ಸಿಂಧನೂರು: ತಾಲ್ಲೂಕಿನ ವಳಬಳ್ಳಾರಿ ಗ್ರಾಮದಲ್ಲಿರುವ ತಿಮ್ಮಾಪುರ ಏತ ನೀರಾವರಿ ಯೋಜನೆಯನ್ನು ಕೆಲವು ರೈತರು ಗುರುವಾರ ಬಂದ್ ಮಾಡಿದ್ದರಿಂದ ಜೆಡಿಎಸ್ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ ಅವರು ಸ್ಥಳಕ್ಕೆ ತೆರಳಿ ಅಧಿಕಾರಿಗಳು ಹಾಗೂ ರೈತರೊಂದಿಗೆ ಚರ್ಚಿಸಿದರು.
ತಿಮ್ಮಾಪುರ ಏತ ನೀರಾವರಿ ಯೋಜನೆಗೆ ಪ್ರಾರಂಭವಾಗಿ ಒಂದು ವರ್ಷವಾಗಿದೆ. ಆದರೆ ಭೂಮಿ ಕಳೆಕೊಂಡ ರೈತರಿಗೆ ಇದುವರೆಗೂ ರಾಜ್ಯ ಸರ್ಕಾರಿದಂದ ಪರಿಹಾರದ ಹಣ ಬಂದಿಲ್ಲ. ಚೆಕ್ ವಿತರಣೆ ಆಗುವವರೆಗೂ ಏತ ನೀರಾವರಿ ಯೋಜನೆ ಪ್ರಾರಂಭಿಸಲು ಒಪ್ಪುವುದಿಲ್ಲ ಎಂದು ರೈತರು ಪಟ್ಟು ಹಿಡಿದರು.
ಈ ವೇಳೆ ಬಸವರಾಜ ನಾಡಗೌಡ ಅವರು ರೈತರ ಮನವೊಲಿಸಿ, ಆದಷ್ಟು ಶೀಘ್ರ ಯೋಜನೆಗೆ ಭೂಮಿ ನೀಡಿದ ರೈತರಿಗೆ ಪರಿಹಾರದ ಹಣ ಪಾವತಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಆದರೆ ಇದಕ್ಕೆ ಒಪ್ಪದ ರೈತರು ಸುಮಾರು ₹11 ಕೋಟಿಗೂ ಅಧಿಕ ಹಣ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಹಣ ನೀಡುವವರೆಗೂ ತಿಮ್ಮಾಪುರ ಏತ ನೀರಾವರಿ ಯೋಜನೆಯನ್ನು ಪ್ರಾರಂಭಿಸಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ಸಾಧಿಕ್, ಕಿರಿಯ ಎಂಜನಿಯರ್ ರಾಮರೆಡ್ಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.