ADVERTISEMENT

ಮಸ್ಕಿ: ತ್ಯಾಜ್ಯ ಹೊತ್ತು ನಿಂತ ಪುರಸಭೆ ವಾಹನಗಳು!

ತ್ಯಾಜ್ಯ ವಿಲೇವಾರಿಗೆ ಸ್ಥಳದ ಕೊರತೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 12:36 IST
Last Updated 3 ಏಪ್ರಿಲ್ 2024, 12:36 IST
ತ್ಯಾಜ್ಯ ವಿಲೇವಾರಿಯ ಸ್ಥಳದ ಸಮಸ್ಯೆಯಿಂದಾಗಿ ಬುಧವಾರ ಮಸ್ಕಿ ಪಟ್ಟಣದ ವಿವಿಧ ವಾರ್ಡ್‌ ಗಳಲ್ಲಿ ಸಂಗ್ರಹಿಸಿದ ತ್ಯಾಜ್ಯಹೊತ್ತು ರಸ್ತೆ ಬದಿಯಲ್ಲಿ ನಿಂತ ಪುರಸಭೆ ವಾಹನಗಳು
ತ್ಯಾಜ್ಯ ವಿಲೇವಾರಿಯ ಸ್ಥಳದ ಸಮಸ್ಯೆಯಿಂದಾಗಿ ಬುಧವಾರ ಮಸ್ಕಿ ಪಟ್ಟಣದ ವಿವಿಧ ವಾರ್ಡ್‌ ಗಳಲ್ಲಿ ಸಂಗ್ರಹಿಸಿದ ತ್ಯಾಜ್ಯಹೊತ್ತು ರಸ್ತೆ ಬದಿಯಲ್ಲಿ ನಿಂತ ಪುರಸಭೆ ವಾಹನಗಳು   

ಮಸ್ಕಿ: ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿಗೆ ಸ್ಥಳದ ಸಮಸ್ಯೆ ಉಂಟಾಗಿ ತ್ಯಾಜ್ಯ ಸಂಗ್ರಹಿಸಿದ ಪುರಸಭೆಯ ವಾಹನಗಳು ಹೆದ್ದಾರಿ ಪಕ್ಕದಲ್ಲಿ ಗಂಟೆ ಗಟ್ಟಲೇ ನಿಂತ ಘಟನೆ ಬುಧವಾರ ನಡೆಯಿತು.

ವೆಂಕಟಾಪೂರ ರಸ್ತೆಯಲ್ಲಿನ ಖಾಸಗಿ ವ್ಯಕ್ತಿಯೊಬ್ಬರ 2 ಎಕರೆ ಜಮೀನನ್ನು ತ್ಯಾಜ್ಯ ಹಾಕಲು ವಾರ್ಷಿಕ ಗುತ್ತಿಗೆ ಆಧಾರದ ಮೇಲೆ ಪುರಸಭೆ ಒಪ್ಪಂದ ಮಾಡಿಕೊಂಡಿತ್ತು. ಮಾರ್ಚ್‌ 31ಕ್ಕೆ ಗುತ್ತಿಗೆ ಅವದಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಮೀನಿನ ಮಾಲೀಕರು ಒಂದು ವರ್ಷದ ಮುಂಗಡ ಹಣ ನೀಡಬೇಕು ಎಂದು ಪಟ್ಟು ಹಿಡಿದ ಕಾರಣ ತ್ಯಾಜ್ಯ ವಿಲೇವಾರಿ ಮೂರು ದಿನಗಳಿಂದ ಕಗ್ಗಂಟಾಗಿ ಪರಿಣಮಿಸಿದ್ದು ಪುರಸಭೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಖಾಸಗಿ ವ್ಯಕ್ತಿಯೊಬ್ಬರ 2 ಎಕರೆ ಜಮೀನಿಗೆ ತಿಂಗಳಿಗೆ ₹12 ಸಾವಿರದಂತೆ ವಾರ್ಷಿಕ ₹1.44 ಲಕ್ಷ ಬಾಡಿಗೆ ಆಧಾರದ ಮೇಲೆ ಹಿಂದಿನ ಪುರಸಭೆ ಮುಖ್ಯಾಧಿಕಾರಿಗಳು ಒಪ್ಪಂದ ಮಾಡಿಕೊಂಡಿದ್ದರು. ಮುಂಗಡ ಹಣ ನೀಡಲು ಪುರಸಭೆ ಆಡಳಿತಾಧಿಕಾರಿಗಳು ಒಪ್ಪದ ಕಾರಣ ಕಸ ವಿಲೇವಾರಿಗೆ ಜಮೀನಿನ ಮಾಲೀಕರು ಅನುಮತಿ ನೀಡದ ಕಾರಣ ಸಮಸ್ಯೆ ಉಂಟಾಗಿದೆ.

ADVERTISEMENT

ಬುಧವಾರ ಬೆಳಿಗ್ಗೆ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ನಾಲ್ಕು ಟಾಟಾ ಏಸ್‌ ಹಾಗೂ ಎರಡು ಟ್ಯಾಕ್ಟರ್‌ಗಳಲ್ಲಿ ಸಂಗ್ರಹಿಸಿದ ತ್ಯಾಜ್ಯವನ್ನು ಎಲ್ಲಿ ವಿಲೇವಾರಿ ಮಾಡಬೇಕು ಎಂಬುದು ಪುರಸಭೆ ಆಡಳಿತಕ್ಕೆ ದೊಡ್ಡ ಸಮಸ್ಯೆ ಉಂಟು ಮಾಡಿದೆ. ಬೆಳಿಗ್ಗೆ 8 ಗಂಟೆಯಿಂದಲೇ ತ್ಯಾಜ್ಯ ಸಂಗ್ರಹದ ವಾಹನಗಳೊಂದಿಗೆ ಪುರಸಭೆ ಸಿಬ್ಬಂದಿ ಕವಿತಾಳ ಕ್ರಾಸ್‌ ಬಳಿ ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ವಿಲೇವಾರಿ ಜಾಗ ಖರೀದಿ ನೆನೆಗುದಿಗೆ: ಪಟ್ಟಣದ ಮುದಗಲ್‌ ರಸ್ತೆಯಲ್ಲಿ ತ್ಯಾಜ್ಯ ವಿಲೇವಾರಿಗೆ ಜಿಲ್ಲಾಡಳಿತ 5 ಎಕರೆ ಸರ್ಕಾರಿ ಜಮೀನು ಗುರುತಿಸಿದೆ. ಆದರೆ, ಜಮೀನನ್ನು ಪುರಸಭೆಗೆ ಹಸ್ತಾಂತರಿಸುವ ಕಾರ್ಯ ನೆನೆಗುದಿಗೆ ಬಿದ್ದ ಕಾರಣ ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿಗೆ ಪುರಸಭೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಧಿಕಾರಿಗಳು ಕೂಡಲೇ ಕಸ ವಿಲೇವಾರಿ ಜಗದ ಸಮಸ್ಯೆ ಪರಿಹರಿಸಿ ಶಾಸ್ವತ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.