ರಾಮನಗರ: ‘ಸರ್ಕಾರಿ ನಿಯಮಗಳನ್ನು ಮೀರಿ ಬಿಲ್‌ಗಳಿಗೆ ಸಹಿ ಮಾಡುವ ಕೆಲಸ ನನ್ನಿಂದಾಗದು. ತಪ್ಪು ಲೆಕ್ಕಾಚಾರದ ಬಿಲ್‌ಗಳಿಗೆ ಅನುಮೋದನೆ ನೀಡುವಂತೆ ಒತ್ತಡ ಹೇರಿದರೆ ಸಹಿಸುವುದಿಲ್ಲ. ನಿಯಮದ ಪ್ರಕಾರ ಎಲ್ಲವೂ ಸರಿಯಿದ್ದರೆ ಸಹಿ ಮಾಡಲು ಅಭ್ಯಂತರವಿಲ್ಲ’
ಇದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅವರು ಅಧಿಕಾರಿಗಳಿಗೆ ನೀಡಿದ ಖಡಕ್ ಎಚ್ಚರಿಕೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿ.ಪಂ ಅಧ್ಯಕ್ಷ ಎಚ್.ಸಿ.ರಾಜಣ್ಣ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚನ್ನಪಟ್ಟಣದ ಗ್ರಾಮವೊಂದರಲ್ಲಿ ಕೇವಲ 100 ಜನ ಇದ್ದಾರೆ. ಬರಗಾಲ ಎಂದು ಈ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ದಿನವೊಂದಕ್ಕೆ 4.5 ಲಕ್ಷ ಲೀಟರ್ ನೀರು ಸರಬರಾಜು ಮಾಡಲಾಗಿದೆ ಎಂಬ ಅಂಕಿ ಅಂಶ ಒದಗಿಸಲಾಗಿದೆ. ಇಷ್ಟು ಕಡಿಮೆ ಜನಸಂಖ್ಯೆ ಇರುವ ಊರಿಗೆ ಇಷ್ಟೊಂದು ನೀರನ್ನು ಏತಕ್ಕೆ ಸರಬರಾಜು ಮಾಡಲಾಯಿತು? ನಿಯಮವನ್ನು ಪಾಲಿಸದೆ ಬಿಲ್‌ಗಳನ್ನು ಸೃಷ್ಟಿ ಮಾಡಿದರೆ ಅದಕ್ಕೆಲ್ಲ ಸಹಿ ಮಾಡುವವನು ನಾನಲ್ಲ ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಟ್ಯಾಂಕರ್‌ಗಳಲ್ಲಿ ಸರಬರಾಜು ಮಾಡಿದ ನೀರಿನ ಬಿಲ್‌ಗಳಿಗೆ ಜಿಲ್ಲಾಧಿಕಾರಿ ಸಹಿ ಹಾಕದ ಕಾರಣ ಗುತ್ತಿಗೆದಾರರಿಗೆ ಹಣ ನೀಡಲಾಗಿಲ್ಲ ಎಂದು ಸಭೆಯಲ್ಲಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರಿಂದ, ಜಿಲ್ಲಾಧಿಕಾರಿ ಅವರು ಈ ರೀತಿ ಉತ್ತರಿಸಿದರು.
ಬರ ಪರಿಹಾರಕ್ಕೆಂದು ಸರ್ಕಾರ ನೀಡಿದ್ದ ₨1.20 ಕೋಟಿಯನ್ನು ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಿಗೆ ಬಿಡುಗಡೆ ಮಾಡಿ ತಿಂಗಳು ಕಳೆಯುತ್ತಿದೆ. ಆದರೆ ಒಂದೇ ಒಂದು ತಾಲ್ಲೂಕಿನಿಂದಲೂ ಕ್ರಿಯಾ ಯೋಜನೆ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.
ಬಿಡುಗಡೆ ಮಾಡಿರುವ ಹಣಕ್ಕೂ ಕ್ರಿಯಾಯೋಜನೆ ಸಲ್ಲಿಸಿಲ್ಲ. ಬರಪರಿಹಾರಕ್ಕೆ ಹಣದ ಕೊರತೆ ಇಲ್ಲ, ಆದರೆ ವ್ಯವಸ್ಥೆಯ ನಿಯಮಗಳನ್ನು ಪಾಲಿಸುವುದು ಮುಖ್ಯ ಎಂದು ಅವರು ಹೇಳಿದರು.
ವಿವಿಧ ಇಲಾಖೆಗಳಲ್ಲಿ ಅಗತ್ಯವಾಗಿ ಬೇಕಿರುವ ಪ್ರಮುಖ ಬೇಡಿಕೆಗಳ ಪ್ರಸ್ತಾವನೆ ಕೂಡಲೇ ಸರ್ಕಾರಿ ಕಳುಹಿಸಿ ಅನುಷ್ಠಾನಗೊಳಿಸಲು ಅಧ್ಯಕ್ಷ ಎಚ್.ಸಿ.ರಾಜಣ್ಣ ಅಧಿಕಾರಿಗಳಿಗೆ ಸೂಚಿಸಿದರು.
ಜಿ.ಪಂ ಉಪಾಧ್ಯಕ್ಷ ಎಸ್.ಬಿ.ಗೌರಮ್ಮ, ಉಪಕಾರ್ಯದರ್ಶಿ ಲತಾ, ಯೋಜನಾಧಿಕಾರಿ ಧನುಷ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.