ADVERTISEMENT

ಅನಿಲ ಕೊಳವೆ ಮಾರ್ಗ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿ

​ಪ್ರಜಾವಾಣಿ ವಾರ್ತೆ
Published 31 ಮೇ 2012, 18:45 IST
Last Updated 31 ಮೇ 2012, 18:45 IST

ರಾಮನಗರ: ದಾಭೋಲ್‌ನಿಂದ ಬಿಡದಿಗೆ ಅನಿಲ ಕೊಳವೆ ಮಾರ್ಗ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದ್ದು, ಎರಡು-ಮೂರು ತಿಂಗಳಲ್ಲಿ ಮುಕ್ತಾಯವಾಗುವ ಲಕ್ಷಣಗಳು ಕಂಡು ಬರುತ್ತಿವೆ.

ಸುಮಾರು 745 ಕಿ.ಮೀ ಅಂತರದ ಕೊಳವೆ ಮಾರ್ಗದಲ್ಲಿ ಇದೀಗ ಬಾಕಿ ಇರುವುದು ಕೇವಲ ಏಳೂವರೆ ಕಿ.ಮಿ ಉದ್ದ ಮಾತ್ರ. ಅದನ್ನು ಒಂದೆರಡು ತಿಂಗಳಲ್ಲಿ ಮುಕ್ತಾಯಗೊಳಿಸುವ ಗುರಿಯನ್ನು ಗೇಲ್ (ಇಂಡಿಯಾ) ಕಂಪೆನಿ ಹೊಂದಿದೆ. ಆದರೆ, ಕೇಂದ್ರ ಸರ್ಕಾರ ಸದ್ಯಕ್ಕೆ ಅನಿಲ ಪೂರೈಸಲು ಆಗುವುದಿಲ್ಲ ಎಂದು ರಾಜ್ಯಕ್ಕೆ ತಿಳಿಸಿರುವುದರಿಂದ ಕೋಟ್ಯಂತರ ರೂಪಾಯಿ ವೆಚ್ಚದ ಈ ಯೋಜನೆಯ ಮೇಲೆ ಕಾರ್ಮೋಡ ಆವರಿಸಿದೆ.

ಎಲ್ಲವೂ ಪೂರ್ವ ಯೋಜನೆಯಂತೆ ನಡೆದಿದ್ದರೆ ಈ ವರ್ಷದ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಕೊಳವೆ ನಿರ್ಮಾಣ ಕಾರ್ಯ ಮುಕ್ತಾಯವಾಗಬೇಕಿತ್ತು. ದಾಭೋಲ್‌ನಿಂದ ರಾಮನಗರದ ಬಿಡದಿವರೆಗೂ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಉಂಟಾದ ಸಮಸ್ಯೆಗಳು, ಭೂ ಪರಿಹಾರ, ತೋಟಗಾರಿಕಾ ಬೆಳೆಗಳ ಪರಿಹಾರ ಮೊದಲಾದ ಗೊಂದಲಗಳಿಂದ ಕಾಮಗಾರಿ ಕೆಲ ಕಾಲ ವಿಳಂಬವಾಗಿದೆ ಎಂದು ಗೇಲ್ ಕಂಪೆನಿಯ ಹಿರಿಯ ಅಧಿಕಾರಿ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.

2010ರಲ್ಲಿ ಆರಂಭವಾದ ಈ ಕೊಳವೆ ಮಾರ್ಗದ ಯೋಜನೆ ಮಹಾರಾಷ್ಟ್ರದ ದಾಭೋಲ್‌ನಿಂದ ಆರಂಭವಾಗಿ ಕರ್ನಾಟಕದ ಬೆಳಗಾವಿ, ಗದಗ, ಧಾರವಾಡ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳನ್ನು ದಾಟಿ ರಾಮನಗರ ಪ್ರವೇಶಿಸಿದೆ. ರಾಮನಗರದ ಮಾಗಡಿ ತಾಲ್ಲೂಕಿನಲ್ಲಿಯೂ ಕೊಳವೆ ಮಾರ್ಗ ನಿರ್ಮಾಣವಾಗಿದೆ. ಬಿಡದಿ ವ್ಯಾಪ್ತಿಯ ಬಿಲ್ಲ ಕೆಂಪನಹಳ್ಳಿ, ಕೇತಗಾರನಹಳ್ಳಿ, ಬನ್ನಿಕುಪ್ಪೆ, ವಾಜರಹಳ್ಳಿ, ಕೊಡಿಯಾಲ ಕರೇನಹಳ್ಳಿ ಗ್ರಾಮಗಳಲ್ಲಿ ಮಾರ್ಗ ನಿರ್ಮಿಸಬೇಕಿದೆ. ಒಟ್ಟಾರೆ ರಾಜ್ಯದ 265 ಗ್ರಾಮಗಳಲ್ಲಿ 554.71 ಕಿ.ಮೀ ಉದ್ದದಲ್ಲಿ ಈ  ಮಾರ್ಗ ಬರಲಿದೆ ಎಂದು ಅವರು ವಿವರಿಸಿದರು.

