ರಾಯಚೂರು: ಇಲ್ಲಿನ ಬಿಜನಗೇರ ರಸ್ತೆಯ ಗೊಲ್ಲಗುಂಟೆ ಕೆರೆಯ ಅಭಿವೃದ್ಧಿಗೆ ರುಡಾ ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಕೆರೆಯ ಅಂದ ಹಾಳಾಗುತ್ತಿದೆ. ಇದು ವಾಯು ವಿಹಾರಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಮಳೆಗಾಲದಲ್ಲಿ ಭರ್ತಿಯಾಗದ ನಂತರ ಕೆರೆಯ ಆವರಣ ಹಸಿರುಹೊದ್ದು ಗಮನ ಸೆಳೆಯುತ್ತಿದೆ. ಆದರೆ, ಅಧಿಕಾರಿಗಳು ಅಭಿವೃದ್ಧಿಗೆ ಹಿಂದೇಟು ಹಾಕುತ್ತಿರುವ ಕಾರಣ ಕೆರೆಯ ಆವರಣ ಹಾಳಾಗಿದೆ. ಕೆಲವು ವರ್ಷಗಳ ಹಿಂದೆ ಕೆರೆ ಆವರಣದಲ್ಲಿ ನೆಟ್ಟಿದ್ದ ‘ಐ ಲವ್ ರಾಯಚೂರು’ ಫಲಕ ಮಾತ್ರ ಉಳಿದಿದೆ. ಇದೀಗ ಕೆರೆಯ ಪರಿಸರವನ್ನು ಪ್ರೀತಿಸುವವರೇ ಇಲ್ಲವಾಗಿದ್ದಾರೆ.
ಕೆರೆಯ ತುಂಬ ಅಂತರಗಂಗೆಯ ಪಾಚಿ, ಗಿಡಗಂಟಿಗಳು ಬೆಳೆದಿವೆ. ನಗರದ ವಿವಿಧ ಬಡಾವಣೆಗಳ ಕೊಳಚೆ ನೀರು ಕೆರೆ ಒಡಲು ಸೇರುತ್ತಿದೆ. ಬಡಾವಣೆಗಳ ಕಸ ತಂದು ಎಸೆಯುವ ಪ್ರವೃತ್ತಿ ಹೆಚ್ಚುತ್ತಿದೆ. ಜನ ಕೆರೆಯ ಸುತ್ತಲೂ ಮಲ-ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಸುತ್ತಲಿನ ವಾತಾವರಣ ಕಲುಷಿತಗೊಂಡಿದೆ. ಕೆರೆ ಸಮೀಪದ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇಷ್ಟೆಲ್ಲ ಸಮಸ್ಯೆಗಳು ಇದ್ದರೂ ಸಂಬಂಧಿಸಿದವರು ಕೆರೆಗಳ ಅಭಿವೃದ್ಧಿಗೆ ಮುಂದಾಗಿಲ್ಲ.
ಮಳೆಗಾಲದಲ್ಲಿ ಗೊಲ್ಲಕುಂಟೆ ಕೆರೆ ಭರ್ತಿಯಾಗಿ ಆತಂಕ ಸೃಷ್ಟಿಸಿತ್ತು. ಕೆರೆಯಿಂದ ನೀರು ಬಂದು ಸತ್ಯನಾಥ ಕಾಲೊನಿ, ನವೋದಯ ಕ್ಯಾಂಪಸ್ ಬಳಿ ಇರುವ ಬಡಾವಣೆಗಳಿಗೆ ನುಗ್ಗಿತ್ತು. ಕೆಲವು ಮನೆಗಳು ಜಲಾವೃತವಾಗಿದ್ದವು. ಈ ಸಮಸ್ಯೆಯು ಪ್ರತಿ ವರ್ಷವೂ ಪುನರಾವರ್ತನೆ ಆಗುತ್ತದೆ. ಪ್ರತಿ ಬಾರಿ ಉಸುಕಿನ ಹನುಮಾನ ದೇವಸ್ಥಾನದೊಳಗೆ ನೀರು ನುಗ್ಗುತ್ತದೆ. ಇವೆಲ್ಲವೂ ಅಪಾಯದ ಮುನ್ಸೂಚನೆ ಆಗಿವೆ.
