ರಾಯಚೂರು: ಆದಾಯ ತಂದು ಕೊಡುವ ಮಾರ್ಗಗಳಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಕೊಳಕು ಹಾಗೂ ಡಕೋಟಾ ಬಸ್‌ಗಳನ್ನು ಓಡಿಸುತ್ತಿರುವ ಕಾರಣ ಪ್ರಯಾಣಿಕರು ತೊಂದರೆ ಅನುಭವಿಸ ತೊಡಗಿದ್ದಾರೆ.
ಹುಬ್ಬಳ್ಳಿ, ಧಾರವಾಡ, ಗದಗ ಹಾಗೂ ಬೆಳಗಾವಿಗೆ ಕೊಳಕು ಬಸ್‌ಗಳನ್ನು ಓಡಿಸಲಾಗುತ್ತಿದೆ. ಸ್ಲೀಪರ್ ಬಸ್‌ಗಳು ಹೆಚ್ಚು ಕೊಳಕಾಗಿವೆ. ಅವುಗಳ ಕಿಟಕಿಗಳು ಸರಿಯಾಗಿ ತೆರೆದುಕೊಳ್ಳುವುದೂ ಇಲ್ಲ. ಮುಚ್ಚಿಕೊಳ್ಳುವುದೂ ಇಲ್ಲ. ಮಳೆ ಬಂದಾಗ ಕಿಟಕಿಯಿಂದ ಹಾಸಿಗೆ ಮೇಲೆಯೇ ನೀರು ಬಂದು ನಿಲ್ಲುತ್ತದೆ. ಪ್ರಯಾಣಿಕರು ಕೊಡೆ ಹಿಡಿದುಕೊಂಡು ಬಸ್‌ನಲ್ಲಿ ಪ್ರಯಾಣ ಮಾಡಬೇಕಾದ ಸ್ಥಿತಿ ಇದೆ.
ಬಸ್‌ಗಳು ಹಳೆಯದಾಗಿರುವ ಕಾರಣ ಹೆಚ್ಚು ಓಡುವುದೂ ಇಲ್ಲ. ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿಗೆ ತೆರಳುವ ಬಸ್‌ಗಳಲ್ಲಿ ಆಗಾಗ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಖಾಸಗಿ ಸ್ಲೀಪರ್ ಬಸ್‌ಗಳಿಗಿಂತ ರಸ್ತೆ ಸಾರಿಗೆ ಸಂಸ್ಥೆಯ ಸ್ಲೀಪರ್ ಬಸ್‌ಗಳಲ್ಲಿ ಹೆಚ್ಚಿನ ಪ್ರಯಾಣ ದರ ಇದೆ. ಆದರೂ ಪ್ರಯಾಣಿಕರು ಸುರಕ್ಷತೆ ವಿಷಯದಲ್ಲಿ ರಾಜಿ ಮಾಡಿಕೊಳ್ಳದೇ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲೇ ಸಂಚರಿಸಲು ಇಷ್ಟಪಡುತ್ತಾರೆ. ಆದರೆ, ರಾಯಚೂರು ವಿಭಾಗವು ಪ್ರಯಾಣಿಕರಿಗೆ ಉತ್ತಮ ಸೇವೆ ಕೊಡುವಲ್ಲಿ ವಿಫಲವಾಗಿದೆ.
ಜಿಲ್ಲೆ ಶೈಕ್ಷಣಿಕವಾಗಿ ಅಧೋಗತಿಗೆ ತಲುಪಿದೆ. ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಶಿಕ್ಷಣದಲ್ಲಿ ಜಿಲ್ಲೆ ಹಿಂದೆ ಬಿದ್ದಿದೆ. ಹೀಗಾಗಿ ಪ್ರಜ್ಞಾವಂತರು ತಮ್ಮ ಮಕ್ಕಳನ್ನು ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಶಾಲೆಗಳಿಗೆ ಸೇರಿಸಿದ್ದಾರೆ. ಅಲ್ಲಿಗೆ ಹೋಗಿಬರುವ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಸರಿಯಾದ ಬಸ್‌ಗಳೇ ಇಲ್ಲ.
ರಾಯಚೂರಲ್ಲಿ ಬೇರೆ ಬೇರೆ ಇಲಾಖೆಗಳಲ್ಲಿ ಬೆಳಗಾವಿ, ಧಾರವಾಡ ಹಾಗೂ ವಿಜಯಪುರ ಜಿಲ್ಲೆಯ ಅಧಿಕಾರಿಗಳೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಇವರಿಗೂ ಊರಿಗೆ ಹೋಗಿ ಬರಲು ಸಾರಿಗೆ ಸಂಸ್ಥೆಯ ಬಸ್‌ಗಳ ಸಮಸ್ಯೆ ಇದೆ.
