ADVERTISEMENT

ಮುದಗಲ್ | ‘ಅಧಿಕಾರಿಗಳಿಗೆ ಹಳ್ಳಿ ಅಂದ್ರೆ ಭಯ’

ಡಾ.ಶರಣಪ್ಪ ಆನೆಹೊಸೂರು
Published 29 ಮಾರ್ಚ್ 2025, 6:19 IST
Last Updated 29 ಮಾರ್ಚ್ 2025, 6:19 IST
ಮುದಗಲ್ ಸಮೀಪದ ಖೈರವಾಡಗಿ ಗ್ರಾಮ ಪಂಚಾಯಿತಿ
ಮುದಗಲ್ ಸಮೀಪದ ಖೈರವಾಡಗಿ ಗ್ರಾಮ ಪಂಚಾಯಿತಿ   

ಮುದಗಲ್: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸಮಾದಿರುವುದರಿಂದ ಗ್ರಾಮೀಣ ಭಾಗದ ತುರ್ತು ಕೆಲಸಗಳಿಗೆ ತೊಂದರೆ ಉಂಟಾಗಿ ಜನರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ.

ಪಿಡಿಒ ಹಾಗೂ ಗ್ರಾಮಆಡಳಿತಾಧಿಕಾರಿಗಳು ಹಳ್ಳಿ ಎಂದರೆ ಆಲಸ್ಯ ತೋರುತ್ತಿದ್ದಾರೆ. ಕೆಲಸದ ಸ್ಥಳದ ವ್ಯಾಪ್ತಿಯಲ್ಲಿ ವಾಸವಿರಬೇಕು ಎಂಬ ನಿಯಮವಿದ್ದರೂ ಪಾಲನೆ ಮಾಡುತ್ತಿಲ್ಲ.

ಬೆಳಿಗ್ಗೆ ಗ್ರಾಮಕ್ಕೆ ಹೋಗಿ ಸಂಜೆ ಪಟ್ಟಣಕ್ಕೆ ವಾಪಸ್ಸಾಗುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಭೆ ಹಾಗೂ ಇತರೆ ಕಾರ್ಯಕ್ರಮದ ನೆಪ ಹೇಳಿ ವಾರಾನುಟ್ಟಲೇ ಗ್ರಾಮದಿಂದ ದೂರ ಉಳಿಯುತ್ತಿದ್ದಾರೆ. ಜನರು, ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಗ್ರಾಮದಿಂದ ಪಟ್ಟಣದಲ್ಲಿರುವ ಪಿಡಿಒ ಹಾಗೂ ಗ್ರಾಮ ಆಡಳಿತಾಧಿಕಾರಿಗಳ ಮನೆಗಳಿಗೆ ಅಲೆಯಬೇಕಾಗಿದೆ. ಇದರಿಂದ ಸ್ಥಳೀಯ ಆಡಳಿತ ಚುರುಕು ಪಡೆಯುತ್ತಿಲ್ಲ.

ADVERTISEMENT

ನರೇಗಾ ಕಾಮಗಾರಿ ವೇತನ, ಜಾಗದ ಅಳತೆ ಪ್ರಕ್ರಿಯೆ ಸೇರಿದಂತೆ ಇನ್ನಿತರ ಕೆಲಸಕ್ಕೆ ಪಿಡಿಒ ತಿಂಗಳಾದರೂ ಕೈಗೆ ಸಿಗುತ್ತಿಲ್ಲ. ಕಚೇರಿಗೆ ಬಂದ ಬಗ್ಗೆಯೂ ಮಾಹಿತಿ ಸಿಗುತ್ತಿಲ್ಲ. ಕಚೇರಿ ಸಿಬ್ಬಂದಿ ವಿಚಾರಿಸಿದರೆ, ‘ಸಭೆಗೆ ಹೋಗಿದ್ದಾರೆ. ನಾಳೆ ಬರುತ್ತಾರೆ’ ಎನ್ನುವ ಮಾತು ಸಾಮಾನ್ಯವಾಗಿವೆ.

ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯಗಳ ಕೊರತೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ವೈದ್ಯಕೀಯ ಹಾಗೂ ಇತರೆ ವ್ಯವಸ್ಥೆಯೂ ಕಲ್ಪಿಸಬೇಕಾಗಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜವಾಬ್ದಾರಿ ಮರೆತ್ತಿದ್ದಾರೆ. ಗ್ರಾಮೀಣ ಜನರ ಬಗ್ಗೆ ಕಾಳಜಿ ಇಲ್ಲದೇ, ಕಾಟಾಚಾರಕ್ಕೆ ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥ ಬಸವರಾಜ ದೂರಿದರು.

ಸಮೀಪದ ಖೈರವಾಡಗಿ ಗ್ರಾಮದಲ್ಲಿ ಚರಂಡಿ ನೀರು ಮುಖ್ಯ ರಸ್ತೆ ಮೇಲೆ ಹರಿಯುತ್ತಿದೆ. ಆನೆಹೊಸೂರು ಗ್ರಾಮದ ತೆಗ್ಗಿನ ಓಣಿಯಲ್ಲಿ ಚರಂಡಿ ನೀರು ಸಂಗ್ರಹವಾಗಿ ಗಬ್ಬೇದ್ದು ನಾರುತ್ತಿದೆ. ನಾಗರಾಳ ಗ್ರಾಮ ಪಂಚಾಯಿತಿ ಮುಂದೆ ಇರುವ ಮುಖ್ಯ ರಸ್ತೆ ಬದಿಯಲ್ಲಿಯೇ ಕಸದ ರಾಸಿ ಬಿದ್ದಿದೆ. ಉಪ್ಪಾರ ನಂದಿಹಾಳ, ಜನತಾಪುರ ಗ್ರಾಮದ ರಸ್ತೆಯಲ್ಲಿ ಚರಂಡಿ ನೀರು ಹರಿಯುತ್ತಿವೆ. ಬಹುತೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದಿಲ್ಲ ಒಂದು ಸಮಸ್ಯೆ ಇದೆ.

ಹಳ್ಳಿಗಳಲ್ಲಿ ಲೆಕ್ಕಾಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಗ್ರಾಮೀಣ ಪ್ರದೇಶಕ್ಕೆ ನಿಯೋಜಿಸಿದ್ದರೂ ಪಟ್ಟಣದಲ್ಲಿ ಕಾಲ ಕಳೆಯುತ್ತಿದ್ದಾರೆ. ತಾಲ್ಲೂಕಿನ ಕೊನೆಯ ಗ್ರಾಮಗಳಾದ ಅಂಕನಾಳ–ಉಪನಾಳ, ತೊಂಡಿಹಾಳ, ಹಲ್ಕಾವಟಗಿ ಸೇರಿದಂತೆ ಇನ್ನಿತರ ಗ್ರಾಮಸ್ಥರು ಲೆಕ್ಕಾಧಿಕಾರಿಗಳನ್ನು ಕಾಣಲು 30 ರಿಂದ 50 ಕಿ.ಮೀ ದೂರದ ಅವರ ಮನೆಗಳಿಗೆ ಹೋಗಬೇಕಾದ ಸ್ಥಿತಿಯಿದೆ.

