ADVERTISEMENT

ನ್ಯಾ.ಸದಾಶಿವ ಆಯೋಗ ವರದಿ ತಿರಸ್ಕರಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 14:34 IST
Last Updated 28 ಸೆಪ್ಟೆಂಬರ್ 2021, 14:34 IST
ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಪದಾಧಿಕಾರಿಗಳು ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು
ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಪದಾಧಿಕಾರಿಗಳು ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು   

ರಾಯಚೂರು: ನ್ಯಾ. ಎ.ಜೆ.ಸದಾಶಿವ ಆಯೋಗ ವರದಿ ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡದೇ ರಾಜ್ಯ ಸರ್ಕಾರ ತಿರಸ್ಕಾರ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಪದಾಧಿಕಾರಿಗಳು ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಪರಿಶಿಷ್ಟ ಜಾತಿಗಳ ಮಧ್ಯೆ ಮನಸ್ತಾಪ ಬಿತ್ತುವ ಕಾರ್ಯ ಹಾಗೂ ಸಮುದಾಯದ ನಾಯಕರನ್ನು ಅವಹೇಳನ ಮಾಡುವ ಕೆಲಸ ನಡೆಯುತ್ತಿವೆ. ಸಾಮಾಜಿಕ ಚರಿತ್ರೆ ಅರಿಯದೇ ಕೆಲವರು ಭೋವಿ, ಬಂಜಾರ, ಲಂಬಾಣಿ, ಕೊರಮ, ಕೊಂಚ ಹಗೂ ಇತರೆ ಅಲೆಮಾರಿ ಜಾತಿಗಳ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ದೂರಿದರು.

ಹೋರಾಟದ ಹೆಸರಿನಲ್ಲಿ ಬಂಜಾರ ಸಮುದಾಯದ ಕುಲದೇವ ಸಂತ ಸೇವಲಾಲ್, ಭೋವಿ ಸಮಾಜದ ಸಿದ್ದರಾಮೇಶ್ವರ ಹಾಗೂ ಸಚಿವ ಪ್ರಭು ಚೌಹಾಣ್ ಅವರನ್ನು ಅವಹೇಳನ ಮಾಡುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿ ಅಂಗೀಕರಿಸಬೇಕು. ಪರಿಶಿಷ್ಟ ಜಾತಿಗಳ ನಡುವೆ ದ್ವೇಷ ಮುಡಿಸುತ್ತಿರುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎಂ.ವಿ.ಈರಣ್ಣ, ನಾರಾಯಣ ನಾಯಕ, ಉಪಾಧ್ಯಕ್ಷ ಎಂ. ಶಂಕರ ಚವಾಣ, ನರಸಿಂಹಲು ಕಮಲಾಪುರ, ಶಶಿಕಲಾ ಭೀಮರಾಯ, ಶಿವಣ್ಣ ಪವಾರ್, ಹುಲಿಗೆಪ್ಪ ಮಾಣಿಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.