ಬೆಂಗಳೂರಿನಿಂದ ರಾಯಚೂರಿಗೆ ಬರುವ ಜನರು, ಮಂತ್ರಾಲಯಕ್ಕೆ ಭೇಟಿ ಕೊಡುವ ಭಕ್ತರು ಸಹ ರಾಯಚೂರು ಡಿಪೊದ ಕೊಳಕು ಬಸ್‌ಗಳಿಂದ ರೋಸಿ ಹೋಗಿದ್ದಾರೆ. ಮುಂಗಡ ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲೇ ರಾಯಚೂರು ಡಿಪೊದ ಬಸ್ ಬಿಟ್ಟು ಬೇರೆ ಯಾವ ಡಿಪೊದ ಬಸ್ ಇದ್ದರೂ ಟಿಕೆಟ್ ಬುಕ್ ಮಾಡಿ ಎಂದು ಹೇಳಿಯೇ ಟಿಕೆಟ್ ಬುಕ್ ಮಾಡಿಸುವ ಸ್ಥಿತಿ ಇದೆ.
ಶಕ್ತಿನಗರ–ದಾಂಡೇಲಿ ಬಸ್ 30 ವರ್ಷಗಳಿಂದ ಸಂಚರಿಸುತ್ತಿದೆ. ಇದು ಬೆಳಿಗ್ಗೆ ಸಂಚರಿಸುತ್ತದೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಪ್ರಕಟಣೆ ಹೊರಡಿಸದೇ ರಾಯಚೂರು–ಬೆಳಗಾವಿ ಸ್ಲೀಪರ್ ಬಸ್ ಆರಂಭಿಸಿದ್ದರು. ಯಾವುದೇ ಮುನ್ಸೂಚನೆ ನೀಡದೇ ಬಂದ್ ಸಹ ಮಾಡಿದರು. ಕೊಳಕು ಸ್ಲೀಪರ್ ಬಸ್ ಇದ್ದರೂ ಊರಿಗೆ ಹೋಗಿ ಬರಲು ಒಂದು ಬಸ್ ಶುರುವಾಗಿದೆ ಎನ್ನುವುದೇ ಪ್ರಯಾಣಿಕರಿಗೆ ಸಮಾಧಾನ ತಂದಿತ್ತು.
ಪ್ರತಿನಿತ್ಯ ರಾಯಚೂರಿನಿಂದ ಧಾರವಾಡಕ್ಕೆ ರಾತ್ರಿ 10 ಗಂಟೆಗೆ ತೆರಳಿದರೆ, ಧಾರವಾಡದಿಂದ ರಾತ್ರಿ 9.30ಕ್ಕೆ ಬೇರೊಂದು ಬಸ್ ಹೊರಡುತ್ತದೆ. ಬಸ್ ಸಂಚರಿಸಲು ಆರಂಭಿಸಿದ ನಂತರ ಮಲಗಿಕೊಂಡರೆ ಅದರಲ್ಲಿ ಹತ್ತು ನಿಮಿಷವೂ ನಿದ್ದೆ ಬರುವುದಿಲ್ಲ. ಕಾರಣ ಅದು ಪೂರ್ತಿ ಡಕೋಟ್ ಬಸ್. ಬಸ್‌ನ ಭಾಗಗಳೆಲ್ಲ ಕರ್ಕಶ ಶಬ್ದವನ್ನು ಹೊರಹಾಕುತ್ತವೆ. ಬಸ್ 50 ಕಿ.ಮೀ ದಾಟಿದರೆ ಸಾಕು ಬಸ್ ನಡುಗಲು ಪ್ರಾರಂಭವಾಗುತ್ತದೆ. ಕಿಟಕಿಯ ಗಾಜುಗಳು ಕಿರುಗುಡುತ್ತವೆ.
‘ನಿತ್ಯ ರಾಯಚೂರು ಹಾಗೂ ಧಾರವಾಡದಿಂದ ಸಂಚರಿಸುವ ಕೆಎ–36 ಎಫ್–1114 ಹಾಗೂ ಕೆಎ–36 ಎಫ್– 1301 ಬಸ್ಸುಗಳ ಸ್ಥಿತಿ ಒಂದೇ ರೀತಿಯದಾಗಿವೆ‘ ಎನ್ನುತ್ತಾರೆ ಹುಬ್ಬಳ್ಳಿಯ ನಿವಾಸಿ ವಾಗೀಶ್ ಹಾಗೂ ಅವರ ಗೆಳೆಯರು.