ತಾಲ್ಲೂಕಿನ 30 ಗ್ರಾಮ ಪಂಚಾಯಿತಿಯಲ್ಲಿ 13 ಜನ ಪಿಡಿಒ ಹುದ್ದೆಯವರು ಇದ್ದಾರೆ. 17 ಕಡೆ ಪಿಡಿಒ ಹುದ್ದೆ ಖಾಲಿ ಇವೆ. ಕಾರ್ಯದರ್ಶಿಗಳಿಗೆ ಪಿಡಿಒ ಜವಾಬ್ದಾರಿ ನೀಡಲಾಗಿದೆ. ಕೆಲ ಒಬ್ಬ ಪಿಡಿಒಗೆ ಎರಡು–ಮೂರು ಪಂಚಾಯಿತಿ ಜವಾಬ್ದಾರಿ ವಹಿಸಲಾಗಿದೆ. ಇವರು ಸಭೆ, ತರಬೇತಿ, ಕಾರ್ಯಕ್ರಮಗಳ ನೆಪ ಹೇಳಿ ಪಂಚಾಯಿತಿಯತ್ತ ಸುಳಿಯುತ್ತಿಲ್ಲ. ನಿರ್ಲಕ್ಷ್ಯ ವಹಿಸಿದ ಪಿಡಿಒ ಬಗ್ಗೆ ಅಧಿಕಾರಿಗಳಿಗೆ ದೂರು ಸಲ್ಲಿಸಿದರು ಪ್ರಯೋಜನವಾಗುತ್ತಿಲ್ಲ ಎನ್ನುವ ಆರೋಪಗಳಿವೆ.

‘ಪಂಚಾಯಿತಿಯಲ್ಲಿ ಪಿಡಿಒ ಇಲ್ಲದ ವೇಳೆಯಲ್ಲಿ ಬಿಲ್ ಕಲೆಕ್ಟರ್ ಹಾಗೂ ನೀರು ಪೂರೈಕೆ ಸಿಬ್ಬಂದಿಯ ಕಾರುಬಾರು ಜೋರಾಗಿದೆ. ಪಿಡಿಒಗಳಿಗೆ ಸಾರ್ವಜನಿಕರು ದೂರವಾಣಿ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕಾಮಗಾರಿ ಪರಿಶೀಲನೆಗೆ ಪಂಚಾಯಿತಿಗೆ ಬಂದ ವೇಳೆ ಪಿಡಿಒಗಳು, ಗ್ರಾಮದಲ್ಲಿ ಇದ್ದವರಂತೆ ಫೋಸು ಕೊಡುತ್ತಾರೆ. ಜನರ ಕೆಲಸ ಮಾಡಲು ಪಿಡಿಒಗಳನ್ನು ನೇಮಕ ಮಾಡಲಾಗಿದೆ. ಜನರ ದುಡ್ಡಿನಲ್ಲೇ ಅವರಿಗೆ ಸಂಬಳ ನೀಡಲಾಗುತ್ತಿದೆ. ಆದರೆ, ಪಿಡಿಒಗಳು ಜನರ ಕೈಗೆ ಸಿಗುತ್ತಿಲ್ಲ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಕೇಂದ್ರ ಸ್ಥಾನದಲ್ಲಿಯೇ ಲೆಕ್ಕಾಧಿಕಾರಿಗಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನೆಲೆಸುವಂತೆ ಮಾಡಬೇಕು ಶರಣಪ್ಪ ಕಟ್ಟಿಮನಿ ಡಿಎಸ್‌ಎಸ್ ತಾಲ್ಲೂಕು ಸಂಚಾಲಕ

ರಾಜ್ಯದ ಎಲ್ಲಾ ಕಡೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ ಮಾಡುವುದಿಲ್ಲ. ಇದರಿಂದಾಗಿ ಕೇಂದ್ರ ಸ್ಥಾನದಲ್ಲಿ ವಾಸ ಮಾಡು ಎಂದು ನಾನೂ ಹೇಳಿಲ್ಲ

-ಉಮೇಶ ಇಒ ಲಿಂಗಸುಗೂರು

ಗ್ರಾಮದಲ್ಲಿಯೇ ವಾಸವಿರುವಂತೆ ಪಿಡಿಒಗಳಿಗೆ ಸೂಚಿಸಬೇಕು. ಮನೆ ಮಾಡದ ಅಧಿಕಾರಿಗಳನ್ನು ಅಮಾನತು ಮಾಡಿ ವಜಾಗೊಳಿಸಬೇಕು ಬ

-ಸವರಾಜ ಬಂಕದಮನಿ ಡಿಎಸ್‌ಎಸ್ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.