ADVERTISEMENT

ಮಂಗಮ್ಮ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಿ: ಎಂ ವಿರೂಪಾಕ್ಷಿ

ನಗರಸಭೆ ಆಡಳಿತ ಮಂಡಳಿಯ ವಿರುದ್ಧ ಉಗಿಯುವ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 13:57 IST
Last Updated 3 ಜೂನ್ 2022, 13:57 IST
ಎಂ. ವಿರೂಪಾಕ್ಷಿ
ಎಂ. ವಿರೂಪಾಕ್ಷಿ   

ರಾಯಚೂರು: ನಗರಸಭೆಯಿಂದ ಕಲುಷಿತ ನೀರು ಸರಬರಾಜು ಮಾಡುವುದನ್ನು ಖಂಡಿಸಿ ನಗರಸಭೆ ಕಚೇರಿ ಮುಂದೆ ಉಗಿದು ಪ್ರತಿಭಟನೆ ಮಾಡಲಾಗುವುದುಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜನರಿಗೆ ಶುದ್ಧ ಕುಡಿಯುವ ನೀರು ಮೂಲಸೌಕರ್ಯ ಕಲ್ಪಿಸುವುದು ನಗರಸಭೆಯ ಜವಾಬ್ದಾರಿ. ಆದರೆ ನಗರಸಭೆಯ ಆಡಳಿತ ಮಂಡಳಿ ಶುದ್ಧ ನೀರು ನೀಡುತ್ತಿಲ್ಲ. ಕಲುಷಿತ ನೀರು ಸರಬರಾಜು ಮಾಡಿದ ಪರಿಣಾಮ ಮಂಗಮ್ಮ ಎಂಬ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಸಾವನ್ನಪ್ಪಿದ್ದಾಳೆ.‌ ಈ ಸಾವಿಗೆ ನಗರಸಭೆ ಕಾರಣವಾಗಿದೆ. ನಗರಸಭೆ ಹೊಣೆಹೊತ್ತು ಮಂಗಮ್ಮನ‌ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಬೇಕು ಹಾಗೂ ಕಲುಷಿತ ನೀರು ಸೇವಿಸಿ ದಾಖಲಾದ ಎಲ್ಲಾ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಬೇಕು, ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸಬೇಕು ಎಂದು ಒತ್ತಾಯಿಸಿದರು.

ನಗರಸಭೆ ಶೀಘ್ರವೇ ಸಾಮಾನ್ಯ ಸಭೆ ಕರೆದು ಚರ್ಚಿಸಬೇಕು. ಸಭೆಯ ಮುನ್ನ ಪ್ರತಿಭಟನೆ ಮಾಡಿ ಆಡಳಿತ ಮಂಡಳಿಯ ಧೋರಣೆ ಖಂಡಿಸಲಾಗುವುದು. ನಗರಸಭೆಯ ಪೌರಾಯುಕ್ತ ಗುರುಲಿಂಗಪ್ಪನವರು ಭ್ರಷ್ಟಾಚಾರದ ಆರೋಪ ಹೊತ್ತಿದ್ದರು. ಅವರು ಈಗ ಪುನಃ ಸೇವೆಗೆ ನಿಯೋಜನೆಗೊಂಡಿದ್ದಾರೆ. ಮತ್ತಷ್ಟು ಭ್ರಷ್ಟಾಚಾರ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.

ADVERTISEMENT

ಬಿಜೆಪಿ ನಗರಸಭೆ ಅಧ್ಯಕ್ಷರ ಸ್ಥಾನಕ್ಕಾಗಿ ನಗರಸಭೆ ಸದಸ್ಯರಿಗೆ ತಲಾ ₹50 ಲಕ್ಷ ಹಣ ನೀಡಿ ಅಧಿಕಾರವನ್ನು ಪಡೆದಿದ್ದಾರೆ. ಆದರೆ ಮೂಲಸೌಕರ್ಯ ನೀಡಲು ಅನುದಾನವಿದ್ದರೂ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ.

ಕಲುಷಿತ ನೀರು ಸರಬರಾಜು ಪ್ರಕರಣಕ್ಕೆ ಸಂಭವಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ನಗರಸಭೆ ಅಧ್ಯಕ್ಷೆ ಉಡಾಫೆಯಾಗಿ ಉತ್ತರ ನೀಡಿದ್ದು ಖಂಡನೀಯ.ನಗರದಲ್ಲಿ ನಿರಂತರ ಕುಡಿಯುವ ನೀರಿನ ಕಾಮಗಾರಿ ನನೆಗುದಿಗೆ ಬಿದ್ದಿದ್ದು ಗಡವು ಮೀರಿದರೂ ಪೂರ್ಣಗೊಂಡಿಲ್ಲ. ಇದರ ಪರಿಣಾಮ ನಗರದಲ್ಲಿ ಎರಡು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಶಾಸಕರು, ಸಂಸದರು ಕಾಮಗಾರಿ ಪೂರ್ಣಗೊಳಿಸಲು ಜವಾಬ್ದಾರಿ ಮರೆತಿದ್ದಾರೆ. ನಿರ್ದಿಷ್ಟ ಗಡುವು ನೀಡಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಜೆಡಿಎಸ್ ನಗರಾಧ್ಯಕ್ಷ ಬಿ. ತಿಮ್ಮಾರೆಡ್ಡಿ, ಮುಖಂಡ ಯುಸೂಫ್ ಖಾನ್, ಮಹಾಂತೇಶ ಪಾಟೀಲ ಅತ್ತನೂರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.