‘ರಾಯಚೂರಿನಿಂದ ನಿತ್ಯ ರಾತ್ರಿ 9.30ಕ್ಕೆ ಬೆಳಗಾವಿ ಅಥವಾ ಹುಬ್ಬಳ್ಳಿ– ಧಾರವಾಡ ಮಾರ್ಗವಾಗಿ ಬೆಳಗಾವಿಗೆ ಹೊಸ ಸ್ಲೀಪರ್ ಬಸ್ ಆರಂಭಿಸಬೇಕು. ಇದೇ ಅವಧಿಯಲ್ಲಿ ಬೆಳಗಾವಿಯಿಂದಲೂ ರಾಯಚೂರಿಗೆ ಬಸ್ ಓಡಿಸಬೇಕು‘ ಎನ್ನುತ್ತಾರೆ ಶಕ್ತಿನಗರದ ಸುಧಾರಾಣಿ.
‘ನಾನು ಚಿಕ್ಕೋಡಿಯ ಆರ್ಯುವೇದ ಕಾಲೇಜಿನಲ್ಲಿ ಓದುತ್ತಿರುವೆ. ರಾಯಚೂರು ಜಿಲ್ಲೆಯ ಅನೇಕ ವಿದ್ಯಾರ್ಥಿಗಳು ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ಓದುತ್ತಿದ್ದಾರೆ. ಒಂದು ಹೊಸ ಸ್ಲೀಪರ್ ಬಸ್ ಆರಂಭಿಸಿದರೆ ಎಲ್ಲರಿಗೂ ಅನುಕೂಲವಾಗಲಿದೆ‘ ಎಂದು ಹೇಳುತ್ತಾರೆ.
‘ರಾಯಚೂರು ಜಿಲ್ಲೆಯ ಜನರ ಪಾಲಿಗೆ ಜಿಲ್ಲಾ ಉಸ್ತುವಾರಿ ಸಚಿವರು ಇದ್ದೂ ಇಲ್ಲದ ಲೆಕ್ಕದಲ್ಲಿದ್ದಾರೆ. ಶಾಸಕರು ಪ್ರಯಾಣಿಕರ ಅನುಕೂಲಕ್ಕೆ ಹೊಸ ಬಸ್ ಕೊಡುವಂತೆ ನಿಗಮಕ್ಕೆ ಮನವಿ ಮಾಡಿಕೊಳ್ಳುತ್ತಿಲ್ಲ. ಒತ್ತಡವನ್ನೂ ಹಾಕುತ್ತಿಲ್ಲ. ಹೀಗಾಗಿ ಜಿಲ್ಲೆಯ ಜನರ ಸಮಸ್ಯೆಯೂ ತಪ್ಪಿಲ್ಲ‘ ಎಂದು ಲಿಂಗಸುಗೂರಿನ ನರಸಪ್ಪ ಬೇಸರ ವ್ಯಕ್ತಪಡಿಸುತ್ತಾರೆ.
‘ರಾಯಚೂರು ಡಿಪೊದಲ್ಲಿ ಒಟ್ಟು 11 ಹಳೆಯ ಬಸ್‌ಗಳು ಇವೆ. ಅವುಗಳಿಗೆ ಬದಲಿ ಹೊಸ ಸ್ಲೀಪರ್ ಬಸ್ ಕೊಡುವಂತೆ ನಿಗಮಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಹೊಸ ಬಸ್‌ಗಳು ಬಂದರೆ ಆದ್ಯತೆ ಮೇಲೆ ಧಾರವಾಡ ಹಾಗೂ ಬೆಳಗಾವಿಗೆ ಬಸ್ ಓಡಿಸಲಾಗುವುದು‘ ಎಂದು ಕೆಕೆಆರ್‌ಟಿಸಿ ರಾಯಚೂರು ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ.
ರಾಯಚೂರು ಸಾರಿಗೆ ಘಟಕಕ್ಕೆ ಕೆಕೆಆರ್‌ಡಿಬಿ ಹಾಗೂ ಶಾಸಕರ ಅನುದಾನದಲ್ಲೂ ನೂತನ ಬಸ್‌ಗಳನ್ನು ಕೊಡಲು ಅವಕಾಶ ಇದೆ. ಜನ ಪ್ರತಿನಿಧಿಗಳು ಆಸಕ್ತಿ ತೋರಿಸಿದರೆ ಸಮಸ್ಯೆಗೆ ಪರಿಹಾರ ಕಾಣಲು ಸಾಧ್ಯವಿದೆ.– ಎಂ.ರಾಚಪ್ಪ, ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ
ರಾಯಚೂರು ಮಾರ್ಗವಾಗಿ ಮಂತ್ರಾಲಯ ಹಾಗೂ ಶ್ರೀಶೈಲಕ್ಕೆ ನೇರವಾಗಿ ತೆರಳುವ ಪ್ರಯಾಣಿಕರಿಗೆ ಸ್ಲೀಪರ್ ಬಸ್‌ಗಳನ್ನು ಆರಂಭಿಸಿ ಅನುಕೂಲ ಮಾಡಿಕೊಡಬೇಕು.– ಸೋಮಶೇಖರ, ಪ್ರಯಾಣಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.