ADVERTISEMENT

ಮತಗಟ್ಟೆಗೆ ತೆರಳಿದ ಸಿಬ್ಬಂದಿ: ಮತದಾನದತ್ತ ಎಲ್ಲರ ಚಿತ್ತ

ಎಲ್‌ವಿಡಿ ಕಾಲೇಜಿನ ಮಸ್ಟರಿಂಗ್‌ ಕೇಂದ್ರದಲ್ಲಿ ಮತಯಂತ್ರ, ಚುನಾವಣೆ ಸಾಮಾಗ್ರಿಗಳ ವಿತರಣೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 14:07 IST
Last Updated 22 ಏಪ್ರಿಲ್ 2019, 14:07 IST
ರಾಯಚೂರಿನಲ್ಲಿ ಸೋಮವಾರ ಮಸ್ಟರಿಂಗ್ ಕೇಂದ್ರದಿಂದ ಮತಯಂತ್ರ ಹಾಗೂ ಚುನಾವಣೆ ಸಾಮಾಗ್ರಿ ಪಡೆದು ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಯಚೂರಿನಲ್ಲಿ ಸೋಮವಾರ ಮಸ್ಟರಿಂಗ್ ಕೇಂದ್ರದಿಂದ ಮತಯಂತ್ರ ಹಾಗೂ ಚುನಾವಣೆ ಸಾಮಾಗ್ರಿ ಪಡೆದು ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ   

ರಾಯಚೂರು: ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 23ರಂದು ಸರಿಯಾಗಿ ಬೆಳಿಗ್ಗೆ 7 ಗಂಟೆಗೆ ಮತದಾನ ಕಾರ್ಯ ಆರಂಭಿಸುವುದಕ್ಕಾಗಿ ಮತಗಟ್ಟೆ ಅಧಿಕಾರಿಗಳು, ಮುನ್ನಾದಿನ ಸೋಮವಾರವೇ ಇವಿಎಂ, ವಿವಿಪ್ಯಾಟ್‌ ಸೇರಿದಂತೆ ಸಕಲ ಸಾಮಗ್ರಿಗಳನ್ನು ತೆಗೆದುಕೊಂಡು ಆಯಾ ತಾಲ್ಲೂಕು ಕೇಂದ್ರಗಳಿಂದ ಮತಗಟ್ಟೆಗಳಿಗೆ ತೆರಳಿದ್ದಾರೆ.

ರಾಯಚೂರುನಗರ ಹಾಗೂ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಿಗೆ ತೆರಳುವ ಸಿಬ್ಬಂದಿಗೆಎಲ್‌ವಿಡಿ ಕಾಲೇಜಿನಲ್ಲಿ ಮತಯಂತ್ರಗಳನ್ನು ಹಾಗೂ ಚುನಾವಣಾ ಸಾಮಗ್ರಿಯನ್ನು ವಿತರಿಸಲಾಯಿತು. ನಗರ ಕ್ಷೇತ್ರದ 239 ಹಾಗೂ ಗ್ರಾಮೀಣ ಕ್ಷೇತ್ರದ 275 ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿ, ಸಹಾಯಕ ಅಧಿಕಾರಿ ಹಾಗೂ ಸಿಬ್ಬಂದಿ ತಮ್ಮ ಮತಗಟ್ಟೆಗಳಿಗೆ ಚುನಾವಣೆಯ ಸಾಮಾಗ್ರಿಗಳೊಂದಿಗೆ ಹೊರಟರು.

ಮತಗಟ್ಟೆ ಅಧಿಕಾರಿಗಳು ತಮಗೆ ವಿತರಣೆ ಮಾಡಿದ ಮತಯಂತ್ರಗಳನ್ನು ಹಾಗೂ ಸಾಮಾಗ್ರಿಗಳನ್ನು ಪರಿಶೀಲಿಸಿಕೊಂಡು ಆಯಾ ಮತಗಟ್ಟೆಗಳಿಗೆ ತಮ್ಮ ರೂಟ್‌ ವಾಹನಗಳಲ್ಲಿ ಪ್ರಯಾಣ ಬೆಳೆಸಿದರು.

ADVERTISEMENT

ಮತಗಟ್ಟೆ ಸಿಬ್ಬಂದಿಯು ಬೆಳಿಗ್ಗೆಯಿಂದಲೇ ಎಲ್‌ವಿಡಿ ಕಾಲೇಜು ಆವರಣದಲ್ಲಿ ಸೇರಿದ್ದರು. ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದ ಪೊಲೀಸರು ಕೂಡ ಆಗಮಿಸಿದ್ದರು. ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ಕರೆದೊಯ್ಯಲು ಸಾರಿಗೆ ಸಂಸ್ಥೆಯ ಬಸ್‌ಗಳು, ಶಾಲಾ ಬಸ್‌ಗಳು ಹಾಗೂ ಇತರೆ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಕಾಲೇಜು ಆವರಣದಿಂದ ಮಧ್ಯಾಹ್ನ ವಾಹನಗಳು ಹೊರಟವು.

