ADVERTISEMENT

ಅಡಕಲಗುಡ್ಡ ನೀರಿನ ಸಮಸ್ಯೆ ಪರಿಹರಿಸಲು ಒತ್ತಾಯ

ರೈತ ಕೃಷಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಖಾಲಿ ಕೊಡಗಳೊಂದಿಗೆ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 14:30 IST
Last Updated 6 ಫೆಬ್ರುವರಿ 2019, 14:30 IST
ರಾಯಚೂರಿನಲ್ಲಿ ದೇವದುರ್ಗ ತಾಲ್ಲೂಕಿನ ಅಡಕಲಗುಡ್ಡ ಗ್ರಾಮಸ್ಥರು ಖಾಲಿ ಕೊಡಗಳೊಂದಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ರೈತ ಕೃಷಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಬುಧವಾರ ಮೆರವಣಿಗೆ ನಡೆಸಿದರು
ರಾಯಚೂರಿನಲ್ಲಿ ದೇವದುರ್ಗ ತಾಲ್ಲೂಕಿನ ಅಡಕಲಗುಡ್ಡ ಗ್ರಾಮಸ್ಥರು ಖಾಲಿ ಕೊಡಗಳೊಂದಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ರೈತ ಕೃಷಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಬುಧವಾರ ಮೆರವಣಿಗೆ ನಡೆಸಿದರು   

ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅಡಕಲಗುಡ್ಡ ಗ್ರಾಮದಲ್ಲಿ ಗಂಭೀರವಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಬೇಕು ಎಂದು ಆಗ್ರಹಿಸಿ ರೈತ ಕೃಷಿ ಕಾರ್ಮಿಕರ ಸಂಘಟನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಗ್ರಾಮಸ್ಥರು ಖಾಲಿ ಕೊಡಗಳೊಂದಿಗೆ ಬುಧವಾರ ಮೆರವಣಿಗೆ ನಡೆಸಿದರು.

ನಗರದ ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಏಕ್‌ ಮೀನಾರ್, ತೀನ್ ಕಂದಿಲ್, ಬಟ್ಟೆ ಬಜಾರ್, ಗಾಂಧಿ ಚೌಕ್‌ ಮೂಲಕ ಜಿಲ್ಲಾ ಪಂಚಾಯಿತಿ ಕಚೇರಿಯವರೆಗೆ ನಡೆಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೃದ್ಧರು, ಮಹಿಳೆಯರು ಸೇರಿದಂತೆ ನೂರಾರು ಗ್ರಾಮಸ್ಥರೆಲ್ಲರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎರಡು ತಿಂಗಳ ಹಿಂದೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮನವಿ ಸಲ್ಲಿಸಲಾಗಿತ್ತು. ಆದರೆ, ಸಮಸ್ಯೆಯನ್ನು ಪರಿಹರಿಸಲು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಗ್ರಾಮದಲ್ಲಿ ಕೆರೆ ನಿರ್ಮಿಸಿ, ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಎಸ್‌ಯುಸಿಐ ಜಿಲ್ಲಾ ಘಕಟದ ಕಾರ್ಯದರ್ಶಿ ಚಂದ್ರಗಿರೀಶ ಮಾತನಾಡಿ, ಸತತ ಬರಗಾಲದಿಂದ ಜನರು ಹಲವು ಸಮಸ್ಯೆ ಎದುರಿಸುವಂತಾಗಿದೆ. ಕಾರ್ಮಿಕರಿಗೆ ಸರಿಯಾಗಿ ಕೆಲಸ ದೊರೆಯದಿರುವುದು ಒಂದೆಡೆಯಾದರೆ, ಮತ್ತೊಂದೆಡೆ ನೀರಿನ ಸಮಸ್ಯೆಯಿಂದ ಜನರು ಕೆಲಸಬಿಟ್ಟು ನೀರು ತುಂಬಿಸುವ ಕೆಲಸ ಮಾಡುವಂತಾಗಿದೆ ಎಂದು ಆರೋಪಿಸಿದರು.

ನೀರಿನ ಸಮಸ್ಯೆಯ ಬಗ್ಗೆ ಈಗಾಗಲೇ ಹಲವಾರು ಮನವಿ ಸಲ್ಲಿಸಲಾಗಿದೆ. ಆದರೆ, ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ. ಇನ್ನಾದರೂ ಜಿಲ್ಲಾ ಪಂಚಾಯಿತಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಸದಸ್ಯ ಶರಣಪ್ಪ ಉದ್ಬಾಳ್ ಮಾತನಾಡಿ, ಕೆರೆ ನಿರ್ಮಾಣ ಮಾಡಿ, ಹತ್ತಿರದಲ್ಲಿ ಹರಿದುಹೋಗುವ ನಾರಾಯಣಪುರ ಬಲದಂಡೆ 9ಎ ಉಪಕಾಲವೆಯಿಂದ ನೀರು ತುಂಬಿಸಬೇಕು. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಟ್ಯಾಂಕರ್ ನೀರು ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಸಂಚಾಲಕ ರಾಮಣ್ಣ ಮರ್ಕಂದಿನ್ನಿ, ಚನ್ನಬಸವ ಜಾನೇಕಲ್, ಎನ್.ಎಸ್.ವೀರೇಶ, ಸಿ.ಮಹೇಶ್, ದುರ್ಗಣ್ಣ ಅಡಕಲಗುಡ್ಡ, ಶರಣಪ್ಪ, ಜಮಾಲುದ್ದಿನ್, ಸಲೀಮ್, ಹನ್ಮಂತ್ರಾಯ ದೊರೆಶಿವಪ್ಪ, ಅಮರೇಶ ದೊರೆ, ಮಲ್ಲಪ್ಪ ಬಡಿಗೇರ, ಯಂಕೋಬ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.