ADVERTISEMENT

ವಿಶ್ವ ಲಸಿಕಾ ಸಪ್ತಾಹ: ಅಭಿಯಾನ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 14:40 IST
Last Updated 4 ಜೂನ್ 2025, 14:40 IST

ರಾಯಚೂರು: ‘ವಿಶ್ವ ಲಸಿಕಾ ಸಪ್ತಾಹ ಕಾರ್ಯಕ್ರಮದಡಿ ಪ್ರತಿ ವರ್ಷದಂತೆ ಈ ವರ್ಷವು ಮೇ 26ರಿಂದ 31ರವರೆಗೆ ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆದು ಅಭಿಯಾನದಲ್ಲಿ ಒಟ್ಟು 494 ಮಕ್ಕಳಿಗೆ ಲಸಿಕೆ ನೀಡಲಾಗಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಸುರೇಂದ್ರ ಬಾಬು ತಿಳಿಸಿದ್ದಾರೆ.

ಅಭಿಯಾನದಲ್ಲಿ ಗುರಿ ಮೀರಿ, ಲಸಿಕಾ ವಂಚಿತ 494 ಮಕ್ಕಳಿಗೆ ಪೆಂಟಾ ಲಸಿಕೆ ಹಾಕಲಾಗಿದೆ. ಎಮ್.ಆರ್-1ರ ಲಸಿಕೆಯನ್ನು 427 ಮಕ್ಕಳಿಗೆ ನೀಡಲಾಯಿತು. 391 ಮಕ್ಕಳಿಗೆ ಎಂ.ಆರ್-2ರ ಲಸಿಕೆ ನೀಡಲಾಗಿದೆ.

ಜೂನ್ 23ರಿಂದ ವಿಶೇಷ ಲಸಿಕಾ ಅಭಿಯಾನ: ಜೂನ್ 23ರಿಂದ 28ರವರೆಗೆ ವಿಶೇಷ ಲಸಿಕಾ ಅಭಿಯಾನ ನಡೆಯಲಿದ್ದು, ಪ್ರತಿ ಮಂಗಳವಾರ ಮತ್ತು ಗುರುವಾರ ಲಸಿಕಾ ಕಾರ್ಯಕ್ರಮ ಜರುಗುತ್ತಿದೆ. ವಿಶೇಷ ಲಸಿಕಾ ಸಪ್ತಾಹ ಕಾರ್ಯಕ್ರಮದಲ್ಲಿ ಮಕ್ಕಳನ್ನು ಕಾಡುವ 12 ಮಾರಕ ರೋಗಗಳ ನಿಯಂತ್ರಣದ ಲಸಿಕೆಗಳನ್ನು ಹಾಕಲಾಗುತ್ತದೆ.

ADVERTISEMENT

ಲಸಿಕೆ ಪಡೆಯದೇ ಇರುವ ಹಾಗೂ ಬಿಟ್ಟು ಹೋದ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಇಲ್ಲದ ದೊಡ್ಡಿ, ತಾಂಡಾ ಹಾಗೂ ನಗರದ ಕೊಳೆಗೇರಿ ಪ್ರದೇಶಗಳಲ್ಲಿ ಅಚ್ಚುಕಟ್ಟಾಗಿ ಲಸಿಕೆ ಹಾಕಲಾಗುವುದು. ಪೆಂಟಾದ ಮೊದಲನೇ ಡೋಸ್ ಪಡೆಯದೇ ಇರುವ ಮಕ್ಕಳಿಗೆ ಮತ್ತು ಎಂ.ಆರ್‌-1 ಹಾಗೂ 2ರ ಲಸಿಕೆ ವಂಚಿತ ಮಕ್ಕಳಿಗೆ ವಿಶೇಷ ಲಸಿಕಾ ಅಭಿಯಾನ ನಡೆಸಲಾಗುತ್ತದೆ.

ಜಿಲ್ಲೆಯಾದ್ಯಂತ ಎಲ್ಲಾ ನಗರ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದ್ದು, ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿರುವ ಲಸಿಕಾ ವಂಚಿತ ಮಕ್ಕಳನ್ನು ಲಸಿಕಾ ಕೇಂದ್ರಕ್ಕೆ ಕರೆದುಕೊಂಡು ಬಂದು ಲಸಿಕೆ ಹಾಕಿಸುವುದರ ಮೂಲಕ ಈ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.