ADVERTISEMENT

ಭೂ ದಾನಿಗಳ ಕಂಚಿನ ಪುತ್ಥಳಿ ಅನಾವರಣ

ಶಿಕ್ಷಣಕ್ಕಾಗಿ ಭೂದಾನ ಮಾಡಿದವರ ಸ್ಮರಣೆ ನಮ್ಮ ಕರ್ತವ್ಯ : ನೀಲಗಲ್ ಶ್ರೀ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 11:26 IST
Last Updated 6 ಅಕ್ಟೋಬರ್ 2022, 11:26 IST
ಸಿರವಾರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ಭೂದಾನಿ ನೀಲಮ್ಮ ಗೌಡಸಾನಿ ಅವರು ಕಂಚಿನ ಪುತ್ಥಳಿಯನ್ನು ನೀಲಗಲ್ ಬೃಹನ್ಮಠದ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು
ಸಿರವಾರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ಭೂದಾನಿ ನೀಲಮ್ಮ ಗೌಡಸಾನಿ ಅವರು ಕಂಚಿನ ಪುತ್ಥಳಿಯನ್ನು ನೀಲಗಲ್ ಬೃಹನ್ಮಠದ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು   

ಸಿರವಾರ: ‘ತಮ್ಮ ಅಮೂಲ್ಯವಾದ ಜಾಗವನ್ನು ಶಾಲಾ ಕಟ್ಟಡಕ್ಕೆ ದಾನ ಮಾಡಿದ ಭೂ ದಾನಿಗಳನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ' ಎಂದು ನೀಲಗಲ್ ಬೃಹನ್ಮಠದ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ 4 ಎಕರೆ ಜಮೀನನ್ನು ಭೂದಾನ ಮಾಡಿದ್ದ ದಿ. ನೀಲಮ್ಮ ಗೌಡಸಾನಿ ಅವರ ಕಂಚಿನ ಪುತ್ಥಳಿಯನ್ನು ಶಾಲೆಯ ಆವರಣದಲ್ಲಿ ಬುಧವಾರ ಅನಾವರಣ ಮಾಡಿ ಮಾತನಾಡಿದರು.

1966ರಲ್ಲಿ ಊರಿನ ಮಕ್ಕಳ ಶಿಕ್ಷಣಕ್ಕಾಗಿ ಶಾಲೆ ತೆರೆಯಲು ಮುಂದಾದ ಸರ್ಕಾರಕ್ಕೆ ಭೂಮಿಯ ಸಮಸ್ಯೆಯಾಗಿತ್ತು. ಅಂತಹ ಸಂದರ್ಭದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೇ ನೀಲಮ್ಮ ಗೌಡಸಾನಿ ಅವರು 4 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದು ಶ್ಲಾಘನೀಯ ಕಾರ್ಯ ಎಂದರು.

ADVERTISEMENT

ಪಟ್ಟಣದ ಅಂಚೆ ಕಚೇರಿ ಹತ್ತಿರ ಇರುವ ನೀಲಮ್ಮ ಗೌಡಸಾನಿ ಅವರ ಮನೆಯಿಂದ ಸರ್ಕಾರಿ ಪ್ರೌಢಶಾಲೆಯವರೆಗೆ ಕಂಚಿನ ಪುತ್ಥಳಿಯನ್ನು ಮೆರವಣಿಗೆ ಮೂಲಕ ತರಲಾಯಿತು.

ಮುಖಂಡರಾದ ಚುಕ್ಕಿ ಸೂಗಪ್ಪ ಸಾಹುಕಾರ, ಅಯ್ಯನಗೌಡ ಏರಡ್ಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಭೂ ದಾನಿಗಳ ಕುಟುಂಬಸ್ಥರು, ಪುತ್ಥಳಿ ನಿರ್ಮಿಸಿದ ಸೂಗಪ್ಪ ಬಡಿಗೇರ್, ಪುತ್ಥಳಿ ನಿರ್ಮಾಣಕ್ಕೆ ಕೈಜೋಡಿಸಿದ ಖಾಸಗಿ ಶಿಕ್ಷಣ ಸಂಸ್ಥೆ ಮತ್ತು ಸಹಕಾರಿ ಪತ್ತಿನ ಸಂಘಗಳ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು.

ನೀಲಮ್ಮ ಗೌಡಸಾನಿ ಕುಟುಂಬಸ್ಥರಾದ ಡಾ.ಮಲ್ಲಿಕಾರ್ಜುನ ಪಾಟೀಲ್, ಎಸ್.ಬಿ. ಪಾಟೀಲ್, ನೀಲಮ್ಮ ಬಸವರಾಜಪ್ಪ ಪಾಟೀಲ್, ರಾಜೇಶ್ವರಿ ಪಾಟೀಲ್, ನಿವೃತ್ತ ಪಾಚಾರ್ಯ ಅಮರೇಗೌಡ, ಅಯ್ಯನಗೌಡ ಏರೆಡ್ಡಿ, ನಿಂಬಯ್ಯ ಸ್ವಾಮಿ, ಮಲ್ಲಿಕಾರ್ಜುನ ಹಳ್ಳೂರು, ಟಿ.ಬಸವರಾಜ, ವೆಂಕಟರೆಡ್ಡಿ ಬಲ್ಕಲ್, ಅಮರೇಶಗೌಡ ನಂದರೆಡ್ಡಿ, ಫಕ್ರುದ್ದೀನ್, ಜೆ.ದೇವರಾಜ ಗೌಡ, ಅಣ್ಣರಾವ್ ನಾಯಕ, ಚಿದಾನಂದ ಸಾಲಿ, ಡಿ.ಯಮನೂರು, ಮೌಲಸಾಬ ವರ್ಚಸ್,ಚನ್ನಬಸವ ಕುಂಬಾರ್, ಪ್ರೌಢಶಾಲೆ ಮುಖ್ಯಶಿಕ್ಷಕ ಸುರೇಶ ಸೇರಿದಂತೆ ಪಟ್ಟಣದ ಶಿಕ್ಷಣಾಭಿಮಾನಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.