ಮಸ್ಕಿ: ತಲೆಖಾನ ಗ್ರಾಮ ಪಂಚಾಯಿತಿಗೆ 2024-2025 ಸಾಲಿಗೆ ಸರ್ಕಾರದಿಂದ ಮಂಜೂರಾದ 260 ಮನೆಗಳ ಹಂಚಿಕೆಯಲ್ಲಿ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿo ಸರ್ಕಾರದ ನಿಯಮ ಉಲ್ಲಂಘಿಸಿ ಮನೆ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಗುರುವಾರ ಪಟ್ಟಣದ ಡಾ. ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರು ನಿಜವಾದ ಬಡವರಿಗೆ, ಮನೆ ಇಲ್ಲದವರಿಗೆ ಮನೆಗಳು ಕೊಡಬೇಕು. ತಲೆಖಾನ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮವಾಗಿ ಜಿಪಿಎಸ್ ಮಾಡಿ ಮನೆ ಕೊಡುತ್ತಿರುವ ಬಗ್ಗೆ ಸಾಕಸ್ಟು ಆರೋಪಗಳು ಇವೆ. ಕೂಡಲೇ ಮಾಡಿರುವ ಜಿಪಿಎಸ್ ಅನ್ನು ರದ್ದು ಮಾಡಿ ಮತ್ತೊಮ್ಮೆ ಗ್ರಾಮ ಸಭೆ ಮಾಡಿ ಮನೆಗಳನ್ನು ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು. ನಿಯಮ ಉಲ್ಲಂಘಿಸಿದ ಪಂಚಾಯಿತಿ ಅಧ್ಯಕ್ಷರು, ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಶರಣಬಸವ ಸೊಪ್ಪಿಮಠ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಮೌನೇಶ ನಾಯಕ, ತಲೆಖಾನ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೌನೇಶ ರಾಥೋಡ, ಶ್ರೀನಿವಾಸ, ಲಿಂಗಪ್ಪ ಚೌಹಾಣ್ ಸೇರಿದಂತೆ ತಲೆಖಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು ಗ್ರಾಮಸ್ಥರು, ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.