ದೇಸಾಯಿ, ತಾ.ಪಂ ಇಒ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ಕಾಂಗ್ರೆಸ್ ಮುಖಂಡರಾದ ರಾಜುಗೌಡ ಬಾದರ್ಲಿ, ಬಸವರಾಜ ಹಿರೇಗೌಡರ್, ಶ್ರೀದೇವಿ ಶ್ರೀನಿವಾಸ, ಎನ್.ಅಮರೇಶ, ರಾಮನಗೌಡ ಮಲ್ಕಾಪುರ, ರಂಗಾರೆಡ್ಡಿ ಸಾಸಲಮರಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ರಥೋತ್ಸವಕ್ಕಾಗಿ ಪ್ರತ್ಯೇಕ ರಥಬೀದಿ ನಿರ್ಮಾಣ

‘ದೇವಸ್ಥಾನದ ಶ್ರೀಚಕ್ರದಿಂದ 250 ಮೀಟರ್ ಉದ್ದ 130 ಅಡಿ ಅಗಲದ ಚತುಷ್ಪಥ ಮಹಾರಥ ಬೀದಿ ನಿರ್ಮಾಣ ಮಧ್ಯ ಗ್ರಿಲ್ ಎರಡು ಕಡೆ 5 ಅಡಿ ಚರಂಡಿ 20 ಅಡಿ ಫುಟ್‍ಪಾತ್ ಮಾಡಲಾಗುತ್ತಿದೆ. ಹುಡಾ ರಸ್ತೆಯಿಂದ ನೋಡಿದರೆ ನೇರವಾಗಿ ಶಿಲಾಮಂಟಪ ಕಾಣುವಂತೆ ಕಾಮಗಾರಿ ಸಾಗಿದೆ. ದೇವಸ್ಥಾನ ಬೆಟ್ಟಕ್ಕೆ ವಿದ್ಯುತ್ ದೀಪಾಂಲಕಾರ ಹಾಕಲಾಗುವುದು. 8 ಎಕರೆಯಲ್ಲಿ 750 ವಿವಿಧ ಅಂಗಡಿಗಳನ್ನು ಹಾಕಲು ಮಾರ್ಕ್‌ಔಟ್‌ ಮಾಡಲಾಗಿದೆ. ಜೋಕಾಲಿಯಂತಹ ಮನರಂಜನೆಗಾಗಿ ಪ್ರತ್ಯೇಕ ಜಾಗ ಗುರುತಿಸಲಾಗಿದೆ. 300 ಮೊಬೈಲ್ ಶೌಚಾಲಯ ಕುಡಿಯುವ ನೀರು ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಿ ಜಾತ್ರಾ ಸಮಯದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.