ADVERTISEMENT

`ಅನಿತಾ ಕುಮಾರಸ್ವಾಮಿ ಅಭ್ಯರ್ಥಿಯಾಗಲಿ'

ಕನಕಪುರದಲ್ಲಿ ಪಿ.ಜಿ.ಆರ್.ಸಿಂಧ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 10:24 IST
Last Updated 1 ಆಗಸ್ಟ್ 2013, 10:24 IST

ಕನಕಪುರ: `ದುಡ್ಡಿನಿಂದ ರಾಜಕಾರಣ ಮಾಡಲು ಸಾಧ್ಯವಾಗುತ್ತಿದ್ದರೆ ಶ್ರೀಮಂತ ಉದ್ಯಮಿಗಳೇ ದೇಶದ ಪ್ರಧಾನಿ, ಮುಖ್ಯಮಂತ್ರಿಗಳಾಗುತ್ತಿದ್ದರು' ಎಂದು ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.

ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದ್ದ ಪಕ್ಷದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

`ಸೋನಿಯಾ ಗಾಂಧಿಯವರು ಡಿ.ಕೆ. ಶಿವಕುಮಾರ್ ಅವರನ್ನು ಕರೆಸಿಕೊಂಡು ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪ ಚುನಾವಣೆಯಲ್ಲಿ ಜೆ.ಡಿ.ಎಸ್ ಪಕ್ಷವನ್ನು ಸೋಲಿಸುವಂತೆ ಸೂಚನೆ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿನ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷವೇ ಹೆಚ್ಚು ಸ್ಥಾನ ಗೆದ್ದಿದೆ. ಹೀಗಾಗಿ ಪಕ್ಷಕ್ಕೆ ಉತ್ತಮ ಬೆಂಬಲವಿದೆ. ಜೆಡಿಎಸ್ ಪಕ್ಷವನ್ನು ಉಳಿಸುವುದು ಬಿಡುವುದು ಜನರ ಕೈಯಲ್ಲಿದೆ. ಈ ಉಪ ಚುನಾವಣೆಯಲ್ಲಿ ಯಾರನ್ನು ನಿಲ್ಲಿಸಬೇಕು ಎಂಬುದನ್ನು ಜನರೇ ತೀರ್ಮಾನಿಸಿ, ಅಭ್ಯರ್ಥಿಯನ್ನು ಗೆಲ್ಲಿಸಬೇಕು' ಎಂದು ಹೇಳಿದರು.

ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯ ಮಾತನಾಡಿ, `ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಬೇಕಾದರೆ ಅನಿತಾ ಕುಮಾರಸ್ವಾಮಿ ಅವರನ್ನೇ ಅಭ್ಯರ್ಥಿಯನ್ನಾಗಿಸಬೇಕು' ಎಂದು ಅಭಿಪ್ರಾಯಪಟ್ಟರು.

`ಕೇಂದ್ರದಲ್ಲಿ ತೃತಿಯ ರಂಗಕ್ಕೆ ಅವಕಾಶವಿದೆ. ರಾಜ್ಯದಿಂದ 15 ಸಂಸದರನ್ನು ಆಯ್ಕೆಮಾಡಿ ಕಳುಹಿಸಿದರೆ ಮತ್ತೊಮ್ಮೆ ದೇವೇಗೌಡ ಅವರು ಪ್ರಧಾನಿಯಾಗಲಿದ್ದಾರೆ' ಎಂದು ಭವಿಷ್ಯ ನುಡಿದರು.

ಮಾಜಿ ಶಾಸಕ ಕೆ.ಎಲ್.ಶಿವಲಿಂಗೇಗೌಡ, ಜೆ.ಡಿ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎಂ.ವಿಶ್ವನಾಥ್, ಬಿ.ಡಿ.ಸಿ.ಸಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾರಾಯಣ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತುಂಗಣಿ ಪುಟ್ಟಸ್ವಾಮಿ, ಹಲಸೂರು ಸಿದ್ದರಾಜು, ಪುರಸಭೆ ಮಾಜಿ ಅಧ್ಯಕ್ಷ ಬಿ.ನಾಗರಾಜು, ಮುಖಂಡರಾದ ದೊಡ್ಡಕೊಪ್ಪರಾಜು, ಸಿದ್ದಪ್ಪಾಜಿ, ಪುಟ್ಟಮಾದಯ್ಯ, ಚಿನ್ನಸ್ವಾಮಿ ಮಾತನಾಡಿ, ಈ ಚುನಾವಣೆಯಲ್ಲಿ ಪಕ್ಷ ಗೆದ್ದರೆ ಮಾತ್ರವೇ ಕನಕಪುರ ಕ್ಷೇತ್ರದಲ್ಲಿ ಪಕ್ಷದ ಅಸ್ತಿತ್ವ ಉಳಿಯುತ್ತದೆ. ವರಿಷ್ಠರು ಅಭ್ಯರ್ಥಿಯನ್ನಾಗಿ ಯಾರನ್ನೇ ಕಣಕ್ಕಿಳಿಸಿದರು ಎಲ್ಲರೂ ಒಗ್ಗಟ್ಟಾಗಿ ದುಡಿದು ಪಕ್ಷವನ್ನು ಗೆಲ್ಲಿಸಬೇಕು' ಎಂದರು.

ಮಾಜಿ ಶಾಸಕ ಕೆ.ರಾಜು, ಪಕ್ಷದ ರಾಜ್ಯ ಘಟಕದ ಹಿಂದುಳಿದ ವಿಭಾಗದ ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ, ತಾಲ್ಲೂಕು ಅಧ್ಯಕ್ಷ ಸಿದ್ದಮರೀಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹುಲಿಕೆರೆ ರಾಜಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕಬ್ಬಾಳೇಗೌಡ, ಮುಖಂಡರಾದ ಎಸ್.ಎಸ್.ಪರಶಿವಯ್ಯ, ಪುಟ್ಟರಾಜು, ಬಿ.ಎಸ್.ಗೌಡ, ಬೇಕರಿ ವೆಂಕಟಾಚಲಯ್ಯ, ಸ್ಟುಡಿಯೊ ಚಂದ್ರು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.