ಸಿಂಧನೂರು: ತಾಲ್ಲೂಕಿನ ವಿರೂಪಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಮಲ್ಲದಗುಡ್ಡ ಗ್ರಾಮದ ಸದಸ್ಯ ತ್ರಿನಾಥ ಸತ್ಯನಾರಾಯಣ ಅವರ ಅಕಾಲಿಕ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ ಭಾನುವಾರ ಮತದಾನ ನಡೆಯಿತು. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 5ರವರೆಗೆ ಶಾಂತಿಯುತವಾಗಿ ನಡೆಯಿತು ಎಂದು ಪ್ರಭಾರ ತಹಶೀಲ್ದಾರ್ ಕೆ. ಶ್ರುತಿ ತಿಳಿಸಿದ್ದಾರೆ.
ಈ ಕುರಿತು ಚುನಾವಣಾ ಅಧಿಕಾರಿ ವೀರೇಶ ಗೋನವಾರ ಮಾತನಾಡಿ, ‘ಸಿಂಧನೂರು ತಾಲ್ಲೂಕಿನ ಮಸ್ಕಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ವಿರೂಪಾಪುರ ಗ್ರಾ.ಪಂ ಮಲ್ಲದಗುಡ್ಡ ಗ್ರಾಮದ ಮತಗಟ್ಟೆಯಲ್ಲಿ 550 ಪುರುಷರು, 609 ಮಹಿಳಾ ಮತದಾರರು ಹಾಗೂ ಒಬ್ಬ ತೃತೀಯ ಲಿಂಗಿ ಮತದಾರ ಸೇರಿ ಒಟ್ಟು 1,160 ಜನ ಮತದಾರರು ನೋಂದಣಿ ಮಾಡಿಕೊಂಡಿದ್ದರು.
ಪೈಕಿ ಚುನಾವಣೆಯಲ್ಲಿ 232 ಪುರುಷರು, 247 ಮಹಿಳಾ ಮತದಾರರು ಸೇರಿ ಒಟ್ಟು 479 ಮತದಾರರು ಮತ ಚಲಾಯಿಸುವ ಮೂಲಕ ಶೇ 41.29ರಷ್ಟು ಮತದಾನ ನಡೆದಿದೆ ಎಂದು ಹೇಳಿದರು.
ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಬಂದೋಬಸ್ತ್ ಒದಗಿಸಿದ್ದರು. ಮೇ 28ರಂದು ಬೆಳಿಗ್ಗೆ 8ರಿಂದ ನಗರದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ರಾಮದಾಸ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.