‘ಮಳೆಗಾಲದಲ್ಲಿ ಕೆರೆಯ ನೀರು ಬಡಾವಣೆಗೆ ನುಗ್ಗುವ ಮಾಹಿತಿ ತಿಳಿದಿದ್ದರೂ ಅಧಿಕಾರಿಗಳು ತಮಗೇನೂ ಗೊತ್ತೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಅವರಿಗೆ ಗೊಲ್ಲಗುಂಟೆ ಕೆರೆ ಹೇಗಿದೆ? ಎಂಬ ಮಾಹಿತಿಯೂ ಇಲ್ಲದಿರುವುದು ಕಳವಳ ಮೂಡಿಸಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ತಿಮ್ಮಪ್ಪ.
‘ಈ ಹಿಂದೆ ಗೊಲ್ಲಗುಂಟೆ ಕೆರೆ ವಿಹಾರ ತಾಣವಾಗಿ ಅಭಿವೃದ್ಧಿ ಮಾಡುವುದಕ್ಕೆ ಪ್ರಸ್ತಾವ ಸಿದ್ಧಪಡಿಸಲಾಗಿತ್ತು. 17 ಎಕರೆ ಪ್ರದೇಶದಲ್ಲಿ ಗೊಲ್ಲಗುಂಟೆ ಕೆರೆ ಅಭಿವೃದ್ಧಿಗೆ ನೀಲನಕ್ಷೆಯೂ ಸಿದ್ಧಗೊಳಿಸಲಾಗಿತ್ತು. ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರ (ರುಡಾ) ಕೆರೆ ಅಭಿವೃದ್ಧಿಗೆ ಜವಾಬ್ದಾರಿ ವಹಿಸಿಕೊಂಡಿತ್ತು. ಬಳಿಕ ಅಭಿವೃದ್ಧಿ ಕಡತಗಳಲ್ಲೇ ಉಳಿಯಿತು.
‘ಉಸುಕಿನ ಹನುಮಾನ ದೇವಸ್ಥಾನಕ್ಕೆ ಹೋಗುವುದಕ್ಕೆ 30 ಅಡಿ ಅಗಲದ ಹೊಸ ರಸ್ತೆ ನಿರ್ಮಿಸುವ ಪ್ರಸ್ತಾವ ರುಡಾ ಯೋಜನೆಯಲ್ಲಿದೆ. ಜನ ಈ ಕೆರೆ ಅಭಿವೃದ್ಧಿಪಡಿಸುವಂತೆ ನಿರಂತರವಾಗಿ ಮನವಿ ಮಾಡುತ್ತಲೇ ಇದ್ದಾರೆ. ಆದರೆ, ಜನಪ್ರತಿನಿಧಿಗಳು ಆಸಕ್ತಿ ವಹಿಸುತ್ತಿಲ್ಲ’ ಎಂದು ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.
ಕೆರೆಯಲ್ಲಿ ಕಟ್ಟಡ ತ್ಯಾಜ್ಯ ಸುರಿಯುತ್ತಿರುವ ಜನ ಕೆರೆ ಅಭಿವೃದ್ಧಿಗೆ ರುಡಾ ಅಧಿಕಾರಿಗಳ ನಿರ್ಲಕ್ಷ್ಯ ಕೆರೆ ಸೇರುತ್ತಿದೆ ಬಡಾವಣೆಗಳ ಕೊಳಚೆ ನೀರು
ಗೊಲ್ಲಗುಂಟೆ ಕೆರೆ ವಿಹಾರತಾಣವಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಫೆಬ್ರುವರಿ 20ರಂದು ರುಡಾದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆಈರಣ್ಣ ಬಿರಾದರ್ ಆಯುಕ್ತ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.