ADVERTISEMENT

ಹಟ್ಟಿ: ಚಿನ್ನದ ಗಣಿ ಕಾರ್ಮಿಕರ ಪ್ರತಿಭಟನೆ

ಬೋನಸ್ ನೀಡದಿರುವುದಕ್ಕೆ ಗಣಿ ಆಡಳಿತ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 3:26 IST
Last Updated 4 ಫೆಬ್ರುವರಿ 2022, 3:26 IST
ಬೋನಸ್ ವಿತರಣೆಗೆ ಆಗ್ರಹಿಸಿ ಹಟ್ಟಿ ಚಿನ್ನದಗಣಿ ಕಾರ್ಮಿಕರು ಪ್ರತಿಭಟಿಸಿದರು
ಬೋನಸ್ ವಿತರಣೆಗೆ ಆಗ್ರಹಿಸಿ ಹಟ್ಟಿ ಚಿನ್ನದಗಣಿ ಕಾರ್ಮಿಕರು ಪ್ರತಿಭಟಿಸಿದರು   

ಹಟ್ಟಿ ಚಿನ್ನದ ಗಣಿ : ಕಾರ್ಮಿಕರಿಗೆ ವಿತರಣೆಯಾಗಬೇಕಾದ ಬೋನಸ್ ನೀಡದಿರುವುದಕ್ಕೆ ಆಕ್ರೋಶಗೊಂಡ ಚಿನ್ನದ ಗಣಿಯ ಬೆಳಗಿನ ಪಾಳೆ ಕಾರ್ಮಿಕರು ಗುರುವಾರ ಕೆಲಸಕ್ಕೆ ತೆರಳದೆ ಶಾಷ್ಟ್ನ ಒಳಾಂಗಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ ಗಣಿ ಆಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರಿಯಾಗಿ ಬೋನಸ್ ವಿತರಣೆಯಾಗದೆ ವರ್ಷ ಕಳೆಯುತ್ತಾ ಬಂದಿದೆ. ಸಮಯಕ್ಕೆ ಸರಿಯಾಗಿ ಬೋನಸ್ ವಿತರಿಸಿಲ್ಲ. ಸಮಯಕ್ಕೆ ಸರಿಯಾಗಿ ಬೋನಸ್ ಕೊಡಿಸುವಲ್ಲಿ ಕಾರ್ಮಿಕ ಸಂಘಟನೆಗಳು ವಿಫಲವಾಗಿವೆ. ಹಲವಾರು ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದುಕೊಂಡಿವೆ. ನಮ್ಮ ಗೋಳು ಕೇಳುವವರೇ ಇಲ್ಲವೆಂದು ದೂರಿದರು.

ಬೋನಸ್ ಎಕ್ಸ್ ಗ್ರೇಷಿಯಾ ವಿತರಣೆ ಜತೆಯಲ್ಲಿ ಉತ್ಪಾದನಾ ಪ್ರೋತ್ಸಾಹ ಧನ ಹೊಸ ವೇತನ ಒಪ್ಪಂದ, ಮೆಡಿಕಲ್ ಅನ್‌ಫಿಟ್‌ ಕಾರ್ಮಿಕರ ಮಕ್ಕಳಿಗೆ ಉದ್ಯೋಗ ಕೋಡಬೇಕೆಂಬ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು. ಆಸ್ಪತ್ರೆಯಲ್ಲಿ ಅಸಮರ್ಪಕ ಔಷಧಿ ವಿತರಿಸಲಾಗುತ್ತಿದೆ. ಅಗ್ಗದ ಬೆಲೆಯ ಔಷಧಿ ಕೂಡ ಹಟ್ಟಿ ಆಸ್ಫತ್ರೆಯಲ್ಲಿ ರೋಗಿಗಳಿಗೆ ಸಿಗುತ್ತಿಲ್ಲ. ಇದರಿಂದ ರೋಗಿಗಳು ರೋಸಿ ಹೋಗಿದ್ದಾರೆ, ಇದನ್ನು ಸರಿಪಡಿಸಿಬೇಕೆಂದು ಆಗ್ರಹಿಸಿದರು.

ADVERTISEMENT

ಕಾರ್ಮಿಕರ ಸಮಸ್ಯೆಯನ್ನು ಕೇಳುವವರೇ ಇಲ್ಲದಂತಾಗಿದೆ. ಆದಷ್ಟು ಬೇಗನ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದರು, ಈಗಾಗಲೇ ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಧಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದರು.

ಪ್ರತಿಭಟನೆ ಸ್ಧಳಕ್ಕೆ ಪ್ರಭಾರಿ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಕಾಶ ಬಹದ್ದೂರ್ ಭೇಟಿ ನೀಡಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ಬೇಡಿಕೆಗಳನ್ನು ಈಡೇರಿಸುವಂತೆ ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಿಕೊಡಲಾಗುವುದು ಎಂದು ಹೇಳಿದ ನಂತರ ಪ್ರತಿಭಟನೆ ಕೈಬಿಟ್ಟು ಕಾರ್ಮಿಕರು ಕೆಲಸಕ್ಕೆ
ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.