ADVERTISEMENT

ಭತ್ತ ಖರೀದಿ ಕೇಂದ್ರ ಆರಂಭಿಸದಿದ್ದರೆ ಕಪ್ಪುಬಾವುಟ: ಕೋಡಿಹಳ್ಳಿ ಚಂದ್ರಶೇಖರ ಎಚ್ಚರಿ

ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 15:24 IST
Last Updated 28 ಅಕ್ಟೋಬರ್ 2021, 15:24 IST
ಸಿಂಧನೂರಿನ ಪ್ರವಾಸಿ ಮಂದಿರದಿಂದ ಎಪಿಎಂಸಿವರೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು
ಸಿಂಧನೂರಿನ ಪ್ರವಾಸಿ ಮಂದಿರದಿಂದ ಎಪಿಎಂಸಿವರೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು   

ಸಿಂಧನೂರು: ರಾಜ್ಯ ಸರ್ಕಾರ ಭತ್ತದ ಬೆಳೆ ಕೊಯ್ಲಿಗೆ ಬರುವ ಪೂರ್ವದಲ್ಲಿ ಕೇಂದ್ರ ಸರ್ಕಾರದ ಬೆಂಬಲದ ಜೊತೆಗೆ ರಾಜ್ಯ ಸರ್ಕಾರದ ₹1 ಸಾವಿರ ಪ್ರೋತ್ಸಾಹಧನ ಸೇರಿಸಿ ಪ್ರತಿ ಕ್ವಿಂಟಲ್‍ಗೆ ₹3 ಸಾವಿರದಂತೆ ಖರೀದಿಸುವ ಭತ್ತ ಖರೀದಿ ಕೇಂದ್ರವನ್ನು ನವೆಂಬರ್ 15 ರೊಳಗೆ ಪ್ರಾರಂಭಿಸಬೇಕು. ಇಲ್ಲದಿದ್ದರೆ ಪ್ರತಿಯೊಂದು ಕಾರ್ಯಕ್ರಮಗಳಿಗೆ ಕಪ್ಪುಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಎಚ್ಚರಿಸಿದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಹಳೆ ಪ್ರಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕ ವತಿಯಿಂದ ಭತ್ತ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಗುರುವಾರ ಹಮ್ಮಿಕೊಂಡಿದ್ದ ರೈತರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರ ಈ ಪ್ರಮುಖ ಬೇಡಿಕೆಯನ್ನು ತಕ್ಷಣ ಗಮನಿಸದಿದ್ದಲ್ಲಿ ಅವರು ಇರುವ ಕಡೆಗೆ ರೈತ ಚಳವಳಿಯನ್ನು ತಿರುಗಿಸುವುದು ಅನಿವಾರ್ಯವಾಗುತ್ತದೆ. ಭತ್ತದ ಖರೀದಿಸುವ ಕೇಂದ್ರದಲ್ಲಿ ಷರತ್ತು ರಹಿತವಾಗಿ ಭತ್ತ ಖರೀದಿಸಬೇಕು. ಖರೀದಿ ಮಾಡಿದ ಒಂದು ವಾರದೊಳಗೆ ರೈತರ ಖಾತೆಗೆ ಹಣ ಪಾವತಿಸುವುದು ಸೇರಿದಂತೆ ಹನ್ನೆರಡು ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವಂತೆ ಸ್ಥಳಕ್ಕೆ ಬಂದಿದ್ದ ತಹಶೀಲ್ದಾರ್ ಮಂಜುನಾಥ ಭೋಗಾವತಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ADVERTISEMENT

ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಕಾಯ್ದೆಯನ್ನು ತಿದ್ದುಪಡಿ ಮಾಡಿರುವುದರಿಂದ ಭಾರತ ಆಹಾರ ನಿಗಮ ಮತ್ತು ಕನಿಷ್ಠ ಬೆಂಬಲ ಬೆಲೆಯ ಕಾನೂನನ್ನು ತಿದ್ದುಪಡಿ ಮಾಡುವುದಿಲ್ಲವೆಂದು ಹೇಳುತ್ತಿದೆ. ದೆಹಲಿ ಗಡಿಯಲ್ಲಿ ರೈತರು ಚಳವಳಿ ನಡೆಸುವ ತನಕ ಈ ನಾಟಕ ಮಾಡಲಾಗುತ್ತಿದೆ. ಚಳವಳಿ ಹಿಂತೆಗೆದುಕೊಂಡ ನಂತರ ಎಫ್‍ಸಿಐ ಮತ್ತು ಎಂಎಸ್‍ಪಿ ಇರಲು ಸಾಧ್ಯವಿಲ್ಲ. ಆದ್ದರಿಂದ ರೈತರು ಒಗ್ಗಟ್ಟಿನಿಂದ ಹೋರಾಟ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.

