ADVERTISEMENT

ತುಂಗಭದ್ರಾ ಸ್ವಚ್ಛತೆ, ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಜನಜಾಗೃತಿ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 7:38 IST
Last Updated 23 ನವೆಂಬರ್ 2025, 7:38 IST
ಸಿಂಧನೂರಿನ ಎಲ್‍ಬಿಕೆ ಮತ್ತು ನೊಬಲ್ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಿರ್ಮಲ ತುಂಗಭದ್ರಾ ಅಭಿಯಾನ ಹಾಗೂ ಮೂರನೇ ಹಂತದ ಜಲ ಮತ್ತು ಜನಜಾಗೃತಿ ಪಾದಯಾತ್ರೆ ಕಾರ್ಯಕ್ರಮದಲ್ಲಿ ಪಾದಯಾತ್ರೆಯ ಸಂಚಾಲಕರನ್ನು ಸನ್ಮಾನಿಸಲಾಯಿತು
ಸಿಂಧನೂರಿನ ಎಲ್‍ಬಿಕೆ ಮತ್ತು ನೊಬಲ್ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಿರ್ಮಲ ತುಂಗಭದ್ರಾ ಅಭಿಯಾನ ಹಾಗೂ ಮೂರನೇ ಹಂತದ ಜಲ ಮತ್ತು ಜನಜಾಗೃತಿ ಪಾದಯಾತ್ರೆ ಕಾರ್ಯಕ್ರಮದಲ್ಲಿ ಪಾದಯಾತ್ರೆಯ ಸಂಚಾಲಕರನ್ನು ಸನ್ಮಾನಿಸಲಾಯಿತು   

ಸಿಂಧನೂರು: ‘ನದಿ ಭೂಮಿಯ ಮೇಲಿನ ನೀರಿನ ಪ್ರಾಥಮಿಕ ಮೂಲಗಳಲ್ಲಿ ಒಂದಾಗಿದೆ. ನದಿಗಳು ಕೈಗಾರಿಕೆ, ಕೃಷಿ, ವಿದ್ಯುತ್ ಉತ್ಪಾದನೆ, ಸಾರಿಗೆ, ಮೀನುಗಾರಿಕೆಯಂತಹ ಅನೇಕ ಪ್ರಮುಖ ಅಗತ್ಯಗಳಿಗೆ ಮೂಲವಾಗಿದೆ. ಅಂಥ ತುಂಗಭದ್ರಾ ನದಿಯ ಸ್ವಚ್ಛತೆ ಮತ್ತು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಪರ್ಯಾವರಣ ಟ್ರಸ್ಟ್‌ನ ಶಿವಮೊಗ್ಗ ಸಂಚಾಲಕ ಲೋಕೇಶ್ ಹೇಳಿದರು.

ನಗರದ ಎಲ್‍ಬಿಕೆ ಮತ್ತು ನೊಬಲ್ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಕರ್ನಾಟಕ ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ, ಶಿವಮೊಗ್ಗದ ಪರ್ಯಾವರಣ ಟ್ರಸ್ಟ್‌ನ ಸಹಯೋಗದಲ್ಲಿ ಶನಿವಾರ ನಡೆದ ನಿರ್ಮಲ ತುಂಗಭದ್ರಾ ಅಭಿಯಾನ ಹಾಗೂ ಮೂರನೇ ಹಂತದ ಜಲ ಮತ್ತು ಜನಜಾಗೃತಿ ಪಾದಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಭೂಮಿಯಲ್ಲಿ ಬದುಕುವ ಜೀವ ರಾಶಿಗಳಿಗೆ ಪಂಚಭೂತಗಳಲ್ಲಿ ಒಂದಾದ ನೀರು ಅತ್ಯವಶ್ಯಕವಾಗಿ ಬೇಕು. ಭೂಮಿಯಲ್ಲಿ ಶೇ 73ರಷ್ಟು ನೀರು, ಶೇ 27 ರಷ್ಟು ಭೂಭಾಗ ಇದೆ. ಶೇ 97ರಷ್ಟು ನೀರು ಉಪಯೋಗಕ್ಕೆ ಬರುವುದಿಲ್ಲ. ಕೇವಲ ಶೇ 2ರಷ್ಟು ಭಾಗ ಹಿಮಾಲಯದಲ್ಲಿ ಹೆಪ್ಪುಗಟ್ಟಿದೆ. ಇನ್ನು ಉಳಿದ ಶೇ 1ರಷ್ಟು ಭಾಗ ಮಾತ್ರ ಉಪಯೋಗಕ್ಕೆ ಬಳಸುತ್ತಿದೆ. ಇಂತಹ ಶೇ 1ರಷ್ಟು ನೀರು ಮಾಲಿನ್ಯಕ್ಕೆ ಒಳಗಾಗಿದೆ. ನೀರಿನ ಸಮರ್ಪಕ ಬಳಕೆ ಬಗ್ಗೆ ನಾವೆಲ್ಲ ಯೋಚಿಸುವ ಸ್ಥಿತಿಯಲ್ಲಿದ್ದೇವೆ’ ಎಂದು ಹೇಳಿದರು.

ADVERTISEMENT

‘ನದಿ ನೀರನ್ನು ನಾವು ಕೈಗಾರಿಕೆಗಳ ಮೂಲಕ ರಾಸಾಯನಿಕ ವಸ್ತುಗಳಿಂದ ಅಶುದ್ಧಗೊಳಿಸುತ್ತಿದ್ದೇವೆ. ಇದೇ ನದಿಯ ನೀರು ಕೃಷಿಗೂ ಬಳಕೆಯಾಗುತ್ತದೆ. ಆಹಾರದ ಮೂಲಕ ನಮ್ಮೊಳಗೆ ಸೇರಿ ಅನೇಕ ರೋಗಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ನೀರಿನ ರಕ್ಷಣೆಗಾಗಿ ಐಕ್ಯ ಹೋರಾಟ ಅನಿವಾರ್ಯ’ ಎಂದು ಅಭಿಪ್ರಾಯಪಟ್ಟರು.

ರೈತ ಮುಖಂಡರಾದ ಮಲ್ಲನಗೌಡ ಮಾವಿನಮಡು ಹಾಗೂ ಸಿ.ಪಿ.ಮಾಧವನ್ ಮಾತನಾಡಿ,‘ತುಂಗಭದ್ರಾ ನದಿಯ ಸ್ವಚ್ಛತೆಯ ಆಂದೋಲನದಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು’ ಎಂದರು.

ನೊಬಲ್ ಕಾಲೇಜಿನ ಅಧ್ಯಕ್ಷ ಪರಶುರಾಮ ಮಲ್ಲಾಪುರ, ಕಾರ್ಯದರ್ಶಿ ಅರುಣಕುಮಾರ ಬೇರಿಗಿ, ವಿದ್ಯಾರ್ಥಿಗಳಾದ ಹನುಮಂತರಾವ್ ಕಿಲ್ಲರಹಟ್ಟಿ, ಪಾರ್ವತಿ ಮಾತನಾಡಿದರು.

ಉಪಾಧ್ಯಕ್ಷ ಶಂಕ್ರಪ್ಪ ಪತ್ತಾರ, ಪ್ರಾಂಶುಪಾಲರಾದ ಶಿವಕುಮಾರ ಬಿಂಗಿ, ಐಶ್ವರ್ಯ ದಳವಾಯಿ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಹೊನ್ನಪ್ಪ ಬೆಳಗುರ್ಕಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.