ADVERTISEMENT

ಕನಿಷ್ಠ ವೇತನಕ್ಕೆ ಒತ್ತಾಯ: ಅನಿರ್ದಿಷ್ಟಾವಧಿ ಧರಣಿ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2018, 12:45 IST
Last Updated 10 ನವೆಂಬರ್ 2018, 12:45 IST

ರಾಯಚೂರು:ಗುಲಬರ್ಗಾ ವಿದ್ಯುತ್‌ ಸರಬರಾಜು ಕಂಪೆನಿ (ಜೆಸ್ಕಾಂ) ವಿಭಾಗೀಯ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಡಾಟಾ ಎಂಟ್ರಿ ಆಪರೇಟರುಗಳು ಮತ್ತು ಕಚೇರಿ ಸಹಾಯಕರಿಗೆ ಕನಿಷ್ಠ ವೇತನ ನೀಡುವಂತೆ ಒತ್ತಾಯಿಸಿ ನವೆಂಬರ್‌ 12 ರಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯುನಿಯನ್‌ ಸೆಂಟರ್‌ (ಎಐಯುಟಿಯುಸಿ) ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ ಎನ್‌.ಎಸ್‌. ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ವಿಭಾಗೀಯ ಕಚೇರಿಯಲ್ಲಿ 46 ಸಿಬ್ಬಂದಿ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಕನಿಷ್ಠ ವೇತನ ₹12 ಸಾವಿರ ನೀಡುವ ಬದಲು ₹7 ಸಾವಿರ ಕೊಟ್ಟು ಮೋಸ ಮಾಡಲಾಗುತ್ತಿದೆ. ಹೊರಗುತ್ತಿಗೆ ಏಜನ್ಸಿ ಪಡೆದುಕೊಂಡಿದ್ದ ರಾಣೆಬೆನ್ನೂರಿನ ನ್ಯೂ ಭಾರತ ಸೀಜಿಂಗ್‌ ಆಂಡ್‌ ಸೆಕ್ಯುರಿಟಿ ಏಜೆನ್ಸಿಯು 18 ತಿಂಗಳುಗಳು ಗುತ್ತಿಗೆ ಪಡೆದಿತ್ತು. ಸಿಬ್ಬಂದಿಗೆ ಒಂದು ವರ್ಷದ ಭವಿಷ್ಯನಿಧಿ, ಇಎಎಸ್‌ಐ ಪಾವತಿಸಿಲ್ಲ. ಮೂರು ತಿಂಗಳುಗಳ ವೇತನವನ್ನೆ ನೀಡಿಲ್ಲ ಎಂದರು.

ಸಿಬ್ಬಂದಿ ಹೆಸರಿನಲ್ಲಿ ರಾಣೆಬೆನ್ನೂರಿನಲ್ಲಿ ಖೊಟ್ಟಿ ಖಾತೆಗಳನ್ನು ತೆರೆದು, ವೇತನ ಜಮಾಗೊಳಿಸಿ ಕಚೇರಿಗೆ ದಾಖಲೆಗಳನ್ನು ಏಜೆನ್ಸಿ ನೀಡಿದೆ. ಇಂತಹ ವಂಚಕ ಕಂಪೆನಿಯ ವಿರುದ್ಧ ಜೆಸ್ಕಾಂ ಕಂಪೆನಿಯು ಕ್ರಮ ಕೈಗೊಳ್ಳಬೇಕು. ಉದ್ಯೋಗಿಗಳಿಗೆ ಕನಿಷ್ಠ ವೇತನ ಪಾವತಿಸುವುದಕ್ಕೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ನ್ಯಾಯ ಕೇಳಿದ ಹೊರಗುತ್ತಿಗೆ ಸಿಬ್ಬಂದಿಯನ್ನು ಅಧಿಕಾರಿಗಳು ಹೆದರಿಸುತ್ತಿದ್ದಾರೆ. ಕಂಪೆನಿಯ ಮಾನ ತೆಗೆಯುತ್ತಿದ್ದೀರಿ, ಹೇಗೆ ಕಚೇರಿಗೆ ಕಾಲಿಡುತ್ತೀರಿ ನೋಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಹೊರಗುತ್ತಿಗೆ ವಹಿಸಿದ ಏಜೆನ್ಸಿಗೆ ನಿಯಮಬಾಹಿರ ಬಿಲ್‌ ಪಾಸು ಮಾಡಿರುವ ಅಧಿಕಾರಿಗಳಿಂದಾಗಿ ಕಂಪೆನಿಯ ಮಾನ ನಿಜವಾದ ಹರಾಜುತ್ತಿದೆ. ಸಿಬ್ಬಂದಿಗೆ ನ್ಯಾಯ ಒದಗಿಸಲು ಸ್ಪಂದಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ತಿಳಿಸಿದರು.

ಆಗಿರುವ ಅನ್ಯಾಯ ಸರಿಪಡಿಸಿ, ಬಾಕಿ ವೇತನ ಪಾವತಿಗೆ ಕ್ರಮ ಕೈಗೊಳ್ಳುವವರೆಗೂ ಹೋರಾಟವನ್ನು ಕೈಬಿಡುವುದಿಲ್ಲ. ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ಹೇಳಿದರು.

ಜೆಸ್ಕಾಂ ಡಿಇಒ ಮತ್ತು ಕಚೇರಿ ಸಹಾಯಕ ಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ, ಪದಾಧಿಕಾರಿಗಳಾದ ಅಜರ್‌, ದೀಪಕ್‌ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.