ಯಡಿಯೂರಪ್ಪ ಮಾಡಿದ ದ್ರೋಹ: ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರಮುಖ ಮೂರು ಕೃಷಿ ಕಾನೂನುಗಳನ್ನು ಬಿಜೆಪಿ ಆಡಳಿತ ಇರುವ 16 ರಾಜ್ಯಗಳಲ್ಲಿ 15 ರಾಜ್ಯಗಳು ತಿದ್ದುಪಡಿ ಮಾಡಿರುವ ಕೃಷಿ ಕಾನೂನನ್ನು ಜಾರಿಗೆ ತರಲಿಲ್ಲ. ಆದರೆ ಕರ್ನಾಟಕ ಮಾತ್ರ ಪ್ರಥಮವಾಗಿ ಈ ಕಾನೂನುಗಳನ್ನು ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಯಥಾವತ್ತಾಗಿ ಅನುಷ್ಠಾನಗೊಳಿಸುವ ಮೂಲಕ ರೈತರಿಗೆ ದ್ರೋಹ ಎಸಗಿದ್ದಾರೆ. ವಿರೋಧ ಪಕ್ಷದ ಎಚ್.ಡಿ.ಕುಮಾರಸ್ವಾಮಿ ಅವರು ಈ ಕಾನೂನುಗಳ ಅನುಷ್ಠಾನಕ್ಕೆ ವಿಧಾನಸಭೆಯಲ್ಲಿ ಬೆಂಬಲ ಸೂಚಿಸುವ ಮೂಲಕ ಅವರು ಸಹ ರೈತಾಪಿ ಸಮುದಾಯಕ್ಕೆ ವಂಚನೆ ಮಾಡಿದ್ದಾರೆ. ಇನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈ ಕಾನೂನುಗಳನ್ನು ವಿರೋಧಿಸುತ್ತಿದ್ದು, ಅವರ ಸರ್ಕಾರ ಬಂದರೂ ಈ ಕಾನೂನುಗಳನ್ನು ಕಿತ್ತೆಸೆಯುತ್ತಾರೆ ಎನ್ನುವ ನಂಬಿಕೆ ಇಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.

ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ಮಾಡಿದರೆ ಎಫ್‍ಸಿಐಯಿಂದ ಭತ್ತ, ಗೋದಿ ಖರೀದಿ ನಿಂತು ಹೋಗುತ್ತದೆ ಎನ್ನುವ ಪ್ರಜ್ಞೆಯಿಂದ ಪಂಜಾಬ್, ಹರಿಯಾಣದಿಂದ ಮೂರು ಲಕ್ಷಕ್ಕೂ ಹೆಚ್ಚು ರೈತರು ಸೇರಿ ರಾಮಲೀಲಾ ಮೈದಾನಕ್ಕೆ ಲಗ್ಗೆ ಹಾಕಿದ ರೀತಿಯಲ್ಲಿ ಎಡದಂಡೆ ನಾಲೆಯ ರೈತರು ಜಾಗೃತರಾಗಬೇಕು ಎಂದು ಕರೆ ನೀಡಿದರು.

ರಾಜ್ಯ ಘಟಕದ ಕಾರ್ಯದರ್ಶಿಗಳಾದ ಜೆ.ಕಾರ್ತಿಕ್, ಹನುಮಂತಪ್ಪ ಹೊಳೆಯಾಚೆ, ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ನಜೀರಸಾಬ ಮೂಲಿಮನಿ, ಬಸವರಾಜ ಗೋಡಿಹಾಳ ಮಾತನಾಡಿದರು. ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕ ಘಟಕದ ಅಧ್ಯಕ್ಷ ಶಿವರಾಜ ಸಾಸಲಮರಿ ಅಧ್ಯಕ್ಷತೆ ವಹಿಸಿದ್ದರು.

ಮುಖಂಡರಾದ ರಾಮಯ್ಯ ಜವಳಗೇರಾ, ನರಸಪ್ಪ ದೇವಸುಗೂರು, ಮಹಾದೇವ ಬಗನೂರು, ತಿಮ್ಮಣ್ಣ ಬೋವಿ, ರಾಜಸಾಬ, ಜಿ.ರಾಮಬಾಬು, ಕೆ.ವೈ.ಬಸವರಾಜ ನಾಯಕ, ತಾಯಪ್ಪ, ಶಿವಪುತ್ರಗೌಡ, ರಂಗಪ್ಪ ನಾಯಕ, ನಾಗರಾಜ ಕಾಜಿನಗೌಡ, ರಾಮುನಾಯಕ, ನಾಗರಾಜ ಸೋಮಲಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.