ADVERTISEMENT

ಪೌರಕಾರ್ಮಿಕರ ಬಾಕಿ ವೇತನ ಪಾವತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಮೇ 2019, 15:19 IST
Last Updated 1 ಮೇ 2019, 15:19 IST
ರಾಯಚೂರಿನ ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ನಿಮಿತ್ತ ಕರ್ನಾಟಕ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವೆ ನೌಕರರ ಸಂಘದಿಂದ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷ ಎಸ್‌. ಮಾರೆಪ್ಪ ಮಾತನಾಡಿದರು
ರಾಯಚೂರಿನ ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ನಿಮಿತ್ತ ಕರ್ನಾಟಕ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವೆ ನೌಕರರ ಸಂಘದಿಂದ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷ ಎಸ್‌. ಮಾರೆಪ್ಪ ಮಾತನಾಡಿದರು   

ರಾಯಚೂರು: ನಗರಸಭೆ ಪೌರ ಕಾರ್ಮಿಕರಿಗೆ ಆರು ತಿಂಗಳುಗಳಿಂದ ಬಾಕಿ ವೇತನ ಪಾವತಿಸಿಲ್ಲ. ಕೂಡಲೇ ಈ ಬಗ್ಗೆ ಕ್ರಮ ವಹಿಸದಿದ್ದರೆ ಮೇ 8 ರಂದು ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವೆ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಸ್‌. ಮಾರೆಪ್ಪ ಹೇಳಿದರು.

ವಿಶ್ವ ಕಾರ್ಮಿಕರ ದಿನಾಚರಣೆ ನಿಮಿತ್ತ ಕರ್ನಾಟಕ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವೆ ನೌಕರರ ಸಂಘದಿಂದ ನಗರದ ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪೌರ ಕಾರ್ಮಿಕರಿಂದ ಸಮರ್ಪಕವಾಗಿ ಕೆಲಸ ಮಾಡಿಸಿಕೊಳ್ಳುತ್ತಿರುವ ಅಧಿಕಾರಿಗಳು, ಅವರಿಗೆ ಸರಿಯಾಗಿ ವೇತನ ಪಾವತಿಸಬೇಕು ಎನ್ನುವ ಸಾಮಾನ್ಯ ಜ್ಞಾನ ಪರಿಪಾಲನೆ ಮಾಡುತ್ತಿಲ್ಲ. ಜೀವನೋಪಾಯಕ್ಕೆ ದಿನಗೂಲಿ ಅವಲಂಬಿಸಿರುವ ಕಾರ್ಮಿಕರು ಹಣವಿಲ್ಲದೆ ಬದುಕು ಕಟ್ಟಿಕೊಳ್ಳುವುದು ದುಸ್ತರವಾಗಿದೆ. ಬಿಡುವಿಲ್ಲದೆ ಕೆಲಸ ಮಾಡುವುದಕ್ಕೆ ಅಗತ್ಯ ಶಕ್ತಿ ಇರಬೇಕಾಗುತ್ತದೆ. ಈ ಶಕ್ತಿ ಪಡೆಯುವುದಕ್ಕೆ ಆಹಾರ ಪದಾರ್ಥಗಳನ್ನು ಖರೀದಿಸುವ ಶಕ್ತಿಯನ್ನು ನಗರಸಭೆ ಕಿತ್ತುಕೊಂಡಿದೆ. ಸರಿಯಾದ ಸಮಯಕ್ಕೆ ವೇತನ ಪಾವತಿಸದಿದ್ದರೆ ಕಾರ್ಮಿಕರು ಮತ್ತು ಅವರನ್ನು ಅವಲಂಬಿಸಿದ ಕುಟುಂಬದ ಸದಸ್ಯರು ಉಪವಾಸ ಉಳಿಯಬೇಕು. ಇಲ್ಲದಿದ್ದರೆ ಸಾಲ ಮಾಡಿಕೊಂಡು ಬದುಕಬೇಕು ಎಂದು ಹೇಳಿದರು.

ADVERTISEMENT

ಬಾಕಿ ಉಳಿಸಿಕೊಂಡಿರುವ ಆರು ತಿಂಗಳು ವೇತನವನ್ನು ಕೂಡಲೇ ಪಾವತಿಸಬೇಕು. ಇಲ್ಲದಿದ್ದರೆ ಪೌರಕಾರ್ಮಿಕರೆಲ್ಲ ಕುಟುಂಬ ಸಮೇತ ನಗರಸಭೆ ಎದುರು ಬಿಡಾರ ಹೂಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ವೇತನ ಪಾವತಿಸಲು ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗುತ್ತದೆ ಎಂದು ಪರಿಸರ ಅಭಿಯಂತರ ಶರಣಪ್ಪ ಅವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗುತ್ತದೆ ಎಂದು ಯಾವ ಸರ್ಕಾರಿ ನೌಕರರು ವೇತನ ಪಡೆದುಕೊಂಡಿಲ್ಲ ಎಂಬುದನ್ನು ತಿಳಿಸಬೇಕು. ಗೌರವದಿಂದ ದುಡಿಯುವ ದಿನಗೂಲಿ ನೌಕರರಿಗೆ ಗೌರವದಿಂದ ವೇತನ ಪಾವತಿಸಬೇಕು ಎಂದು ಹೇಳಿದರು.

ನಗರಸಭೆಯಿಂದ ಟಿಪ್ಪು ಸುಲ್ತಾನ್‌ ಉದ್ಯಾನದವರೆಗೂ ಮೆರವಣಿಗೆ ನಡೆಸಲಾಯಿತು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಉರುಕುಂದಪ್ಪ, ಆರ್‌. ಹನುಮಂತು, ಶರಣಮ್ಮ, ಮಹಾದೇವಮ್ಮ, ಯಲ್ಲಪ್ಪ, ನರಸಿಂಹಲು, ಪದ್ದಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.