ಲಿಂಗಸುಗೂರು: ತಾಲ್ಲೂಕಿನಲ್ಲಿ ಯೂರಿಯಾ ಗೊಬ್ಬರ ಕೃತಕ ಅಭಾವ ಸೃಷ್ಟಿಸುವ ಹಾಗೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಕೃಷಿ ಉಪ ನಿರ್ದೇಶಕರಿಗೆ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ತಾಲ್ಲೂಕಿನಲ್ಲಿರುವ ಗೊಬ್ಬರದ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರ ಎಷ್ಟು ದಾಸ್ತಾನು ಇದೆ ಎಂದು ಬೋರ್ಡ್ ಹಾಕಬೇಕು. ಕೃತಕ ಅಭಾವ ಸೃಷ್ಟಿಸಿ ಯೂರಿಯಾ ಗೊಬ್ಬರಕ್ಕಾಗಿ ರೈತರನ್ನು ಅಲೆದಾಡುವಂತೆ ಮಾಡಲಾಗುತ್ತಿದೆ. ಈ ಬಗ್ಗೆ ಎಲ್ಲಾ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಂದು ಸೂಚಿಸಿದರು.
ಅಮೃತ ಕಾಮಗಾರಿಗೆ ಗರಂ: ‘ಪಟ್ಟಣದಲ್ಲಿ ಅಮೃತ ಕುಡಿಯುವ ನೀರಿನ ಯೋಜನೆ ಜಾರಿ ಮಾಡಲಾಗಿದೆ. ಗುತ್ತಿಗೆ ಕಾಲಾವಕಾಶ ಮುಗಿದು ನಾಲ್ಕೈದು ತಿಂಗಳು ಆಗಿದೆ. ಆದರೆ ಇನ್ನೂ ಕಾಮಗಾರಿ ಮುಗಿದಿಲ್ಲ. ಕಾಮಗಾರಿ ಮುಗಿಸಲು ಇನ್ನೂ ಎಷ್ಟು ವರ್ಷ ಬೇಕು? ಪೈಪ್‌ಲೈನ್‌ಗಾಗಿ ದೊಡ್ಡ ಗುಂಡಿಗಳನ್ನು ಅಗೆದಿದ್ದಾರೆ. ಇದರಿಂದ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುವಂತಾಗಿದೆ’ ಎಂದು ಶಾಸಕ ಮಾನಪ್ಪ ವಜ್ಜಲ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಪಾಮಯ್ಯ ಮುರಾರಿ ಅಸಮಾಧಾನ ವ್ಯಕ್ತಪಡಿಸಿದರು. ಅಮೃತ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸಚಿವರು ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.
ಶೇ 100ರಷ್ಟು ಫಲಿತಾಂಶ ಬರಬೇಕು: ಸಮಾಜ ಇಲಾಖೆ ಹಾಸ್ಟೆಲ್‌ಗಳಲ್ಲಿ ಎಸ್ಎಸ್ಎಲ್‌ಸಿ ಹಾಗೂ ಪಿಯು ಫಲಿತಾಂಶ ಶೇ 61ರಷ್ಟು ಬಂದಿದೆ ಎಂದು ಸಮಾಜ ಕಲ್ಯಾಣಾಧಿಕಾರಿ ರವೀಂದ್ರ ಉಪ್ಪಾರ ಸಭೆಗೆ ತಿಳಿಸಿದರು. ಹಾಸ್ಟೆಲ್‌ಗಳಲ್ಲಿ ಬಡವರ ಮಕ್ಕಳಿಗೆ ವಸತಿ ಸೌಕರ್ಯ ನೀಡಲಾಗುತ್ತಿದೆ. ಅವರಿಗೆ ಸರಿಯಾಗಿ ಮಾರ್ಗದರ್ಶನ ನೀಡಿ ಶೇ 100ರಷ್ಟು ಫಲಿತಾಂಶ ಬರಬೇಕು ಎಂದು ಸಚಿವರು ತಾಕೀತು ಮಾಡಿದರು.
ತಾಲ್ಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಎಂದು ಸಾಕಷ್ಟು ದೂರುಗಳು ಬಂದಿವೆ. ಪಟ್ಟಣದಲ್ಲಿ ಸರ್ಕಾರಿ ವೈದ್ಯರು ಸರ್ಕಾರಿ ಆಸ್ಪತ್ರೆಯ ಒಪಿಡಿ ಸಮಯದಲ್ಲಿ ತಮ್ಮ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವಂತಿಲ್ಲ. ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಸಮಸ್ಯೆ ಪರಿಹರಿಸುವಂತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು.
ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ, ಶರಣಗೌಡ ಪಾಟೀಲ, ಜಿಲ್ಲಾಧಿಕಾರಿ ಕೆ.ನಿತೀಶ, ಜಿ.ಪಂ ಸಿಇಒ ಈಶ್ವರ ಕಾಂದೊ, ಎಸ್ಪಿ ಪುಟ್ಟಮಾದಯ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿದ್ದರು.
ಕೆಡಿಪಿ ಸದಸ್ಯರ ತಕರಾರು
ಸಭೆಗೂ ಮುನ್ನ ಪ್ರಗತಿ ಪರಿಶೀಲನೆ ಸಭೆಗೆ ತಮ್ಮನ್ನು ಆಹ್ವಾನಿಸಿಲ್ಲವೆಂದು ಈಗ ಕರೆದರೂ ನಾವು ಸಭೆಗೆ ಬರುವುದಿಲ್ಲ ಎಂದು ತಾ.ಪಂ ಕೆಡಿಪಿ ಸದಸ್ಯರು ಸಚಿವರ ಗಮನಕ್ಕೆ ತಂದರು. ಇದಕ್ಕೆ ಸಮಜಾಯಿಷಿ ನೀಡಿದ ಸಚಿವರು ‘ಇದು ಕೆಡಿಪಿ ಸಭೆಯಲ್ಲ. ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆ. ನಿಮಗೂ ಆಸನಗಳ ವ್ಯವಸ್ಥೆ ಮಾಡಲಾಗುವುದು. ಸಭೆಗೆ ಬನ್ನಿ’ ಎಂದು ಆಹ್ವಾನಿಸಿದರೂ ಕೆಡಿಪಿ ಸದಸ್ಯರು ಸಭೆಯಲ್ಲಿ ಭಾಗವಹಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.