ಇಲ್ಲಿ 15 ಮೀಟರ್ ಅಗಲ: ದಾಭೋಲ್‌ನಿಂದ ಮಾಗಡಿವರೆಗೆ ರೈತರ ಜಮೀನಿನಲ್ಲಿ 30 ಮೀಟರ್ ಅಗಲದ ಪ್ರದೇಶವನ್ನು ಗೇಲ್ ಕಂಪೆನಿ ತಾತ್ಕಾಲಿಕವಾಗಿ ವಶಪಡಿಸಿಕೊಂಡಿದೆ. ಇಲ್ಲಿನ ಜಮೀನಿನ ನಿಜವಾದ ಯಜಮಾನ ಜಮೀನಿನ ಮಾಲೀಕನೇ ಆಗಿದ್ದಾನೆ. ಜಮೀನಿನ ಸುಮಾರು 9 ಅಡಿ ಆಳದಲ್ಲಿ ಗೇಲ್ ಕಂಪೆನಿಯ ಅನಿಲ ಕೊಳವೆ ಮಾರ್ಗ ನಿರ್ಮಾಣವಾಗಿದೆ. ಬಿಡದಿ ಬಳಿಯ ಏಳೂವರೆ ಕಿ.ಮಿ ವ್ಯಾಪ್ತಿಯಲ್ಲಿ ಭೂಮಿಯ ಬೆಲೆ ಅಧಿಕವಿದ್ದು, ರೈತರು 30 ಮೀಟರ್ ಬಿಟ್ಟುಕೊಡಲು ನಿರಾಕರಿಸಿದ್ದಾರೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಮಾರ್ಗಸೂಚಿ ದರದ ನಾಲ್ಕು ಪಟ್ಟು ಬೆಲೆ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಬಿಡದಿಯ ಬಿಲ್ಲ ಕೆಂಪನಹಳ್ಳಿಯಲ್ಲಿ ಎರಡು-ಮೂರು ದಿನಗಳಲ್ಲಿ ರೈತರಿಗೆ ಪರಿಹಾರದ ಚೆಕ್ ನೀಡಿ, ಭೂ ಸ್ವಾಧೀನ ಪಡೆದು ಕೊಳವೆ ಮಾರ್ಗ ನಿರ್ಮಾಣ ಕಾರ್ಯ ತೆಗೆದುಕೊಳ್ಳಲಾಗುವುದು. ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡರೆ ಒಂದು ತಿಂಗಳಿನಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ.

ಗ್ರಾಹಕರು ಸಿದ್ಧ: ಅಂದಾಜು ರೂ 4,500 ಕೋಟಿ  ವೆಚ್ಚದ ಈ ಯೋಜನೆಯಿಂದ ರಾಜ್ಯದ ಜನತೆಗೆ, ಕೈಗಾರಿಕೆಗಳಿಗೆ ಉಪಯೋಗವಾಗಲಿದೆ. ಬಿಡದಿ- ಹಾರೋಹಳ್ಳಿ ರಸ್ತೆಯಲ್ಲಿ `ಗೇಲ್~ ಕಂಪೆನಿ ತನ್ನ ಘಟಕವನ್ನು ನಿರ್ಮಿಸುತ್ತಿದೆ. ಈಗಾಗಲೇ ಇಲ್ಲಿಂದ ಅನಿಲ ಖರೀದಿಸಲು ಟೊಯೊಟಾ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಬೆಳಗಾವಿಯ ಕಾರ್ಖಾನೆಗಳು, ಬೆಂಗಳೂರಿನ ಐ.ಟಿ ಪಾರ್ಕ್‌ನ ಕಂಪೆನಿಗಳು ಮುಂದಾಗಿವೆ. ರಾಜ್ಯ ಸರ್ಕಾರ 1400 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಯೋಜನೆ ಹಮ್ಮಿಕೊಂಡಿದೆ.

ಅನಿಲ ಕೊಳವೆ ನಿರ್ಮಾಣ ಮಾರ್ಗ ಅಂತಿಮ ಹಂತ ತಲುಪಿರುವುದು ಅಧಿಕಾರಿಗಳಲ್ಲಿ ಸಂತಸ ಮೂಡಿಸಿದೆ. ಆದರೆ ಅನಿಲ ಖರೀದಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ದೇಶದಲ್ಲಿ ಪೂರೈಕೆಯಾಗುತ್ತಿರುವ ಅನಿಲದಿಂದ ಬಿಡದಿ ಸ್ಥಾವರಕ್ಕೆ ಅನಿಲ ಪೂರೈಸಲು ಆಗುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಹೆಚ್ಚು ಚಿಂತನೆಗಳು ನಡೆಯುತ್ತಿವೆ.

ದೇಶದಲ್ಲಿ ದೊರೆಯುವ ನೈಸರ್ಗಿಕ ಸಂಪನ್ಮೂಲದ ಮೇಲೆ ದೇಶದ ಎಲ್ಲ ರಾಜ್ಯಗಳ ಪ್ರಜೆಯ ಹಕ್ಕು ಇರುತ್ತದೆ. ಅದು ಸಮನಾಗಿ ಹಂಚಿಕೆಯಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಇಲ್ಲಿಯವರೆಗೆ ಕರ್ನಾಟಕಕ್ಕೆ ಪ್ರತ್ಯೇಕವಾದ ಅನಿಲ ಕೊಳವೆ ಮಾರ್ಗ ಇರಲಿಲ್ಲ. ಹಾಗಾಗಿ ಈ ಪ್ರಶ್ನೆ ಉದ್ಭವಿಸಿರಲಿಲ್ಲ. ಇದೀಗ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕೊಳವೆ ಮಾರ್ಗ ನಿರ್ಮಿಸಲಾಗಿದ್ದು, ರಾಜ್ಯದ ಪಾಲಿಗೆ ದೊರೆಯಬೇಕಾದ ಅನಿಲದ ಪಾಲನ್ನು ಕೇಂದ್ರ ಸರ್ಕಾರ ನೀಡಲೇ ಬೇಕಾಗುತ್ತದೆ. ಇದಕ್ಕೆ ರಾಜ್ಯ ಸರ್ಕಾರ ಕೇಂದ್ರದ ಮೇಲೆ ತೀವ್ರ ಒತ್ತಡ ಹೇರಬೇಕಾದ ಅಗತ್ಯ ಇದೆ ಎಂದು ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.