ADVERTISEMENT

ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣಕ್ಕೆ ವಜ್ಜಲ್ ಕೊಡುಗೆ ಏನು?

ಮಾಜಿ ಶಾಸಕರಿಗೆ ಶಾಸಕ ಹೂಲಗೇರಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 5:55 IST
Last Updated 25 ಮಾರ್ಚ್ 2023, 5:55 IST
ಹೂಲಗೇರಿ
ಹೂಲಗೇರಿ   

ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣಕ್ಕೆ ಮಾಜಿ ಶಾಸಕ, ಗಣಿ ಕಂಪನಿ ನಿಗಮದ ಅಧ್ಯಕ್ಷರಾದ ಮಾನಪ್ಪ ಡಿ ವಜ್ಜಲ್ ಅವರ ಕೊಡುಗೆ ಏನೆಂದು ಜನರಿಗೆ ಬಹಿರಂಗಪಡಿಸಲಿ ಎಂದು ಶಾಸಕ ಡಿಎಸ್ ಹೂಲಗೇರಿ ತಿರುಗೇಟು ನೀಡಿದ್ದಾರೆ.

ಹಟ್ಟಿ ಪಟ್ಟಣದ ಕೋಠಾ ಕ್ರಾಸ್ ಬಳಿ ವಿವಿಧ ಕಾಮಗಾರಿಗೆ ಚಾಲನೆ ನೀಡಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿದರು.

ತಾಲ್ಲೂಕಿಗೆ ₹1300 ಕೋಟಿ ಅನುದಾನ ತಂದು ಜನರಿಗೆ ಕುಡಿಯುವ ನೀರು, ರಸ್ತೆ, ಚರಂಡಿ, ಶಿಕ್ಷಣ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಅಭಿವೃದ್ದಿಯನ್ನು ಸಹಿಸಿಕೊಳ್ಳಲಾಗದೆ ಮಾಜಿ ಶಾಸಕರು ಇಲ್ಲ ಸಲ್ಲದ ಆರೋಪ ಮಾಡುವುದನ್ನು ಬಿಟ್ಟು, ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸಲಿ ಎಂದರು.

ADVERTISEMENT

ಗಣಿ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಗಣಿ ನಿಗಮದ ಅಧ್ಯಕ್ಷರು ವಿಫಲರಾಗಿದ್ದಾರೆ. ಅನ್‌ ಫಿಟ್ ಯೋಜನೆ ಜಾರಿಗೆ ತರುತ್ತೇನೆ ಎಂದು ಸುಳ್ಳುಗಳನ್ನು ಹೇಳುತ್ತಾ ಕಾಲ ಹರಣ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳಿಗೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.

5 ವರ್ಷದಲ್ಲಿ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ₹5 ಕೋಟಿ ಹಟ್ಟಿ ಪಟ್ಟಣ ಅಭಿವೃದ್ದಿಗಾಗಿ ನೀಡಲಾಗಿದೆ. ಗಣಿ ಕಂಪನಿ ವತಿಯಿಂದ ₹4.30 ಲಕ್ಷ ಕಾಕಾನಗರ ಬ್ರೀಜ್ ನಿರ್ಮಾಣಕ್ಕೆ ನೀಡಲಾಗಿದೆ. ಡಿಎಂಎಫ್ ಯೋಜನೆ ಅಡಿಯಲ್ಲಿ ಪ್ರತಿಯೊಂದು ಹಳ್ಳಿಗೆ ಸಿಸಿರಸ್ತೆ, ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಅದನ್ನು ಪರಿಶೀಲನೆ ಮಾಡಲಿ ಎಂದು ಸವಾಲು ಹಾಕಿದರು.

ಟಿಕೆಟ್ ನೀಡುವುದರಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಜನರ ದಾರಿ ತಪ್ಪಿಸುವ ಕಾರ್ಯವನ್ನು ವಿಪಕ್ಷ ನಾಯಕರು ಮಾಡುತ್ತಿದ್ದಾರೆ. ಅದಕ್ಕೆ ಜನರು ಕಿವಿಗೊಡಬಾರದು. ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನೀಡುತ್ತದೆ ಎಂಬ ಭರವಸೆ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.