ಸಿಂಧನೂರು: ‘ಶಿಕ್ಷಣ ಎಂಬುದು ಪ್ರಮುಖ ಅಸ್ತ್ರವಿದ್ದಂತೆ. ಇದರಿಂದ ಜೀವನ ಅಷ್ಟೇ ಅಲ್ಲ, ಸಮಾಜದ ಪರಿವರ್ತನೆಯೂ ಸಾಧ್ಯ. ಜ್ಞಾನದಿಂದ ಜಗತ್ತನ್ನು ಆಳಲು ಸಾಧ್ಯ’ ಎಂದು ಕರ್ನಾಟಕ ರಾಜ್ಯ ಜಾನಪದ ಸಾಹಿತ್ಯ ಅಕಾಡೆಮಿ ಸದಸ್ಯ ಜೀವನ್‍ಸಾಬ್ ಬಿನ್ನಾಳ ಅಭಿಪ್ರಾಯಪಟ್ಟರು.
ಇಲ್ಲಿನ ಸತ್ಯಗಾರ್ಡನ್‍ನಲ್ಲಿ ಅಮೋಘ ಸಿದ್ದೇಶ್ವರ ನವೋದಯ ಕೋಚಿಂಗ್ ಸೆಂಟರ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ನವೋದಯ ಶಾಲೆಗೆ ಆಯ್ಕೆಯಾದ 42 ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ ಸಂಸ್ಥೆ ಕಟ್ಟಿ ವಿದ್ಯೆ ಕಲಿಸುವುದು ಸಾಮಾನ್ಯ ಕೆಲಸವಲ್ಲ. ಹಣ, ಆಸ್ತಿ, ಅಂತಸ್ತನ್ನು ಕಸಿದುಕೊಳ್ಳಬಹುದು. ಆದರೆ ವಿದ್ಯೆಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದರು.
ಸಾನ್ನಿಧ್ಯ ವಹಿಸಿದ್ದ ತುರ್ವಿಹಾಳದ ಅಮೋಘ ರೇವಣಸಿದ್ದೇಶ್ವರ ಮಠದ ಮಾದಯ್ಯ ಗುರುವಿನ್ ಮಾತನಾಡಿ ‘ವಿದ್ಯಾರ್ಥಿ ಜೀವನ ಬಂಗಾರ ಇದ್ದಂತೆ ಎಂಬ ನಾಣ್ಣುಡಿ ಸತ್ಯವಾದದ್ದು’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಮೋಘ ಸಿದ್ದೇಶ್ವರ ನವೋದಯ ಕೋಚಿಂಗ್ ಸೆಂಟರ್‌ನ ಅಧ್ಯಕ್ಷ ನಾಗೇಶ ಅರಳಹಳ್ಳಿ ವಕೀಲ, ಮನುಜಮತ ಬಳಗದ ಅಧ್ಯಕ್ಷ ಡಿ.ಎಚ್.ಕಂಬಳಿ ಮಾತನಾಡಿದರು.
ಆಕ್ಸ್‌ಫರ್ಡ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಸತ್ಯನಾರಾಯಣ ಶ್ರೇಷ್ಠಿ, ಅಮೋಘ ಸಿದ್ದೇಶ್ವರ ಕೋಚಿಂಗ್ ಸೆಂಟರ್‌ನ ಸಹ ಸಂಚಾಲಕ ಮಂಜುನಾಥ ಚಕ್ರಸಾಲಿ ಉಪಸ್ಥಿತರಿದ್ದರು. ಶಿಕ್ಷಕ ಹನುಮೇಶ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.