ಮತಗಟ್ಟೆ ಸಾಮಗ್ರಿ ವಿತರಿಸುವ ಕೊಠಡಿಗಳಲ್ಲಿ ಸಾಮಾಗ್ರಿ ಪಡೆದುಕೊಳ್ಳಲು ವ್ಯವಸ್ಥಿತವಾಗಿ ಮಸ್ಟರಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಮತಗಟ್ಟೆ ಸಿಬ್ಬಂದಿಗೆ ಮತಯಂತ್ರ ಹಾಗೂ ಸಾಮಾಗ್ರಿ ವಿತರಣೆ ಮತ್ತು ಸಿಬ್ಬಂದಿಯ ನಿಯೋಜನೆಯನ್ನು ಯಶಸ್ವಿಯಾಗಿ ಮಾಡಲಾಯಿತು.

ಚುನಾವಣಾ ಕರ್ತವ್ಯಕ್ಕೆ ತೆರಳುವ ಸಿಬ್ಬಂದಿಗೆ ಕಾಲೇಜು ಆವರಣದಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಉಪಹಾರ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.

ಜಿಲ್ಲಾ ಚುನಾವಣಾಧಿಕಾರಿ ಭೇಟಿ ಬಿ.ಶರತ್, ಉಪ ವಿಭಾಗಾಧಿಕಾರಿ ಶಿಲ್ಪಾ ಶರ್ಮಾ ಮಸ್ಟರಿಂಗ್‌ ಕೇಂದ್ರಕ್ಕೆ ಭೇಟಿ ನೀಡಿ ಕೈಗೊಂಡಿರುವ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು. ಚುನಾವಣಾ ವೀಕ್ಷಕಿ ಎ.ಶೈಲಾ, ಐಎಎಸ್ ಪ್ರೋಬೆಷನರಿ ನವೀನ್ ಭಟ್ ಇದ್ದರು.

ರಾಯಚೂರು ಲೋಕಸಭೆ ಕ್ಷೇತ್ರದ ಮತದಾರರು

ವಿಧಾನಸಭಾ ಕ್ಷೇತ್ರ/ ಪುರುಷ / ಮಹಿಳೆ/ ಇತರೆ/ ಒಟ್ಟು/ ಮತಗಟ್ಟೆಗಳು

ಸುರಪುರ / 1,38,371/ 1,37,100/ 20/ 2,75,491/ 319

ಶಹಾಪುರ/ 1,14,817/ 1,14,275/ 25/ 2,29,117/ 265

ಯಾದಗಿರಿ/ 1,18,674/ 1,19,835/ 24/ 2,38,533/ 267

ರಾಯಚೂರು ಗ್ರಾಮೀಣ/ 1,16,186/ 1,21,118/ 71/ 2,37,375/ 275

ರಾಯಚೂರು ನಗರ/ 1,13,473/ 1,14,314/ 121/ 2,27,908/ 239

ಮಾನ್ವಿ/ 1,19,596/ 1,25,618/ 73/ 2,45,287/ 276

ದೇವದುರ್ಗ/ 1,12,847 1,16,361/ 24/ 2,29,232/ 265

ಲಿಂಗಸುಗೂರು/ 1,21,622/ 1,23,184 9/ 2,44,815/ 278

ಒಟ್ಟು/ 9,55,586/ 9,71,805/ 367/ 19,27,758 2,184

ರಾಯಚೂರು ಲೋಕಸಭೆ ಕ್ಷೇತ್ರ

ಫ್ಲೈಯಿಂಗ್‌ ಸ್ಕ್ವಾಡ್‌ / 93

ಸೆಕ್ಟರ್‌ ಆಫಿಸರ್ಸ್‌/ 163

ವಿಡಿಯೋ ವಿವಿಂಗ್‌/ 8

ವಿಡಿಯೋ ಸರ್ವಿಲನ್ಸ್‌/ 26

ಸ್ಟ್ಯಾಟಿಕ್‌ ಸರ್ವಿಲನ್ಸ್‌/ 114

ವೆಚ್ಚ ನಿಗಾ ತಂಡ/ 8

ದಾಖಲಾದ ಪ್ರಕರಣಗಳು/ 254

ನಗದು ಜಪ್ತಿ/ 1.22 ಕೋಟಿ

ಮದ್ಯ ಜಪ್ತಿ/ 4,483 ಲೀ.

ಸೂಕ್ಷ್ಮ ಮತಗಟ್ಟೆ 82

ವಿವಿಪ್ಯಾಟ್‌ಗಳು 2,965

ಬ್ಯಾಲೆಟ್‌ ಯುನಿಟ್‌ 2,660

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.